Advertisement

ಕಾಶ್ಮೀರದ ಶಾರದಾ ದೇಗುಲಕ್ಕೆ ಶೃಂಗೇರಿ ಮಠದಿಂದ ವಿಗ್ರಹ 

12:10 AM Feb 04, 2022 | Team Udayavani |

ಶೃಂಗೇರಿ: ಶಾರದೆಯ ಮೂಲನೆಲೆ ಎಂದೇ ಭಾರತೀಯರು ಭಾವಿಸಿರುವ ಶಾರದಾ ಪೀಠದಲ್ಲಿ ದೇವಿಯ ದೇವಸ್ಥಾನ ನಿರ್ಮಾಣವಾಗಬೇಕೆನ್ನುವುದು ಕೋಟ್ಯಂತರ ಭಾರತೀಯರ ಕನಸು. ಆದರೆ ಅದು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಇರುವುದರಿಂದ ಅದಕ್ಕೆ ಕಾಲ ಕೂಡಿ ಬರಬೇಕಿದೆ. ಹಾಗೆಂದು ನಿರಾಶೆ ಪಡುವ ಅಗತ್ಯವಿಲ್ಲ, ಪಾಕ್‌ ಆಕ್ರಮಿತ ಕಾಶ್ಮೀರದ ಗಡಿರೇಖೆಗೆ ಸನಿಹ ವಿರುವ ತೀತ್ವಾಲ್‌ (ಜಮ್ಮುಕಾಶ್ಮೀರದ ಕುಪ್ವಾರಾ ಜಿಲ್ಲೆ) ಎಂಬ ಊರಿನಲ್ಲಿ ಶಾರದೆಯ ದೇಗುಲ ನಿರ್ಮಾಣ ವಾಗಲಿದೆ. ಅಲ್ಲಿಗೆ ಬೇಕಾದ ವಿಗ್ರಹ ನೀಡಲು ಶೃಂಗೇರಿ ಶಾರದಾಮಠದ ಜಗದ್ಗುರುಗಳಾದ ಶ್ರೀ ಭಾರತೀತೀರ್ಥರು ಸಮ್ಮತಿಸಿದ್ದಾರೆ.

Advertisement

ವಿಶೇಷವೆಂದರೆ ಹಿಂದೆ ಶಾರದಾ ಪೀಠದಲ್ಲಿದ್ದ ಮೂಲ ವಿಗ್ರಹ ಪ್ರಸ್ತುತ ಶೃಂಗೇರಿಯ ವಿದ್ಯಾಶಂಕರ ದೇವಸ್ಥಾನ ದಲ್ಲಿದೆ. ಅದನ್ನೇ ಹೋಲುವ ವಿಗ್ರಹವನ್ನು ಶ್ರೀಮಠ ದಿಂದ ನಿರ್ಮಾಣ ಮಾಡಿ ಕೊಡ ಲಾಗುತ್ತದೆ. ಹೀಗೆಂದು ಭಾರತೀ ತೀರ್ಥ ಶ್ರೀಗಳು, ವಿಧು ಶೇಖರ ಭಾರತೀ ಶ್ರೀಗಳು, ಕಾಶ್ಮೀರದ ಶ್ರೀ ಶಾರದಾ ಸೇವಾ ಸಮಿತಿಯ ಅಧ್ಯಕ್ಷ ರವೀಂದ್ರ ಪಂಡಿತ ನೇತೃತ್ವದ ಸಮಿತಿಗೆ ಭರವಸೆ ನೀಡಿದ್ದಾರೆ. ಈ ಬಗ್ಗೆ ಸಭೆ ನಡೆದು ಅಲ್ಲಿ ತೀರ್ಮಾನವಾಗಿದೆ.

ಸರ್ವಜ್ಞ ಪೀಠದ ವಾಸ್ತುಶಿಲ್ಪ:

ಕಳೆದ ಡಿ. 2ರಂದು ಇದಕ್ಕೆ ಭೂಮಿಪೂಜೆ ನೆರವೇರಿಸಲಾಗಿದೆ. ನೂತನ ಶಾರದಾ ದೇಗುಲದ ವಾಸ್ತುಶಿಲ್ಪವೂ ಹಿಂದಿನ ಸರ್ವಜ್ಞ ಪೀಠದ ಮಾದರಿಯಲ್ಲೇ ಇರಲಿದೆ. ಕಲ್ಲುಗಳಿಂದ ನಿರ್ಮಾಣವಾಗಲಿದೆ, ನಾಲ್ಕು ದಿಕ್ಕಿಗೂ ನಾಲ್ಕು ಬಾಗಿಲು ಇರಲಿದೆ. ಭಕ್ತರು ಚಳಿಗಾಲ ಬಿಟ್ಟು ಬೇರೆ ಸಮಯದಲ್ಲಿ ದೇವಿಯ ದರ್ಶನ ಪಡೆಯಬಹುದಾಗಿದೆ. ತೀತ್ವಾಲ್‌ ಊರಿನ ಸಮೀಪ ಕಿಶನ್‌ಗಂಗಾ ನದಿ ಹರಿಯು ತ್ತಿದೆ. ಹಿಂದೆ ಪಾಕ್‌ ಆಕ್ರಮಿತ ಕಾಶ್ಮೀರದ ಶಾರದಾ ಪೀಠಕ್ಕೆ ಈ ಊರಿನಿಂದಲೇ ಯಾತ್ರೆ ಆರಂಭವಾಗುತ್ತಿತ್ತು.

ಯಾವ ವಿಗ್ರಹ? :

Advertisement

1,200 ವರ್ಷಗಳ ಹಿಂದೆ ಶ್ರೀ ಶಂಕರಾಚಾರ್ಯರು ಪ್ರಸ್ತುತ ಪಾಕ್‌ ಆಕ್ರಮಿತ ಕಾಶ್ಮೀರದ ಶಾರದಾ ಪೀಠದಿಂದ ಶಾರದಾ ಮಾತೆಯ ವಿಗ್ರಹವನ್ನು ತಂದಿದ್ದರು ಎಂಬ ಐತಿಹ್ಯವಿದೆ. ಅದು ಶ್ರೀಗಂಧದ ವಿಗ್ರಹ. ಅದೀಗ ಶೃಂಗೇರಿಯ ವಿದ್ಯಾಶಂಕರ ದೇವಸ್ಥಾನದಲ್ಲಿದೆ. ಅದನ್ನೇ 1,200 ವರ್ಷಗಳ ಹಿಂದೆ ಶ್ರೀಗಳು ಪ್ರತಿಷ್ಠಾಪಿಸಿದ್ದರು. ಕಾಶ್ಮೀರದಿಂದ ಆಗಮಿಸಿದ್ದ ಸಮಿತಿ, ಈ ವಿಗ್ರಹದ ಪ್ರತಿರೂಪವನ್ನೇ ಕೇಳಿದೆ. ಇದಕ್ಕೆ ಶ್ರೀಗಳು ಒಪ್ಪಿದ್ದಾರೆ.

650 ವರ್ಷಗಳ ಹಿಂದೆ ಶೃಂಗೇರಿ ಮಠದ 12ನೇ ಪೀಠಾಧಿಪತಿಗಳಾದ ವಿದ್ಯಾರಣ್ಯರು ಪಂಚಲೋಹದ ಹೊಸ ವಿಗ್ರಹವನ್ನು ಪ್ರತಿಷ್ಠಾಪಿಸಿದ್ದರು. ಪ್ರಸ್ತುತ ಸರಸ್ವತೀ ಮಂದಿರದಲ್ಲಿ ಪೂಜಿಸಲ್ಪಡುತ್ತಿರುವುದು ಈ ವಿಗ್ರಹ. ಆದರೆ ಈ ವಿಗ್ರಹದ ಪ್ರತಿರೂಪವನ್ನು ಕಾಶ್ಮೀರ ಸಮಿತಿ ಕೇಳಿಲ್ಲ.

ಗಂಧದ ವಿಗ್ರಹ ಹೇಗಿದೆ? :

ವಿದ್ಯಾಶಂಕರ ದೇಗುಲ ದಲ್ಲಿ ರುವ ಶ್ರೀಗಂಧದ ವಿಗ್ರಹ ಮೂರು ಅಡಿ ಎತ್ತರ, ಎರಡು ಅಡಿ ಅಗಲವಿದೆ. ಬಲ ಭಾಗದ ಒಂದು ಕೈಯಲ್ಲಿ ಗಿಳಿ, ಇನ್ನೊಂದು ಕೈಯಲ್ಲಿ ಅಭಯ ಹಸ್ತವಿದೆ. ಎಡಭಾಗದ ಒಂದು ಕೈಯಲ್ಲಿ ಸ್ಫಟಿಕದ ಜಪಮಾಲೆ, ಇನ್ನೊಂದು ಕೈಯಲ್ಲಿ ಪುಸ್ತಕವಿದೆ.

Advertisement

Udayavani is now on Telegram. Click here to join our channel and stay updated with the latest news.

Next