ಮಂಗಳೂರು: ಸಿ.ಐ.ಡಿ. ವಿಭಾಗದ ಎಡಿಜಿಪಿ ಪ್ರತಾಪ ರೆಡ್ಡಿ ಅವರು ರವಿವಾರ ಮಂಗಳೂರಿಗೆ ಆಗಮಿಸಿದ್ದು, ದಕ್ಷಿಣ ಕನ್ನಡ ಜಿಲ್ಲಾ ಮತ್ತು ಮಂಗಳೂರು ನಗರ ಪೊಲೀಸ್ ಅಧಿಕಾರಿಗಳ ಜತೆ ಜಿಲ್ಲೆಯ ವಿವಿಧ ವಿದ್ಯಮಾನಗಳ ಬಗ್ಗೆ ಮಾತುಕತೆ ನಡೆಸಿದರು.
ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗ ಮಿಸಿದ್ದ ಅವರು ಸಂಜೆ ಹೊತ್ತು ಜಿಲ್ಲೆಯ ಪೊಲೀಸ್ ಅಧಿಕಾರಿಗಳ ಜತೆ ವಿಶೇಷವಾಗಿ ಶರತ್ ಮಡಿವಾಳ ಹತ್ಯೆ ಪ್ರಕರಣದ ತನಿಖೆಯ ಕುರಿತಂತೆ ಚರ್ಚಿಸಿದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಶರತ್ ಕೊಲೆ ಪ್ರಕರಣ ನಡೆದು ಮೂರು ವಾರ ಕಳೆದಿದ್ದು, ಇನ್ನೂ ಆರೋಪಿಗಳ ಪತ್ತೆಯಾಗಿಲ್ಲ. ಐದು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ವಿವಿಧ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ಈಗಾಗಲೇ 12ಕ್ಕೂ ಹೆಚ್ಚು ಮಂದಿ ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಕೆಲವರ ವಿಚಾರಣೆಯಿಂದ ಕೆಲವೊಂದು ಸುಳಿವುಗಳ ಲಭ್ಯವಾಗಿದ್ದರೂ ಯಾವೂದೂ ಅಂತಿಮಗೊಂಡಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ತನ್ಮಧ್ಯೆ ಪ್ರಕರಣವನ್ನು ಎನ್‌ಐಎಗೆ ಒಪ್ಪಿಸು ವಂತೆ ಒತ್ತಡಗಳು ಬರುತ್ತಿವೆ. ಒಂದೆರಡು ದಿನಗಳಲ್ಲಿ ಈ ಬಗ್ಗೆ ಆದೇಶ ಆಗ ಬಹುದೆಂದು ಮೂಲಗಳು ವಿವರಿಸಿವೆ. ರಾಜ್ಯ ಸರಕಾರ ಇದಕ್ಕೆ ಒಪ್ಪಿಗೆ ನೀಡ ದಿದ್ದರೆ ಕೇಂದ್ರ ಸರಕಾರವು ನ್ಯಾಯಾಲಯದ ಆದೇಶ ತಂದು ಎನ್‌ಐಎಗೆ ಒಪ್ಪಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. ಸಿಐಡಿ ಎಡಿಜಿಪಿ ಅವರು ಮಂಗಳೂರಿಗೆ ಆಗಮಿಸಿ ಚರ್ಚಿಸುತ್ತಿರುವುದನ್ನು ಗಮನಿಸಿದರೆ ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸುವ ಬಗ್ಗೆ ಸರಕಾರ ಚಿಂತನೆ ನಡೆಸುತ್ತಿದೆಯೇ ಎಂಬ ಸಂಶಯವನ್ನು ಹುಟ್ಟು ಹಾಕಿದೆ.
ಪ್ರತಾಪ ರೆಡ್ಡಿ ಅವರು ಈ ಹಿಂದೆ ಮಂಗಳೂರಿನಲ್ಲಿ ಪಶ್ಚಿಮ ವಲಯದ ಐಜಿಪಿಯಾಗಿ ಸೇವೆ ಸಲ್ಲಿಸಿದ್ದರು.