Advertisement

ಆರ್‌ಜೆಡಿಯಲ್ಲಿ ಎಲ್‌ಜೆಡಿ ವಿಲೀನ: ಬಿಜೆಪಿಯನ್ನು ಸೋಲಿಸಲು ಎಂದ ಶರದ್ ಯಾದವ್

04:45 PM Mar 20, 2022 | Team Udayavani |

ನವದೆಹಲಿ: ಮಾಜಿ ಕೇಂದ್ರ ಸಚಿವ ಶರದ್ ಯಾದವ್ ಅವರು ತಮ್ಮ ಲೋಕತಾಂತ್ರಿಕ ಜನತಾ ದಳವನ್ನು (ಎಲ್‌ಜೆಡಿ) ಲಾಲು ಪ್ರಸಾದ್ ಯಾದವ್ ನೇತೃತ್ವದ ರಾಷ್ಟ್ರೀಯ ಜನತಾ ದಳದೊಂದಿಗೆ (ಆರ್‌ಜೆಡಿ) ವಿಲೀನಗೊಳಿಸಿದ್ದಾರೆ.

Advertisement

ನಮ್ಮ ಪಕ್ಷವನ್ನು ಆರ್‌ಜೆಡಿಯೊಂದಿಗೆ ವಿಲೀನಗೊಳಿಸುವುದು ಪ್ರತಿಪಕ್ಷಗಳ ಒಗ್ಗಟ್ಟಿನ ಮೊದಲ ಹೆಜ್ಜೆಯಾಗಿದೆ. ಬಿಜೆಪಿಯನ್ನು ಸೋಲಿಸಲು ಎಲ್ಲಾ ಪ್ರತಿಪಕ್ಷಗಳು ಒಂದಾಗುವುದು ಅನಿವಾರ್ಯವಾಗಿದೆ. ಸದ್ಯಕ್ಕೆ ಏಕೀಕರಣವೇ ನಮ್ಮ ಆದ್ಯತೆ, ಆ ಬಳಿಕವೇ ಅವಿರೋಧ ವಿರೋಧ ಪಕ್ಷದ ನೇತೃತ್ವ ವಹಿಸುವ ಬಗ್ಗೆ ಚಿಂತನೆ ನಡೆಸುತ್ತೇವೆ ಎಂದು ಯಾದವ್ ಹೇಳಿದರು.

ಇದು ಹಿಂದಿನ ಜನತಾ ದಳದ ವಿವಿಧ ಸಂಘಟನೆಗಳನ್ನು ಒಗ್ಗೂಡಿಸುವ ಅವರ ಪ್ರಯತ್ನದ ಭಾಗವಾಗಿದೆ ಎಂದು ಶರದ್ ಯಾದವ್ ಹೇಳಿದ್ದಾರೆ. ದೇಶದಲ್ಲಿ ಪ್ರಬಲ ಪ್ರತಿಪಕ್ಷವನ್ನು ಸ್ಥಾಪಿಸುವುದು ಇಂದಿನ ಅಗತ್ಯವಾಗಿದೆ. ಅದಕ್ಕಾಗಿಯೇ ನಾನು ಈ ಹಿಂದಿನ ಜನತಾದಳದೊಂದಿಗೆ ಇದ್ದೇನೆ. ನಾನು ಇತರ ಸಮಾನ ಮನಸ್ಕ ಪಕ್ಷಗಳನ್ನು ಒಗ್ಗೂಡಿಸಲು ಬಹಳ ಸಮಯದಿಂದ ಕೆಲಸ ಮಾಡುತ್ತಿದ್ದೇನೆ ಎಂದರು.

ಜನರ ಬೇಡಿಕೆ

ಶರದ್ ಯಾದವ್ ಅವರು ತೆಗೆದುಕೊಂಡ ನಿರ್ಧಾರ ಜನರ ಬೇಡಿಕೆಯಾಗಿತ್ತು. ಇದು ಇತರ ವಿರೋಧ ಪಕ್ಷಗಳಿಗೆ ಉತ್ತಮ ಸಮಯ, 2019 ರಲ್ಲಿ ನಾವು ಒಂದಾಗಬೇಕಿತ್ತು ಆದರೆ ತಡವಾದರೂ ಉತ್ತಮ ಎಂದು ಸಂದೇಶವನ್ನು ನೀಡಿದೆ ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಹೇಳಿದ್ದಾರೆ.

Advertisement

ಭಾರಿ ಸಂಘರ್ಷ

1997ರಲ್ಲಿ ರಾಷ್ಟ್ರಪತಿ ಹುದ್ದೆಗೆ ಸಂಬಂಧಿಸಿದಂತೆ ಲಾಲು-ಶರದ್ ನಡುವೆ ಭಾರಿ ಸಂಘರ್ಷ ನಡೆದಿತ್ತು. ಜನತಾದಳದ ಅಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದಂತೆ ಲಾಲು ಯಾದವ್ ಮತ್ತು ಶರದ್ ಯಾದವ್ ನಡುವೆ ಜಗಳ ನಡೆದಿತ್ತು. ಆಗ ಜನತಾದಳದ ಕಾರ್ಯಾಧ್ಯಕ್ಷ ಶರದ್ ಯಾದವ್ ಆಗಿದ್ದರು. ರಾಷ್ಟ್ರಪತಿ ಹುದ್ದೆಗೆ ಶರದ್ ಯಾದವ್ ಅವರಿಗೆ ಲಾಲು ಪ್ರಸಾದ್ ಯಾದವ್ ಸವಾಲು ಹಾಕಿದರು. ಈ ಚುನಾವಣೆಗೆ ಲಾಲು ಪ್ರಸಾದ್ ಯಾದವ್ ಅವರು ತಮ್ಮ ಸಹೋದ್ಯೋಗಿ ರಘುವಂಶ ಪ್ರಸಾದ್ ಸಿಂಗ್ ಅವರನ್ನು ಚುನಾವಣಾಧಿಕಾರಿಯನ್ನಾಗಿ ಮಾಡಿದ್ದರೆ, ಶರದ್ ಯಾದವ್ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು ಮತ್ತು ಸುಪ್ರೀಂ ಕೋರ್ಟ್ ರಘುವಂಶ ಪ್ರಸಾದ್ ಸಿಂಗ್ ಅವರನ್ನು ವಜಾಗೊಳಿಸಿ ಮಧು ದಂಡಾವತ್ ಅವರನ್ನು ಚುನಾವಣಾಧಿಕಾರಿಯನ್ನಾಗಿ ಮಾಡಿತ್ತು. ಪಕ್ಷದ ಕಾರ್ಯಾಧ್ಯಕ್ಷರಾಗಿರುವಾಗಲೇ ಪಕ್ಷದ ಕಾರ್ಯಕಾರಿ ಸಮಿತಿಯಲ್ಲಿ ಶರದ್ ಯಾದವ್ ತಮ್ಮ ಬೆಂಬಲಿಗರ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದ್ದರು, ಚುನಾವಣೆಗೆ ಸ್ಪರ್ಧಿಸಿದರೆ ಸೋಲುತ್ತೇವೆ ಎಂಬ ಆಲೋಚನೆ ಲಾಲು ಪ್ರಸಾದ್ ಯಾದವ್ ಅವರಿಗಿತ್ತು. ಹೀಗಾಗಿ ಪ್ರತ್ಯೇಕ ಪಕ್ಷ ರಾಷ್ಟ್ರೀಯ ಜನತಾ ದಳ ರಚಿಸಲು ಲಾಲು ನಿರ್ಧರಿಸಿದ್ದರು.

ಶರದ್ ಯಾದವ್ ಲಾಲು ಪ್ರತಿಸ್ಪರ್ಧಿ ಎಂದು ಗುರುತಿಸಿಕೊಂಡಿದ್ದರು. ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರು 1997 ರಲ್ಲಿ ಜನತಾ ದಳವನ್ನು ತೊರೆದರು ಮತ್ತು ಅದರ ನಾಯಕತ್ವದೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ತಮ್ಮದೇ ಆದ ಪಕ್ಷವನ್ನು ರಚಿಸಿದರು, ಮೇವು ಹಗರಣದ ವಿರುದ್ಧದ ತನಿಖೆಯು ವೇಗವಾಯಿತು, ಅದರಲ್ಲಿ ಅವರು ಪ್ರಮುಖ ಆರೋಪಿಯಾಗಿದ್ದರು. ಶರದ್ ಯಾದವ್ ನಂತರ ಜನತಾ ದಳದಲ್ಲಿ ಅವರ ಪ್ರತಿಸ್ಪರ್ಧಿಯಾಗಿ ಕಾಣಿಸಿಕೊಂಡರು ಮತ್ತು 2005 ರಲ್ಲಿ ಬಿಹಾರದಲ್ಲಿ ಆರ್ ಜೆಡಿ ಯ 15 ವರ್ಷಗಳ ಆಡಳಿತವನ್ನು ಕೊನೆಗೊಳಿಸುವ ಅಭಿಯಾನದಲ್ಲಿ ನಿತೀಶ್ ಕುಮಾರ್ ಅವರನ್ನು ಸೇರಿಕೊಂಡಿದ್ದರು.

2018ರಿಂದ ಏಕಾಂಗಿಯಾಗಿದ್ದು, ಚುನಾವಣೆಗೆ ಸ್ಪರ್ಧಿಸದಿರುವ 74 ವರ್ಷದ ಶರದ್ ಯಾದವ್ ಅವರು 2018 ರಲ್ಲಿ ನಿತೀಶ್ ಕುಮಾರ್ ಅವರಿಂದ ಬೇರ್ಪಟ್ಟು ಪ್ರಜಾಸತ್ತಾತ್ಮಕ ಜನತಾ ದಳವನ್ನು ಸ್ಥಾಪಿಸಿದ್ದರು. ಆದರೆ, ಅಂದಿನಿಂದ ಅವರ ರಾಜಕೀಯ ಪತನವೂ ಆರಂಭವಾಗಿತ್ತು. ಜೆಡಿಯುನಿಂದ ಬೇರ್ಪಟ್ಟ ನಂತರ ಅವರು 2019 ರ ಲೋಕಸಭೆ ಚುನಾವಣೆಯಲ್ಲಿ ಆರ್‌ಜೆಡಿ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದರು. 2020 ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಅವರ ಪುತ್ರಿ ಸುಹಾಸಿನಿ ಯಾದವ್ ಕೂಡ ಆರ್‌ಜೆಡಿ ಟಿಕೆಟ್‌ನಲ್ಲಿ ಸ್ಪರ್ಧಿಸಿ ಸೋಲು ಅನುಭವಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next