ಹೊಸದಿಲ್ಲಿ: ಮಹಾರಾಷ್ಟ್ರದಲ್ಲಿ ಶರದ್ ಪವಾರ್ ಅವರ ಎನ್ ಸಿಪಿ ಪಕ್ಷವು ಕಾಂಗ್ರೆಸ್ ಮತ್ತು ಶಿವಸೇನೆಗೆ ನೀಡಿರುವ ಬೆಂಬಲವನ್ನು ಹಿಂಪಡೆದು ಬಿಜೆಪಿಯೊಂದಿಗೆ ಸೇರಿ ಸರ್ಕಾರ ರಚಿಸಬೇಕು ಎಂದು ಕೇಂದ್ರ ಸಚಿವ ರಾಮದಾಸ್ ಅಠಾವಳೆ ಹೇಳಿದ್ದಾರೆ.
ಶರದ್ ಪವಾರ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಚರ್ಚೆ ನಡೆಸಿದ ಒಂದು ದಿನದ ಬಳಿಕ, ಅಠಾವಳೆ ಅವರು ಎನ್ ಸಿಪಿ ಪಕ್ಷವು ಎನ್ ಡಿಎ ಜೊತೆ ಸೇರಬೇಕೆಂದು ಹೇಳಿರುವುದು ರಾಜಕೀಯವಾಗಿ ಕುತೂಹಲಕ್ಕೆ ಕಾರಣವಾಗಿದೆ.
ಸೈದ್ಧಾಂತಿಕ ಮತ್ತು ರಾಜಕೀಯ ಭಿನ್ನಾಭಿಪ್ರಾಯಗಳಿಂದಾಗಿ ಎರಡು ಪಕ್ಷಗಳು ಒಗ್ಗೂಡುವುದಿಲ್ಲ ಎಂದು ಎನ್‌ಸಿಪಿ ನಾಯಕ ಮತ್ತು ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರ ಮಾತುಗಳ ಕುರಿತು ಪ್ರತಿಕ್ರಿಯೆ ನೀಡಿದ ರಾಮದಾಸ್ ಅಠಾವಳೆ, “ಶಿವಸೇನೆ, ಕಾಂಗ್ರೆಸ್ ಮತ್ತು ಬಿಜೆಪಿ ಕೂಡ ನದಿಯ ವಿವಿಧ ತೀರಗಳಂತಿದ್ದವು, ಆದರೆ ಅವು ಒಟ್ಟಿಗೆ ಬಂದವು. ಬಿಜೆಪಿ ಮತ್ತು ಎನ್‌ಸಿಪಿ ಒಟ್ಟಿಗೆ ಸೇರುವುದಿಲ್ಲವೇ? ಅಂಬೇಡ್ಕರ್ ರೂಪಿಸಿದ ಸಂವಿಧಾನವು ವಿಭಿನ್ನ ಬದಿಗಳನ್ನು ಒಂದುಗೂಡಿಸಲು ಪ್ರಯತ್ನಿಸುತ್ತದೆ ಎಂದಿದ್ದಾರೆ.
ಇದನ್ನೂ ಓದಿ:ಅಫ್ಘಾನ್ ನ ಭಾರತದ ಆಸ್ತಿಗಳನ್ನು ಗುರಿಯಾಗಿಸಲು ತಾಲಿಬಾನ್, ಪಾಕ್ ಬಂಡುಕೋರರಿಗೆ ಐಎಸ್ಐ ಸೂಚನೆ!
“ಶರದ್ ಪವಾರ್ ಜಿ ಅವರು ತಮ್ಮ ನಿರ್ಧಾರವನ್ನು ಬದಲಾಯಿಸಬೇಕೆಂದು ನಾನು ವಿನಂತಿಸುತ್ತೇನೆ. ಅವರು ಶಿವಸೇನೆಗೆ ನೀಡಿದ ಬೆಂಬಲವನ್ನು ಹಿಂತೆಗೆದು ಕೊಳ್ಳಬೇಕು. ಕಾಂಗ್ರೆಸ್ ಪಕ್ಷವು ನಿಮಗೆ ಪದೇ ಪದೇ ಎಚ್ಚರಿಕೆ ನೀಡುತ್ತಿದೆ. ಕಾಂಗ್ರೆಸ್ ನ ನಾನಾ ಪಟೋಲೆ ಅವರು ಪವಾರ್ ವಿರುದ್ಧ ಪದೇ ಪದೇ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅದಕ್ಕಾಗಿಯೇ ಶರದ್ ಪವಾರ್ ಎನ್‌ಡಿಎ ಜೊತೆ ಬರಬೇಕೆಂದು ನಾನು ಭಾವಿಸುತ್ತೇನೆ” ಎಂದು ಮೋದಿ ಸಂಪುಟದ ಸಚಿವ ಅಠಾವಳೆ ಹೇಳಿದ್ದಾರೆ.
“ಎನ್‌ಸಿಪಿ ಮತ್ತು ಶರದ್ ಪವಾರ್ ಅವರ ಕಾರಣದಿಂದಾಗಿ ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲ ಮಹಾರಾಷ್ಟ್ರದಲ್ಲಿ ಶಿವಸೇನೆಗೆ ಕಾಂಗ್ರೆಸ್ ಬೆಂಬಲ ನೀಡಿದೆ. ಆದರೆ, ಸರ್ಕಾರವು ಅದನ್ನು ನಡೆಯಬೇಕಾದ ರೀತಿಯಲ್ಲಿ ನಡೆಯುತ್ತಿಲ್ಲ.” ಎಂದು ಅವರು ಹೇಳಿದ್ದಾರೆ.