ಹೊಸದಿಲ್ಲಿ: ಮುಂದಿನ ತಿಂಗಳು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವ ಉತ್ತಮ ಅವಕಾಶವಿದೆ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ಶುಕ್ರವಾರ ತಿಳಿಸಿದ್ದಾರೆ.
ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಮುಂದಿನ ವರ್ಷ ನಡೆಯಲಿರುವ ರಾಷ್ಟ್ರೀಯ ಚುನಾವಣೆಯ ದೃಷ್ಟಿಕೋನದಿಂದ ಕರ್ನಾಟಕ ಚುನಾವಣೆಯನ್ನು ನೋಡಲಾಗುವುದಿಲ್ಲ ಎಂದರು.
“ಎರಡು ರೀತಿಯ ಚುನಾವಣೆಗಳಿವೆ. ಕೇಂದ್ರ ಸರ್ಕಾರಕ್ಕೆ ರಾಷ್ಟ್ರೀಯ ಚುನಾವಣೆ ಮತ್ತು ರಾಜ್ಯಗಳಿಗೆ ಚುನಾವಣೆ. ನನ್ನ ವೈಯಕ್ತಿಕ ಲೆಕ್ಕಾಚಾರವನ್ನು ನೀವು ಒಪ್ಪದಿರಬಹುದು, ಆದರೆ ರಾಜ್ಯ ಚುನಾವಣೆಗಳು ಸಂಪೂರ್ಣ ಭಿನ್ನವಾಗಿದೆ” ಎಂದರು.
“ಕೇರಳ, ತಮಿಳುನಾಡು, ಆಂಧ್ರಪ್ರದೇಶ ಬಿಜೆಪಿ ಸರ್ಕಾರಗಳಲ್ಲ. ಕರ್ನಾಟಕದಲ್ಲಿ ಚುನಾವಣೆ ಇದೆ ಮತ್ತು ಕಾಂಗ್ರೆಸ್ ಗೆಲ್ಲುತ್ತದೆ ಎಂಬುದು ನನ್ನ ಲೆಕ್ಕಾಚಾರ” ಎಂದು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ನ ಮಿತ್ರ ಪಕ್ಷವಾಗಿರುವ ಎನ್‌ಸಿಪಿ ಮುಖ್ಯಸ್ಥ ಪವಾರ್ ಹೇಳಿದ್ದಾರೆ.
ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯೇತರ ಪಕ್ಷಗಳು ಹೇಗೆ ಗೆಲುವು ಸಾಧಿಸಿವೆ ಎಂಬುದನ್ನು ವಿವರಿಸಿದ ಅವರು, “ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರವಿತ್ತು, ಕಮಲ್ ನಾಥ್ ಮುಖ್ಯಮಂತ್ರಿಯಾಗಿದ್ದರು, ಆದರೆ ಶಾಸಕರನ್ನು ಒಡೆದ ಬಿಜೆಪಿ ನಂತರ ಸರ್ಕಾರ ರಚಿಸಿತು, ರಾಜಸ್ಥಾನ, ದೆಹಲಿ, ಪಂಜಾಬ್, ಪಶ್ಚಿಮ ಬಂಗಾಳ, ಅಂತಹ ಅನೇಕ ರಾಜ್ಯಗಳು ಬಿಜೆಪಿಯೇತರವಾಗಿವೆ” ಎನ್‌ಸಿಪಿ ಮುಖ್ಯಸ್ಥರು ಹೇಳಿದ್ದಾರೆ.