2024ರ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳಲ್ಲಿ ಈಗಾಗಲೇ ಲೆಕ್ಕಚಾರ, ಪೂರ್ವ ತಯಾರಿಗೆ ಸಿದ್ಧತೆ ನಡೆಯತೊಡಗಿದೆ. ಏತನ್ಮಧ್ಯೆ ಇಂಡಿಯಾ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯನ್ನಾಗಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ಹೆಸರನ್ನು ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಮತ್ತು ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ್ ಕೇಜ್ರಿವಾಲ್ ಪ್ರಸ್ತಾವಿಸಿದ್ದ ಕೆಲವು ದಿನಗಳ ಬಳಿಕ ಹಿರಿಯ ರಾಜಕಾರಣಿ ಶರದ್ ಪವಾರ್ ಅವರು, ಇಂಡಿಯಾ ಮೈತ್ರಿಕೂಟಕ್ಕೆ ಪ್ರಧಾನಿ ಅಭ್ಯರ್ಥಿ ಹೆಸರು ಘೋಷಣೆ ಈಗ ಅಗತ್ಯವಿಲ್ಲ ಎಂದು ಸಲಹೆ ನೀಡಿದ್ದಾರೆ.
1977ರಲ್ಲಿ ಪ್ರಧಾನಿ ಅಭ್ಯರ್ಥಿ ಯಾರೆಂದು ಘೋಷಿಸಿಲ್ಲ!
2024ರ ಲೋಕಸಭಾ ಚುನಾವಣೆಗೆ ಕೆಲವು ತಿಂಗಳು ಬಾಕಿ ಇರುವ ನಡುವೆಯೇ ಇಂಡಿಯಾ ಮೈತ್ರಿಕೂಟದ ಪಕ್ಷದ ಸದಸ್ಯರಿಂದ ಈ ಹೇಳಿಕೆ ಹೊರಬಿದ್ದಿದೆ. ಭಾರತೀಯ ಜನತಾ ಪಕ್ಷವನ್ನು ಚುನಾವಣೆಯಲ್ಲಿ ಕಟ್ಟಿಹಾಕಲು ವಿಪಕ್ಷಗಳು ತಂತ್ರ ಹೆಣೆಯುತ್ತಿವೆ. ಮೈತ್ರಿಕೂಟದಲ್ಲಿ ಕಾಂಗ್ರೆಸ್ ಪಕ್ಷವು ಹೆಚ್ಚು ಬಿಂಬಿಸಿಕೊಳ್ಳುತ್ತಿದ್ದು, ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡು ಮುಖಭಂಗ ಅನುಭವಿಸಿತ್ತು. ಆದರೆ ವಿಪಕ್ಷ ಮುಖಂಡರು ಯುನೈಟೆಡ್ ಫ್ರಂಟ್ ಮೂಲಕ ಒಗ್ಗಟ್ಟನ್ನು ಪ್ರದರ್ಶಿಸುತ್ತಿದ್ದಾರೆ.
ಪುಣೆಯಲ್ಲಿ ಎನ್ ಸಿಪಿ ಮುಖಂಡ ಶರದ್ ಪವಾರ್ ಅವರು ಮಾಧ್ಯಮ ಜತೆ ಸಂವಹನ ನಡೆಸುತ್ತಿದ್ದ ವೇಳೆ ಭಾರತದಲ್ಲಿ ಯಾವಾಗ ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸಿಲ್ಲವಾಗಿತ್ತು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 1977ರಲ್ಲಿ ತುರ್ತು ಪರಿಸ್ಥಿತಿ ನಂತರ ನಡೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ವಿಪಕ್ಷಗಳು ಪ್ರಧಾನಿ ಅಭ್ಯರ್ಥಿ ಯಾರೆಂದು ಘೋಷಿಸಿಲ್ಲವಾಗಿತ್ತು. ಈ ಚುನಾವಣೆಯಲ್ಲಿ ಇಂದಿರಾ ಗಾಂಧಿ ವಿರುದ್ಧ ಜನತಾ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಿತ್ತು.
1977ರ ಸಾರ್ವತ್ರಿಕ ಚುನಾವಣೆಯಲ್ಲಿ ಯಾರನ್ನೂ ಪ್ರಧಾನಿ ಎಂದು ಬಿಂಬಿಸಿಲ್ಲವಾಗಿತ್ತು. ಚುನಾವಣಾ ಫಲಿತಾಂಶದ ನಂತರ ಮೊರಾರ್ಜಿ ದೇಸಾಯಿ ಅವರನ್ನು ಪ್ರಧಾನಿ ಹುದ್ದೆಗೆ ಆಯ್ಕೆ ಮಾಡಲಾಗಿತ್ತು. ನಿಜಕ್ಕೂ ಹೇಳಬೇಕೆಂದರೆ ಆ ಸಂದರ್ಭದಲ್ಲಿ ದೇಸಾಯಿ ಅವರ ಹೆಸರು ಎಲ್ಲಿಯೂ ಪ್ರಸ್ತಾಪವಾಗಿರಲಿಲ್ಲವಾಗಿತ್ತು! ಚುನಾವಣೆಯಲ್ಲಿ ಹೊಸ ಪಕ್ಷ ಭರ್ಜರಿ ಗೆಲುವು ಸಾಧಿಸಿದ ಬಳಿಕ ಮೊರಾರ್ಜಿ ಅವರನ್ನು ಪ್ರಧಾನಿಯನ್ನಾಗಿ ಆಯ್ಕೆ ಮಾಡಲಾಗಿತ್ತು ಎಂದು ಪವಾರ್ ಹೇಳಿದರು.
ಪ್ರಧಾನಿ ಅಭ್ಯರ್ಥಿ ಯಾರೆಂದು ಬಿಂಬಿಸದಿದ್ದರೆ ಅದರಿಂದ ಯಾವುದೇ ದೊಡ್ಡ ಪರಿಣಾಮ ಬೀರುವುದಿಲ್ಲ. ಒಂದು ವೇಳೆ ಜನರು ಬದಲಾವಣೆ ಬಯಸಿದಲ್ಲಿ, ಆಗ ಮತದಾರರು ಬದಲಾವಣೆ ಬಗ್ಗೆ ದೃಢ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದು ಪವಾರ್ ಅಭಿಪ್ರಾಯ.
ಮಹಾ ವಿಕಾಸ್ ಅಘಾಡಿಯ ಕಾಂಗ್ರೆಸ್, ಎನ್ ಸಿಪಿ ಮತ್ತು ಉದ್ಧವ್ ಠಾಕ್ರೆ ನೇತೃತ್ವದ ಶಿವ ಸೇನಾ ಮೈತ್ರಿಕೂಟ 2024ರ ಲೋಕಸಭಾ ಚುನಾವಣೆಯಲ್ಲಿ ಮೇಲುಗೈ ಸಾಧಿಸಬಹುದು ಎಂಬ ಸಮೀಕ್ಷೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪವಾರ್, ಸಮೀಕ್ಷೆ ಫಲಿತಾಂಶದ ಬಗ್ಗೆ ಉತ್ಸಾಹ ತೋರದ ಅವರು, ಇದೊಂದು ಕೇವಲ ಮುನ್ಸೂಚನೆ. ಇಂತಹ ಸಮೀಕ್ಷೆ ಮೂಲಕ ನಾವು ಏಕಾಏಕಿ ಅಂತಿಮ ನಿರ್ಧಾರಕ್ಕೆ ಬರಬಾರದು ಎಂಬ ನಿಲುವನ್ನು ವ್ಯಕ್ತಪಡಿಸಿದರು.
ಪ್ರಧಾನಿ ಅಭ್ಯರ್ಥಿ ವಿಷಯದ ಕುರಿತು ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಸುದ್ದಿಗಾರರು ಪ್ರಶ್ನಿಸಿದ್ದ ವೇಳೆ, ವಿಪಕ್ಷಗಳು ಮೊದಲು ಚುನಾವಣೆಯಲ್ಲಿ ಗೆಲ್ಲುವತ್ತ ಹೆಚ್ಚಿನ ಲಕ್ಷ್ಯ ವಹಿಸಲಿ. ನಾವು ಮೊದಲು ಜಯ ಸಾಧಿಸೋಣ, ನಂತರ ಪ್ರಧಾನಿ ಅಭ್ಯರ್ಥಿ ಬಗ್ಗೆ ನಿರ್ಧಾರ ತೆಗೆದುಕೊಳ್ಳೋಣ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.