ಮುಂಬೈ: ಮಹಾರಾಷ್ಟ್ರದ ರಾಜಕೀಯದಲ್ಲಿ ಈ ಶನಿವಾರ ಮಹತ್ವದ ದಿನ. ಕಳೆದೊಂದು ತಿಂಗಳಿಂದ ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಮುಂದುವರಿದಿದ್ದರೂ ಇಂದಿನ ರಾಜಕೀಯ ಬೆಳವಣಿಗೆಗಳು ಭಾರಿ ವೇಗ ಪಡೆದಿದ್ದವು. ಇಂದು ಬೆಳಿಗ್ಗೆ ಶರದ್ ಪವಾರ್ ಅಳಿಯ ಅಜಿತ್ ಪವಾರ್ ಮಾವನಿಗೆ ಶಾಕ್ ನೀಡಿ ಬಿಜೆಪಿಗೆ ಬೆಂಬಲ ನೀಡಿದರು. ಫಡ್ನವೀಸ್ ನೇತೃತ್ವದ ಸರಕಾರದಲ್ಲಿ ಅಜಿತ್ ಉಪಮುಖ್ಯಮಂತ್ರಿಯೂ ಆದರು.
ಮಹಾರಾಷ್ಟ್ರದ ಈ ರಾಜಕೀಯ ಬೆಳವಣಿಗೆ ನಡೆದ ಬೆನ್ನಲ್ಲೇ ಶರದ್ ಪವಾರ್ ಅವರ 1978ರ ನಂಟಿನ ಬಗ್ಗೆ ಚರ್ಚೆಗಳಾಗುತ್ತಿವೆ. ಹಾಗಾದರೆ ಏನಿದು ಶರದ್ ಪವಾರ್- 1978- ಅಜಿತ್ ಪವಾರ್ ನಂಟು. ಮುಂದೆ ಓದಿ.
ಅದು 1978ರ ಜುಲೈ ತಿಂಗಳು. ಯುವಕ ಶರದ್ ಪವಾರ್ ಅವರು ಮಹಾರಾಷ್ಟ್ರದ ರಾಜಕೀಯದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಕಾಲ. ಶರದ್ ಪವಾರ್ ಅಂದು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಗೆ ನೀಡಿದ್ದ ಬೆಂಬಲವನ್ನು ವಾಪಾಸ್ ಪಡೆದಿದ್ದರು. ವಸಂತ್ ದಾದ ಪಾಟೀಲ್ ನೇತೃತ್ವದ ಕಾಂಗ್ರೆಸ್ ಸರಕಾರ ಪತನವಾಗಲು ಪವಾರ್ ಕಾರಣರಾಗಿದ್ದರು.
ಅಂದು ಇನ್ನೂ 37ರ ಹರೆಯದ ಶರದ್ ಪವಾರ್ ಪ್ರೋಗ್ರೆಸ್ಸಿವ್ ಡೆಮಾಕ್ರಾಟಿಕ್ ಫ್ರಂಟ್ ಮತ್ತು ಇತರ ಪಕ್ಷಗಳೊಂದಿಗೆ ಸೇರಿ ಸರಕಾರ ರಚಿಸಿದ್ದರು. ಇದರೊಂದಿಗೆ ಅತೀ ಕಿರಿಯ ಮುಖ್ಯಮಂತ್ರಿ ಎಂಬ ಖ್ಯಾತಿ ಪವಾರ್ ಪಾಲಾಗಿತ್ತು.
ಈಗ ಇತಿಹಾಸ ಮರುಕಳಿಸಿದೆ. ಶಿವಸೇನೆ- ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಸರಕಾರ ರಚಿಸಬೇಕೆಂಬ ಶರದ್ ಪವಾರ್ ಆಸೆಗೆ ತಣ್ಣೀರು ಎರಚಿದ್ದು ಅಳಿಯ ಅಜಿತ್ ಪವಾರ್. ತನ್ನದೇ ಪಕ್ಷದ ಕೆಲ ಶಾಸಕರೊಂದಿಗೆ ಬಿಜೆಪಿ ಪಕ್ಷಕ್ಕೆ ನಿಷ್ಠೆ ತೋರಿಸಿ ಉಪಮುಖ್ಯಮಂತ್ರಿಯೂ ಆದರು.
ಸುಮಾರು ನಾಲ್ಕು ದಶಕಗಳ ಹಿಂದೆ ಶರದ್ ಪವಾರ್ ತಾವೇ ಉರುಳಿಸಿದ್ದ ದಾಳ ಇಂದು ತನಗೆ ತಿರುಮಂತ್ರವಾಗಿದೆ ಎನ್ನಲಾಗುತ್ತಿದೆ. ಏನೇ ಆದರೂ ರಾಜಕೀಯದಲ್ಲಿ ಏನೂ ಆಗಬಹುದು ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.