ಮುಂಬಯಿ: ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಶರದ್ ಪವಾರ್ ನಿರ್ಣಯ ಹಿಂಪಡೆಯುವಂತೆ ಬೆಂಬಲಿಗರ ಆಗ್ರಹದ ನಡುವೆಯೇ, ಪವಾರ್ ತಾವು ತೆಗೆದುಕೊಂಡಿರುವ ಈ ನಿರ್ಣಯ ಪಕ್ಷದ ಭವಿಷ್ಯಕ್ಕೆ ಅಗತ್ಯ ಎಂದಿದ್ದಾರೆ. ಅಲ್ಲದೇ ಪಕ್ಷಕ್ಕೆ ಹೊಸ ನಾಯಕತ್ವದ ಅಗತ್ಯವಿದ್ದು, ಇನ್ನೆರಡು ದಿನಗಳಲ್ಲೇ ಈ ಬಗ್ಗೆ ಅಂತಿಮ ಘೋಷಣೆ ಮಾಡುವುದಾಗಿ ತಿಳಿಸಿದ್ದಾರೆ. ತಮ್ಮ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ ಅವರು “ನಿಮ್ಮೆಲ್ಲರ ಭಾವನೆಗಳನ್ನು ನಾನು ಗೌರವಿಸುತ್ತೇನೆ. ನಿಮ್ಮೆಲ್ಲರ ಅಭಿಪ್ರಾಯಗಳನ್ನು ಪಡೆದೇ ನಾನು ನಿರ್ಣಯ ತೆಗೆದುಕೊಳ್ಳಬೇಕಿತ್ತು. ಆದರೆ ನೀವು ಈ ನಿರ್ಣಯಕ್ಕೆ ಒಪ್ಪುತ್ತಿರಲಿಲ್ಲ ಹಾಗಾಗಿ ಈ ರೀತಿ ಘೋಷಿಸಬೇಕಾಯಿತು’ ಎಂದಿದ್ದಾರೆ.
ವಿಭಜನೆ ಭೀತಿಯಿಂದ ಪವಾರ್ ರಾಜೀನಾಮೆ?
“ಶರದ್ ರಾಜೀನಾಮೆ ಪೂರ್ವ ನಿಗದಿತ. ಮೇ1ರಂದೇ ಅವರು ರಾಜೀನಾಮೆ ನೀಡಬೇಕಿತ್ತು. ಆದರೆ ಬೇರೊಂದು ಕಾರ್ಯಕ್ರಮದ ನಿಮಿತ್ತ 2ಕ್ಕೆ ರಾಜೀ ನಾಮೆ ನೀಡಿದ್ದಾರೆ. ಅಂದು ಬಿಡುಗಡೆಯಾದ ಅವರ ಜೀವನಚರಿತ್ರೆ, ಅವರ ರಾಜಕೀಯ ಸೆಣಸಾಟಗಳನ್ನು ತೆರೆದಿಡುತ್ತವೆ. ಅದರಲ್ಲಿ ಬರೆಯದೇ ಬಿಟ್ಟ ಸಂಗತಿಯೇ ಈ ರಾಜೀನಾಮೆ. ಈಗಾಗಲೇ ಪವಾರ್ ಪಕ್ಷದಲ್ಲಿನ ಅನೇಕರು ಬಿಜೆಪಿಗೆ ಕಾಲಿಡಲು ಸಿದ್ಧತೆ ನಡೆಸಿದ್ದಾರೆ. ಈ ರೀತಿ ಪಕ್ಷದ ವಿಭಜನೆ ನೋಡುವ ಬದಲು ಪವಾರ್ ಘನತೆಯಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ’ ಎಂದು ಶಿವಸೇನೆ ಮುಖವಾಣಿ ಸಾಮ್ನಾ ಪತ್ರಿಕೆ ಹೇಳಿದೆ.