Advertisement
ಯುವತಿಯರು ಡೋಲು ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರೆ, ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್ ಮದ್ಯದ ಬಾಟಲಿಗಳನ್ನು ಒಡೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಮೇಧಾ ಪಾಟ್ಕರ್, ರಾಜ್ಯ ಸರ್ಕಾರದ ಬೊಕ್ಕಸ ತುಂಬಲು ಮದ್ಯವೇ ಬೇಕಿಲ್ಲ. ಅದರಿಂದ ಜನರ ಕಲ್ಯಾಣ ಮಾಡುವುದಾದರೆ ಅಂಥ ಅಭಿವೃದ್ಧಿ ಬೇಕಿಲ್ಲ. ಸರ್ಕಾರ ಮದ್ಯ ನಿಷೇಧಿ ಸುವ ಮೂಲಕ ಬೀದಿ ಪಾಲಾಗುತ್ತಿರುವ ಲಕ್ಷಾಂತರ ಕುಟುಂಬಗಳನ್ನು ರಕ್ಷಿಸಲಿ ಎಂದು ಆಗ್ರಹಿಸಿದರು.
Related Articles
Advertisement
ಅನೇಕ ವರ್ಷಗಳಿಂದಲೂ ಉತ್ತಮ ಸಮಾಜ ನಿರ್ಮಾಣಕ್ಕಾಗಿ ರಾಷ್ಟ್ರದ ಮಹಾನ್ ನಾಯಕರು ಮದ್ಯ ನಿಷೇಧಿಸುವ ಬಗ್ಗೆ ಸದಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರತಿ ಮಹಿಳೆ ಮಧ್ಯ ನಿಷೇಧ ಹೋರಾಟಕ್ಕೆ ಸಹಕರಿಸಬೇಕು. ಇದರಿಂದ ಕುಟುಂಬದ ಸ್ವಾಸ್ಥ್ಯ ವಾತಾವರಣ ಸೃಷ್ಟಿಸಲು ಸಹಕಾರಿ ಎಂದರು. ಪ್ರಗತಿಪರ ಚಿಂತಕ ಇಲಕಲ್‌ನ ಲಾಲ್ ಹುಸೇನ್ ಕಂದಗಲ್ ಮಾತನಾಡಿ, ಉತ್ತಮ ರಾಜ್ಯ ನಿರ್ಮಾಣವಾಗಬೇಕಾದರೆ ಮದ್ಯ ನಿಷೇಧ ಆಗಲೇಬೇಕು. ಇದಕ್ಕಾಗಿ ನಿರಂತರ ಹೋರಾಟದ ಅಗತ್ಯವಿದೆ ಎಂದರು.
ಚಿತ್ರದುರ್ಗದ ಸಿರಿಗೆರೆ ಶ್ರೀ ತರಳುಬಾಳು ಸಂಸ್ಥಾನದ ಶ್ರೀ ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಬೀದರನ ಬಸವ ಸೇವಾ ಪ್ರತಿಷ್ಠಾನದ ಡಾ| ಗಂಗಾಬಿಕಾ ಅಕ್ಕ ಮಾತನಾಡಿದರು. ಆಳಂದ ಮಹಿಳಾ ಹೋರಾಟಗಾರ್ತಿ ಸಿಸ್ಟರ್ ಟೀನಾ, ಶಾಸಕ ಬಿ.ಆರ್.ಪಾಟೀಲ, ರಾಘವೇಂದ್ರ ಕುಷ್ಟಗಿ, ಅಭಯ್, ಸೈಯ್ಯದ್ ಹಫೀಜುಲ್ಲಾ, ಜೆ.ಬಿ.ರಾಜು, ಎಂ.ಆರ್ .ಬೇರಿ, ವಿದ್ಯಾ ಪಾಟೀಲ ಸೇರಿ ಇತರರಿದ್ದರು.
ಬೃಹತ್ ರ್ಯಾಲಿ: ನಂತರ ಬೃಹತ್ ರ್ಯಾಲಿ ನಡೆಸಿದ ಕಾರ್ಯಕರ್ತರು, ನಗರದ ಪ್ರಮುಖ ರಸ್ತೆಗಳ ಮೂಲಕ ಅಂಬೇಡ್ಕರ್ ವೃತ್ತದವರೆಗೆ ರ್ಯಾಲಿ ನಡೆಸಿದರು. ನಂತರ ವಿವಿಧ ಪಕ್ಷಗಳ ಜಿಲ್ಲಾಧ್ಯಕ್ಷರಿಗೆ ಮನವಿ ಸಲ್ಲಿಸಿ ಮದ್ಯ ನಿಷೇಧಕ್ಕೆ ಆಗ್ರಹಿಸಲಾಯಿತು.
ಗಿಜಿಗಿಡುತ್ತಿದ್ದ ಎಪಿಎಂಸಿ ಮದ್ಯ ನಿಷೇಧ ಆಂದೋಲನಕ್ಕೆ ಆಗ್ರಹಿಸಿ ಎಪಿಎಂಸಿಯಲ್ಲಿ ನಡೆದ ರಾಜ್ಯಮಟ್ಟದ ಬೃಹತ್ ಸಮಾವೇಶದಲ್ಲಿ ರಾಜ್ಯದ ವಿವಿಧೆಡೆಯಿಂದ ಸಾವಿರಾರು ಜನ ಪಾಲ್ಗೊಂಡಿದ್ದರು. ಕಾರ್ಯಕ್ರಮ ನಿಗದಿಗಿಂತ ಎರಡು ಗಂಟೆ ತಡವಾಗಿ ಶುರುವಾಯಿತು. ಪರಿಣಾಮ ಜನರ ತಾಳ್ಮೆ ಮಿತಿ ಮೀರಿದ್ದರಿಂದ ಮಹಿಳೆಯರು ಎದ್ದು ತೆರಳಲು ಶುರು ಮಾಡಿದರು. ಇದರಿಂದ ಆಯೋಜಕರು ಕೆಳಗೆ ಕೂಡುವಂತೆ ಮನವಿ ಮಾಡಿದರು. ಕುಳಿತರೂ ತಮ್ಮೊಳಗೆ ಗುಸುಗುಸು ಎನ್ನುತ್ತಿದ್ದರಿಂದ ಆವರಣ ಗಿಜಿಗಿಡುವಂತಾಗಿತ್ತು
ಭಾಷಣ ತರ್ಜುಮೆ ಸಮಾವೇಶದಲ್ಲಿ ಭಾಗವಹಿಸಿದ್ದು, ಬಹುತೇಕರು ಅನಕ್ಷರಸ್ಥ ಮಹಿಳೆಯಾಗಿದ್ದರಿಂದ ಮೇಧಾ ಪಾಟ್ಕರ್ ಭಾಷಣ ಬಹುತೇಕರಿಗೆ ಅರ್ಥವಾಗಲಿಲ್ಲ. ಘೋಷಣೆ ಕೂಗಿದಾಗ ಒಂದೇ ಜೋರಾಗಿ ಕೂಗುತ್ತಿದ್ದರೂ ನಂತರ ತಮ್ಮೊಳಗೆ ಮಾತನಾಡುತ್ತಿದ್ದರು. ಇದನ್ನರಿತ ಆಯೋಜಕರು ಭಾಷಣ ತರ್ಜುಮೆ ಮಾಡಿ ಕನ್ನಡದಲ್ಲಿ ಹೇಳಿದರು. ಮೇಧಾ ಪಾಟ್ಕರ್ ಮಾತನಾಡಿದ ನಂತರ ಅದನ್ನು ಮಲ್ಲಿಗೆ ಎನ್ನುವವರು ಕನ್ನಡದಲ್ಲಿ ಭಾಷಾಂತರಿಸಿದರು. ಕಾರ್ಯಕ್ರಮದಲ್ಲಿ ಇಬ್ಬರು ವಿದೇಶಿ ಯುವತಿಯರು ಪಾಲ್ಗೊಂಡು ಗಮನ ಸೆಳೆದರು. ಸ್ವೀಡನ್ ದೇಶದ ಅವರು, ಪಿಎಚ್‌ಡಿ ಮಾಡಲು ಆಗಮಿಸಿದ್ದು, ಇಂಥ ಕಾರ್ಯಕ್ರಮಗಳಲ್ಲಿಪಾಲ್ಗೊಳ್ಳುತ್ತಾರೆ ಎಂದು ಆಯೋಜಕರು ತಿಳಿಸಿದರು ರಾಜ್ಯ ಸರ್ಕಾರದಿಂದಲೇ ಮದ್ಯ ಮಾಫಿಯಾ: ಮೇಧಾ ಪಾಟ್ಕರ್
ರಾಯಚೂರು: ರಾಜ್ಯದಲ್ಲಿ ಸರ್ಕಾರ ಮದ್ಯ ಮಾರಾಟವನ್ನು ಮಾಫಿಯಾ ರೀತಿಯಲ್ಲಿ ನಡೆಸುತ್ತಿದ್ದು, ಅದಕ್ಕೆ ಸಂಪೂರ್ಣ ಕಡಿವಾಣ ಹಾಕುವ ಅನಿವಾರ್ಯತೆ ಎದುರಾಗಿದೆ ಎಂದು ಸಾಮಾಜಿಕ ಹೋರಾಟಗಾರ್ತಿ ಹಾಗೂ ನಶಾ ಮುಕ್ತ ಭಾರತ್ ಆಂದೋಲನದ ಮುಖ್ಯಸ್ಥೆ ಮೇಧಾ ಪಾಟ್ಕರ್ ಅಭಿಪ್ರಾಯಪಟ್ಟರು. ನಗರದಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಮದ್ಯ ಮಾರಾಟದಿಂದ ಬರುವ ಹಣದಿಂದ ಶಿಕ್ಷಣ, ಆರೋಗ್ಯ ಸೇವೆ ನೀಡುತ್ತಿದೆ ಎಂದು ಗರ್ವದಿಂದ ಹೇಳಿಕೊಳ್ಳುತ್ತಿದೆ. ಆದರೆ, ಅದೆಷ್ಟೋ ದಲಿತ, ಶ್ರಮಿಕ ಕುಟುಂಬಗಳು ಇಂದು ಮದ್ಯವ್ಯಸನದಿಂದ ಬೀದಿ ಪಾಲಾಗುತ್ತಿವೆ. ಮದ್ಯ ಸೇವನೆಯಿಂದ ದೇಶದಲ್ಲಿ ಪ್ರತಿ ವರ್ಷ
10 ಲಕ್ಷ ಕುಟುಂಬಗಳು ಬೀದಿ ಪಾಲಾಗುತ್ತಿವೆ. ಮದ್ಯ ಮಾರಾಟ ರಾಜಕಾರಣದೊಂದಿಗೆ ತಳಕು ಹಾಕಿಕೊಂಡಿದ್ದು, ಅದರ ನಿರ್ನಾಮಕ್ಕೆ ಆಂದೋಲನ ಅಗತ್ಯವಾಗಿದೆ ಎಂದರು. ವಿವಿಧ ರಾಜ್ಯಗಳಲ್ಲಿ ಈಗಾಗಲೇ ಮದ್ಯ ಮಾರಾಟ ನಿಷೇಧಿಸಿದ್ದು, ಅದಕ್ಕೆ ರಾಜಕೀಯ ಇಚ್ಛಾಶಕ್ತಿ ಬೇಕು. ಈ ಚುನಾವಣೆಯಲ್ಲಿ ಮದ್ಯ ನಿಷೇಧಿಸುವವರಿಗೆ ಓಟು ಹಾಕುತ್ತೇವೆ ಎಂಬ ಸಂಕಲ್ಪ ಮಾಡಿದಾಗ ಅದಕ್ಕೊಂದು ತಾರ್ಕಿಕ ಅಂತ್ಯ ಕಾಣಿಸಬಹುದು. ಮದ್ಯ ಮಾರಾಟದ ವಿರುದ್ಧ ಮಹಿಳೆಯರು ಹಾಗೂ ಸಂಘಟನೆಗಳು ನಡೆಸುತ್ತಿರುವ ಹೋರಾಟ ಶ್ಲಾಘನೀಯ. ರಾಷ್ಟ್ರ ಮಟ್ಟದಲ್ಲಿ ಇಂಥ ಆಂದೋಲನ ನಡೆದಿದೆ. ರಾಜ್ಯದಲ್ಲಿ ಮಾದಕ ವಸ್ತುಗಳ ಉತ್ಪಾದನೆ, ಮಾರಾಟ ಸಂಪೂರ್ಣ ಸ್ಥಗಿತಗೊಳ್ಳಬೇಕು. ಬಿಹಾರದಲ್ಲಿ ಮದ್ಯ ಮಾರಾಟ ನಿಷೇಧಿಸಿದ ಮೇಲೆ ಆರ್ಥಿಕ ಸ್ಥಿತಿ ಸುಧಾರಿಸಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲೂ ಮದ್ಯ ನಿಷೇಧಿಸಬೇಕು. ಯಾವ ಪಕ್ಷ ಮದ್ಯ ನಿಷೇಧಿಸುವ ಸಂಕಲ್ಪ ತೊಡುವುದೋ ಅದಕ್ಕೆ ಬೆಂಬಲ ನೀಡಬೇಕು ಎಂದರು. ಜನರಿಗೆ ಸಮಸ್ಯೆಯೊಡ್ಡುವ ಕಾನೂನುಗಳನ್ನು ಇಂದಿಗೂ ಪಾಲಿಸಿಕೊಂಡು ಬರಲಾಗುತ್ತಿದೆ. ಮೊದಲು ಅಂಥ ಕಾನೂನು ಸುಧಾರಣೆ ಮಾಡಬೇಕು. ಸರ್ಕಾರದ ನೀತಿಗಳಿಂದಾಗಿಯೇ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅದೇ ರೀತಿ ಇಂದು ಮದ್ಯವ್ಯಸನಿಗಳು ಕೂಡ ಅಂಥದ್ದೇ ನೀತಿಗಳಿಂದ ಸಾಯುತ್ತಿದ್ದಾರೆ. ಸರ್ಕಾರವೇ ಜನರ ಕೊಲೆ ಮಾಡುತ್ತಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ವಿಚಾರವಾದಿಗಳ ಹತ್ಯೆಯಾಗುತ್ತಿರುವುದು ಮದ್ಯದಿಂದ ಎಂದರೆ ತಪ್ಪಾಗಲಿಕ್ಕಿಲ್ಲ.
ಮೇಧಾ ಪಾಟ್ಕರ್, ಸಾಮಾಜಿಕ ಹೋರಾಟಗಾರ್ತಿ