ಸವಣೂರು: ಶಾಂತಿಮೊಗರು ಸೇತುವೆ ಬಳಿ ಕುಮಾರಧಾರಾ ನದಿಗೆ ಮಂಗಳವಾರ ಸ್ನಾನಕ್ಕಿಳಿದು ನೀರುಪಾಲಾದ ಸಹೋದರರ ಪೈಕಿ ಸತ್ಯಪ್ರಸಾದ್ (27) ಅವರ ಮೃತದೇಹ ಬುಧವಾರ ಮಧ್ಯಾಹ್ನ ಸುಮಾರು 700 ಮೀಟರ್ ದೂರದಲ್ಲಿ ಪತ್ತೆಯಾಗಿದೆ. ಬೆಳ್ಳಾರೆ ಠಾಣಾಧಿಕಾರಿ ಮಹಜರು ಮಾಡಿ, ಮೃತದೇಹವನ್ನು ಕಡಬ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಬಿಟ್ಟುಕೊಡಲಾಯಿತು.
ಘಟನೆ ವಿವರ
ಕಡಬ ಹೋಬಳಿಯ ಕುಟ್ರಾಪ್ಪಾಡಿ ಗ್ರಾಮದ ಹರಿಪ್ರಸಾದ್, ಸತ್ಯಪ್ರಸಾದ್ ಸಹೋದರರು ಚಿಕ್ಕಪ್ಪನ ಮಗ ರೋಹಿತ್ ಅವರೊಂದಿಗೆ ಮಂಗಳವಾರ ಶಾಂತಿಮೊಗರು ಬಳಿ ನದಿಗಿಳಿದಿದ್ದರು. ಈ ಸಂದರ್ಭ ಹರಿಪ್ರಸಾದ್ ಹಾಗೂ ಸತ್ಯಪ್ರಸಾದ್ ಸುಳಿಯಲ್ಲಿ ಸಿಲುಕಿ ನೀರು ಪಾಲಾಗಿದ್ದರು. ಕಣ್ಮರೆಯಾಗಿದ್ದ ಅವರ ಪತ್ತೆಗಾಗಿ ಅಗ್ನಿಶಾಮಕ ದಳ, ಸ್ಥಳೀಯ ಈಜು ತಜ್ಞರು ಮಂಗಳವಾರವಿಡೀ ಶೋಧಕಾರ್ಯ ನಡೆಸಿದ್ದರು. ತಣ್ಣೀರುಬಾವಿ ಮುಳುಗುತಜ್ಞರು ತಣ್ಣೀರು ಬಾವಿ ತಂಡದ ವಾಸಿಂ ತಣ್ಣೀರುಬಾವಿ, ಸಾದಿಕ್ ತಣ್ಣೀರುಬಾವಿ, ಜಾಕಿರ್ ಹುಸೈನ್, ಜಾವಿದ್ ತಣ್ಣೀರು ಬಾವಿ, ಹಸನ್ ಪಿ.ಟಿ., ವಿಜಿತ್ ಪೆರ್ಲಂಪಾಡಿ ಅವರೊಂದಿಗೆ ನೀರಕಟ್ಟೆಯ ಆಶ್ರಫ್ ಹಾಗೂ ಯಶವಂತ್ ಬುಧವಾರ ತೀವ್ರ ಶೋಧಕಾರ್ಯಾಚರಣೆ ನಡೆಸಿದರು. ಅಗ್ನಿಶಾಮಕ ಇಲಾಖೆಯ ಬೋಟ್ ಮಾತ್ರ ಉಪಯೋಗಕ್ಕೆ ಲಭಿಸಿತೇ ವಿನಾ ಸಿಬಂದಿ ನೀರಿಗಿಳಿಯುವ ಪ್ರಯತ್ನ ಮಾಡಿಲ್ಲ.
ಮಂಗಳವಾರ ಕೂಡ ಘಟನಾ ಸ್ಥಳದಲ್ಲಿ ಸಾವಿರಾರು ಮಂದಿ ಜಮಾಯಿಸಿದ್ದರು. ಕಡಬ ತಹಶೀಲ್ದಾರ್ ಜಾನ್ ಪ್ರಕಾಶ್ ರೋಡ್ರಿಗಸ್, ಆರ್‌ಐ ಕೊರಗಪ್ಪ ಹೆಗ್ಡೆ, ಜಿಲ್ಲಾ ಕೆಡಿಪಿ ಸದಸ್ಯ ಸತೀಶ್ ಕುಮಾರ್ ಕೆಡೆಂಜಿ, ಪುತ್ತೂರು ಎಪಿಎಂಸಿ ನಿರ್ದೇಶಕ ದಿನೇಶ್ ಮೆದು, ತಾಪಂ ಸದಸ್ಯೆ ತೇಜಸ್ವಿನಿ ಶೇಖರ್, ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ ಸೇರಿದಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಭೇಟಿ ಘಟನಾ ಸ್ಥಳಕ್ಕೆ ಭೇಟಿ ನೀಡಿದರು.
ಬೆಳ್ಳಾರೆ ಠಾಣೆಯ ಎಸ್‌ಐ ಎಂ.ವಿ. ಚೆಲುವಯ್ಯ ನೇತೃತ್ವದಲ್ಲಿ ಪೊಲೀಸ್ ತಂಡ ಹಾಗೂ ಅಗ್ನಿಶಾಮಕ ದಳ ಮುಳುಗು ತಜ್ಞರಿಗೆ ಸಹಕರಿಸಿತ್ತು.