Advertisement

ಕಮಲ ಭದ್ರಕೋಟೆ ಶಿವಮೊಗ್ಗ ನಗರದಲ್ಲಿ ಶಾಂತಿ ಮಂತ್ರ

12:11 AM May 03, 2023 | Team Udayavani |

ಶಿವಮೊಗ್ಗ: ಬಿಜೆಪಿ ಭದ್ರಕೋಟೆ ಎನಿಸಿರುವ ಶಿವಮೊಗ್ಗ ನಗರದಲ್ಲಿ ಈ ಬಾರಿ ಶಾಂತಿಮಂತ್ರದ ಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್‌, ಜೆಡಿಎಸ್‌ನಲ್ಲಿ ನೆಮ್ಮದಿಯುತ ಶಿವಮೊಗ್ಗ ಭರವಸೆ ಮೂಲಕ ಮತಯಾಚನೆ ಮಾಡಲಾಗುತ್ತಿದೆ. ಬಿಜೆಪಿ ಎಂದಿನಂತೆ ಹಿಂದುತ್ವದ ವಿಚಾರಗಳನ್ನೇ ಪ್ರಚಾರ ಮಾಡುತ್ತಿದೆ. ಶಾಸಕ ಕೆ.ಎಸ್‌.ಈಶ್ವರಪ್ಪ ರಾಜಕೀಯ ನಿರ್ಗಮನದ ಮೂಲಕ ಕ್ಷೇತ್ರದಲ್ಲಿ ಹೊಸ ರಾಜಕಾರಣ ಆರಂಭವಾಗಿದೆ. ಈ ಬಾರಿ ಮಾಜಿ ಸಚಿವ ಈಶ್ವರಪ್ಪ ಬದಲಿಗೆ, ಸಾಮಾನ್ಯ ಕಾರ್ಯಕರ್ತ, ಪ್ರಖರ ಹಿಂದೂ ಹೋರಾಟಗಾರ ಎಸ್‌.ಎನ್‌. ಚನ್ನಬಸಪ್ಪಗೆ ಬಿಜೆಪಿ ಟಿಕೆಟ್‌ ನೀಡಿದೆ. ಕಾಂಗ್ರೆಸ್‌ ಮಾಜಿ ಶಾಸಕ ಎಚ್‌.ಎಂ. ಚಂದ್ರಶೇಖರಪ್ಪ ಪುತ್ರ, ಪಾಲಿಕೆ ಸದಸ್ಯ ಎಚ್‌.ಸಿ. ಯೋಗೇಶ್‌ಗೆ ಟಿಕೆಟ್‌ ನೀಡಿದೆ.

Advertisement

ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿ ಇಲ್ಲದೆ ಒದ್ದಾಡುತ್ತಿದ್ದ ಜೆಡಿಎಸ್‌ಗೆ ಆಯನೂರು ಮಂಜುನಾಥ್‌ ಸೇರುವ ಮೂಲಕ ತ್ರಿಕೋನ ಸ್ಪರ್ಧೆ ಹುಟ್ಟು ಹಾಕಿದ್ದಾರೆ. ಅವರ ಶಾಂತಿಯುತ “ಶಿವಮೊಗ್ಗ” ಫ್ಲೆಕ್ಸ್‌, ಪೋಸ್ಟರ್‌ಗಳು ಕ್ಷೇತ್ರದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿವೆ.

ನನಗೆ ಸಿಗದಿದ್ದರೆ ಮಗನಿಗಾದರೂ ಟಿಕೆಟ್‌ ಕೊಡಿ ಎಂದು ಕೇಳಿದ್ದ ಕೆ.ಎಸ್‌.ಈಶ್ವರಪ್ಪ ಈಗ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದ್ದಾರೆ. ವೈಯಕ್ತಿಕವಾಗಿ ಹೆಚ್ಚು ಮತಗಳನ್ನು ಹೊಂದಿರುವ ಈಶ್ವರಪ್ಪ ಅವರು ಗೆಲುವಿಗೆ ಹೇಗೆ ಸಹಕಾರಿಯಾಗುತ್ತಾರೆ ಕಾದು ನೋಡಬೇಕಿದೆ. 11 ಮಂದಿಯಲ್ಲಿ ಯಾರಿಗೆ ಟಿಕೆಟ್‌ ಕೊಟ್ಟರೂ ಕೆಲಸ ಮಾಡುತ್ತೇವೆ ಎನ್ನುತ್ತಿದ್ದ ಕಾಂಗ್ರೆಸ್‌ನಲ್ಲಿ ಅಸಮಾಧಾನ ಕಾಡುತ್ತಿದೆ. ಮಾಜಿ ಶಾಸಕರ ಆದಿಯಾಗಿ ಹಲವು ಪ್ರಮುಖ ಮುಖಂಡರು ಜೆಡಿಎಸ್‌ ಸೇರಿದ್ದಾರೆ. ಕ್ಷೇತ್ರದಲ್ಲಿ ಲೆಕ್ಕಕ್ಕೆ ಇಲ್ಲದ ಜೆಡಿಎಸ್‌ ಈಗ ಪ್ರಬಲ ಪ್ರತಿಸ್ಪ ರ್ಧಿಯಾಗಿ ಹೊರಹೊಮ್ಮಿದೆ. ಆಯನೂರು ಮಂಜುನಾಥ್‌ ಹಲವು ತಿಂಗಳುಗಳ ಹಿಂದೆಯೇ ಸ್ಪರ್ಧೆ ತೀರ್ಮಾನ ಮಾಡಿದ್ದರು ಎಂಬುದು ಈಗ ಬಹಿರಂಗಗೊಳ್ಳುತ್ತಿದೆ.
ಬಿಜೆಪಿ ಅಭ್ಯರ್ಥಿಗೆ ಪಕ್ಷದ ನಿಷ್ಠಾವಂತ ಕಾರ್ಯಕರ್ತರು, ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಮೋದಿ, ಅಮಿತ್‌ ಶಾ ರ್ಯಾಲಿ ವರದಾನವಾಗಬಹುದು.

ಪಾಲಿಕೆ ಸದಸ್ಯರಾಗಿ ಚನ್ನಬಸಪ್ಪ ಮೇಲಿರುವ ಆರೋಪಗಳು, ಹಿಂದುತ್ವ ವಿಚಾರದಲ್ಲಿ ನೀಡಿರುವ ಹೇಳಿಕೆಗಳು ಮುಳುವಾಗಬಹುದು. ಕಾಂಗ್ರೆಸ್‌ ಅಭ್ಯರ್ಥಿಗೆ ಸಾಂಪ್ರದಾಯಿಕ ಮತಗಳು ವರದಾನವಾಗ ಬಹುದು. ಪಕ್ಷದೊಳಗಿನ ಬಂಡಾಯ ಅವರಿಗೆ ಹಿನ್ನಡೆ ತರಬಹುದು. ಜೆಡಿಎಸ್‌ ಅಭ್ಯರ್ಥಿಗೆ 30 ವರ್ಷದ ಅನುಭವ, ಕಾರ್ಮಿಕ ವರ್ಗ, ಕಾಂಗ್ರೆಸ್‌ನಿಂದ ಬಂದಿರುವ ಮುಖಂಡರ ಪ್ರಚಾರ ಲಾಭ ತರಬಹುದು. ಕ್ಷೇತ್ರದಲ್ಲಿ ಮುಸ್ಲಿಮರೇ ಬಹುಸಂಖ್ಯಾಕರು. ಬಿಜೆಪಿ ಮೊದಲಿನಿಂದಲೂ ಹಿಂದೂ, ಮುಸ್ಲಿಂ ಮತ ಧ್ರುವೀಕರಣದಲ್ಲಿ ಯಶಸ್ಸು ಕಂಡು ಅನಾಯಾಸವಾಗಿ ಗೆದ್ದಿದೆ. ಹಿಂದೂ-ಮುಸ್ಲಿಂ ರಾಜಕಾರಣದ ಹೊರತಾಗಿಯೂ ಇಲ್ಲಿ ಮತ ಹಾಕಿದ ಉದಾಹರಣೆಗಳಿವೆ.

~ ಶರತ್‌ ಭದ್ರಾವತಿ

Advertisement
Advertisement

Udayavani is now on Telegram. Click here to join our channel and stay updated with the latest news.

Next