ಶಿರಸಿ: ಸ್ವಾರ್ಥ ರಹಿತ ಸೇವೆಯ ಮೂಲಕ ಸಹಕಾರಿ ಕ್ಷೇತ್ರ, ಶಿಕ್ಷಣ ಕ್ಷೇತ್ರ, ಧಾರ್ಮಿಕ ಕ್ಷೇತ್ರಗಳಲ್ಲಿ ಜನಪರ ಕಾರ್ಯದಲ್ಲಿ ತೊಡಗಿರುವ ಇಲ್ಲಿನ ಟಿಎಸ್‌ಎಸ್ ಅಧ್ಯಕ್ಷ, ಹಿರಿಯ ಸಹಕಾರಿ, ಚಿಂತಕ ಶಾಂತಾರಾಮ ಹೆಗಡೆ ಶೀಗೇಹಳ್ಳಿ ಅವರಿಗೆ ವಿವಿಧೆಡೆ ನೀಡಲಾದ ಸನ್ಮಾನದ ಮೊತ್ತವನ್ನು ಪೇರಿಸಿ ಸಾರ್ವಜನಿಕರಿಗೇ ಬಳಕೆ ಆಗುವಂತೆ ಮಾದರಿ ಕಾರ್ಯಕ್ಕೆ ಹೆಜ್ಜೆ ಇಡಲಾಗಿದೆ.
ಗುರುವಾರ ನಗರದ ಟಿಎಸ್‌ಎಸ್ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಶಾಂತಾರಾಮ ಹೆಗಡೆ ಶೀಗೇಹಳ್ಳಿ ವೆಲ್ಫೇರ್ ಟ್ರಸ್ಟ್‌ನ ಕಾರ್ಯಾಧ್ಯಕ್ಷ ಎಸ್.ಕೆ. ಭಾಗವತ್ ಶಿರಸಿಮಕ್ಕಿ, ಶೀಗೇಹಳ್ಳಿ ಅವರಿಗೆ ಗದಗದ ಕೆ.ಎಚ್. ಪಾಟೀಲ ಸಹಕಾರಿ ಪ್ರಶಸ್ತಿ ಬಂದಾಗ ಶಿರಸಿಯಲ್ಲೂ ಸಹಕಾರಿ ಆಸಕ್ತರು ಸನ್ಮಾನ ಮಾಡಿದ್ದೆವು. ಗದಗದಲ್ಲಿ ಕೊಟ್ಟ 5 ಲ.ರೂ. ಹಾಗೂ ಶಿರಸಿಯಲ್ಲಿ ಹಮ್ಮಿಣಿ ಅರ್ಪಿಸಿ ನೀಡಿದ್ದು ಸೇರಿಸಿ ಒಟ್ಟೂ 14.50 ಲಕ್ಷ ರೂ.ನಿಧಿ ಇಟ್ಟು ಟ್ರಸ್ಟ್ ಆರಂಭಿಸಲಾಗುತ್ತಿದೆ ಎಂದರು.
ಶೈಕ್ಷಣಿಕ, ವೈದ್ಯಕೀಯ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಆರ್ಥಿಕವಾಗಿ ಹಿಂದುಳಿದ ವಲಯಕ್ಕೆ ಧನಸಹಾಯ ನೀಡುವುದು ಟ್ರಸ್ಟ್‌ನ ಮುಖ್ಯ ಉದ್ದೇಶವಾಗಿದೆ ಎಂದ ಅವರು, ಕಳೆದ ವರ್ಷ ಕೆ.ಎಚ್. ಪಾಟೀಲ ರಾಷ್ಟ್ರೀಯ ಗ್ರಾಮೀಣ ಅಭಿವೃದ್ಧಿ ಪ್ರಶಸ್ತಿ ಸ್ವೀಕರಿಸುವಾಗ ಶಾಂತಾರಾಮ ಹೆಗಡೆ ಈ ಇಂಗಿತ ವ್ಯಕ್ತಪಡಿಸಿದ್ದರು. ಆ ಹಿನ್ನೆಲೆಯಲ್ಲಿ ಶಿರಸಿಯಲ್ಲಿ ಅವರಿಗೆ ಅಭಿನಂದನಾ ಕಾರ್ಯ ಏರ್ಪಡಿಸಿ ಹಮ್ಮಿಣಿ ಸಮರ್ಪಿಸಲಾಗಿತ್ತು. ಇದನ್ನೂ ಸಹ ಸೇರಿಸಿ ಒಂದು ಚಾರಿಟೇಬಲ್ ಟ್ರಸ್ಟ್ ರಚಿಸಲಾಗಿದೆ ಎಂದು ತಿಳಿಸಿದರು.
ಶೀಗೇಹಳ್ಳಿ ಅವರು ಈ ಟ್ರಸ್ rನ ಗೌರವಾಧ್ಯಕ್ಷರಾಗಿದ್ದು, ಟಿಎಸ್‌ಎಸ್ ನ ಪ್ರಧಾನ ವ್ಯವಸ್ಥಾಪಕರು ಈ ಟ್ರಸ್ಟ್‌ನ ಕಾರ್ಯದರ್ಶಿಯಾಗಿರುತ್ತಾರೆ. ನ್ಯಾಯವಾದಿ ಶಶಾಂಕ ಎಸ್. ಹೆಗಡೆ ಟ್ರಸ್ಟಿಗಳಾಗಿದ್ದಾರೆ ಎಂದರು.
ಶಾಲೆ, ಕಾಲೇಜು, ಗ್ರಂಥಾಲಯ, ರೀಡಿಂಗ್ ರೂಂ,ವಿಶ್ವವಿದ್ಯಾಲಯ, ಪ್ರಯೋಗಾಲಯ, ಸಂಶೋಧನಾ ಸಂಸ್ಥೆಗಳು ಹಾಗೂ ಇತರೆ ಶೈಕ್ಷಣಿಕ ಸಂಸ್ಥೆಗಳ ಸ್ಥಾಪನೆ, ನಿರ್ವಹಣೆ ಇತ್ಯಾದಿಗಳಿಗೆ ಧನಸಹಾಯ ನೀಡುವುದು, ಆರ್ಥಿಕ ದುರ್ಬಲ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವುದು, ವೈದ್ಯಕೀಯ ಸಂಸ್ಥೆಗಳು,ಆಸ್ಪತ್ರೆಗಳು, ಮಕ್ಕಳ ಕಲ್ಯಾಣ ಕೇಂದ್ರಗಳು, ನರ್ಸಿಂಗ್ ಹೋಂಗಳು ಇತ್ಯಾದಿಗಳ ಸ್ಥಾಪನೆ, ನಿರ್ವಹಣೆ ಇತ್ಯಾದಿಗಳಿಗೆ ಧನಸಹಾಯ ನೀಡುವುದು, ಆರ್ಥಿಕ ದುರ್ಬಲರ ವೈದ್ಯಕೀಯ ವೆಚ್ಚ ನಿರ್ವಹಣೆಗೆ ಧನಸಹಾಯ ನೀಡುವುದು, ಆರ್ಥಿಕ ದುರ್ಬಲರಿಗೆ ವಿದ್ಯಾರ್ಥಿವೇತನ ನೀಡುವುದು, ಪುಸ್ತಕಗಳು, ನೋಟ್‌ಬುಕ್‌ಗಳು, ಬಟ್ಟೆ, ಸಮವಸ್ತ್ರ, ಊಟ ಇತ್ಯಾದಿಗಳನ್ನು ಪೂರೈಸುವುದು, ವಿಜ್ಞಾನ, ಸಾಹಿತ್ಯ, ಸಂಗೀತ, ಸಂಸ್ಕೃತಿ, ನಾಟಕ ಹಾಗೂ ಕುಶಲಕಲೆ ಇತ್ಯಾದಿಗಳನ್ನು ಪ್ರೋತ್ಸಾಹಿಸಲು ಧನಸಹಾಯ ನೀಡುವುದು, ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಗೆ ಹಾಗೂ ಸಂಶೋಧನಾ ಸಂಸ್ಥೆಗಳಿಗೆ ಧನಸಹಾಯ ನೀಡುವುದು, ಸಾರ್ವಜನಿಕ ಉಪಯೋಗಕ್ಕಾಗಿ ಪಾರ್ಕ್‌ಗಳು, ವ್ಯಾಯಾಮಶಾಲೆ, ಕ್ರೀಡಾ ಸಂಸ್ಥೆಗಳು, ಧರ್ಮಶಾಲೆಗಳು, ವಿಶ್ರಾಂತಿಗೃಹಗಳು ಇತ್ಯಾದಿಗಳ ಸ್ಥಾಪನೆ ಹಾಗೂ ನಿರ್ವಹಣೆ, ವೃದ್ಧಾಶ್ರಮ ಹಾಗೂ ಅನಾಥಾಶ್ರಮಗಳ ಸ್ಥಾಪನೆ ಹಾಗೂ ನಿರ್ವಹಣೆಗೆ ಧನಸಹಾಯ ನೀಡುವುದು ಕೂಡ ಸೇರಿದೆ ಎಂದರು. ಸಹಕಾರಿ ಶಾಂತಾರಾಮ ಹೆಗಡೆ ಶೀಗೇಹಳ್ಳಿ, ವ್ಯವಸ್ಥಾಪಕ ನಿರ್ದೇಶಕ ರವೀಶ ಹೆಗಡೆ, ಶಶಾಂಕ ಹೆಗಡೆ ಇತರರು ಇದ್ದರು.
ಜೂನ್ ಕೊನೇ ವಾರ ಈ ಟ್ರಸ್ಟನ ಅಧಿಕೃತ ಉದ್ಘಾಟನೆ ಆಗಲಿದೆ. ಈ ಉದ್ಘಾಟನೆ ಮೂಲಕ ಟ್ರಸ್ಟ್ ತನ್ನ ರಚನಾತ್ಮಕ ಕಾರ್ಯವನ್ನು ಆರಂಭಿಸಲಿದೆ.
ಶಶಾಂಕ ಹೆಗಡೆ, ಟ್ರಸ್ಟಿ
ಮೊದಲಿಂದಲೂ ಸಾರ್ವಜನಿಕವಾಗಿ ಸಿಕ್ಕ ಹಣ ಬಳಸುತ್ತಿರಲಿಲ್ಲ. ಈಗ ಟ್ರಸ್ಟ್ ರಚಿಸುವ ಮೂಲಕ ಇನ್ನಷ್ಟು ವ್ಯವಸ್ಥಿತಗೊಳಿಸಿದ್ದಾರೆ. ಸಾರ್ವಜಕನಿಕರ ಹಣ ಸಾರ್ವಜನಿಕ ಕ್ಷೇತ್ರಕ್ಕೇ ಹೋಗಬೇಕು.
ಶಾಂತಾರಾಮ ಹೆಗಡೆ ಶೀಗೇಹಳ್ಳಿ, ಸಹಕಾರಿಗಳು