ಹೊಸದಿಲ್ಲಿ: “ದಯವಿಟ್ಟು, ಸದನದಿಂದ ಈ ಕೂಡಲೇ ಹೊರನಡೆಯಿರಿ. ನಿಮ್ಮನ್ನು ಅಮಾನತು ಮಾಡಲಾಗಿದೆ’. ಇದು ಕೇಂದ್ರ ಸಚಿವರೊಂದಿಗೆ ಅನುಚಿತ ವರ್ತನೆ ತೋರಿದ ಟಿಎಂಸಿ ಸಂಸದ ಶಂತನು ಸೇನ್ ಅವರಿಗೆ ರಾಜ್ಯಸಭೆ ಸಭಾಪತಿ ಎಂ. ವೆಂಕಯ್ಯ ನಾಯ್ಡು ಶುಕ್ರವಾರ ನೀಡಿದ ಸೂಚನೆ.
ಸಂಸದೀಯ ವ್ಯವಹಾರಗಳ ಖಾತೆ ಸಹಾಯಕ ಸಚಿವ ವಿ. ಮುರಳೀಧರನ್ ಅವರು ಮಂಡಿಸಿದ ನಿರ್ಣಯದ ಅನ್ವಯ, ಶಂತನು ಸೇನ್ ರನ್ನು ಮುಂಗಾರು ಅಧಿವೇಶನದ ಉಳಿದ ಅವಧಿಗೆ ರಾಜ್ಯಸಭೆಯಿಂದ ಅಮಾನತು ಮಾಡಲಾಗಿದೆ.
ಗುರುವಾರ ರಾಜ್ಯ ಸಭೆಯಲ್ಲಿ ಪೆಗಾಸಸ್ ಪ್ರಕರಣ ಸಂಬಂಧ ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಹೇಳಿಕೆ ನೀಡುತ್ತಿದ್ದ ವೇಳೆ ಅವರತ್ತ ಧಾವಿಸಿ ಕಾಗದ ಪತ್ರಗಳನ್ನು ಕಸಿದುಕೊಂಡು ಹರಿದುಹಾಕುವ ಮೂಲಕ ಸಂಸದ ಶಂತನು ದುರ್ವರ್ತನೆ ತೋರಿದ್ದರು.
ನಡೆಯದ ಕಲಾಪ: ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಕಲಾಪ ಜು.19ರಿಂದ ಸರಿಯಾಗಿ ನಡೆದೇ ಇಲ್ಲ. ಶುಕ್ರವಾರ ಕೂಡ ಸತತ 3 ಬಾರಿ ಸದನ ಮುಂದೂಡಿಕೆಯಾದರೂ ರಾಜ್ಯಸಭೆಯಲ್ಲಿ ಕಲಾಪ ನಡೆಸಲು ಸಭಾಪತಿಗೆ ಸಾಧ್ಯವೇ ಆಗಲಿಲ್ಲ. ಬೆಳಗ್ಗಿನ ಅವಧಿಯ ಮುಂದೂಡಿಕೆ ಬಳಿಕ ಮಧ್ಯಾಹ್ನ 2.30ಕ್ಕೆ ಸದನ ಮತ್ತೆ ಸಮಾವೇಶಗೊಂಡಾಗ ಪೆಗಾಸಸ್ ಮತ್ತು ರೈತ ಕಾಯ್ದೆ ವಿಚಾರಕ್ಕೆ ಕೋಲಾಹಲ ಮುಂದುವರಿದೇ ಇತ್ತು. ಈ ಸಂದರ್ಭದಲ್ಲಿ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಪೆಗಾಸಸ್ ವಿಚಾರದ ಬಗ್ಗೆ ಚರ್ಚೆ ನಡೆಯಬೇಕು ಎಂದು ಒತ್ತಾಯಿಸಿದರು. ಆಗ ಸಭಾಪತಿ ಸ್ಥಾನದಲ್ಲಿದ್ದ ಭುವನೇಶ್ವರ್ ಕಲಿಕಾ ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಈಗಾಗಲೇ ಹೇಳಿಕೆ ನೀಡಿದ್ದರಿಂದ ಮತ್ತೆ ಚರ್ಚೆಗೆ ಅವಕಾಶ ಇಲ್ಲವೆಂದರು. ಇದರಿಂದ ಕ್ರುದ್ಧಗೊಂಡ ಸಂಸದರು ಗದ್ದಲ ಮುಂದುವರಿಸಿದ್ದರಿಂದ ಸಭಾಪತಿ ಕಲಾಪವನ್ನು ಸೋಮವಾರಕ್ಕೆ ಮುಂದೂಡಿದರು.
ಲೋಕಸಭೆಯಲ್ಲಿ ಕೂಡ ಪೆಗಾಸಸ್ ವಿವಾದಕ್ಕೆ ಸಂಬಂಧಿಸಿದಂತೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಕಲಾಪ ನಡೆಸುವುದು ಸಾಧ್ಯವಾಗಲಿಲ್ಲ. ಮಧ್ಯಾಹ್ನ 12 ಗಂಟೆಗೆ ಕಲಾಪ ಮತ್ತೂಮ್ಮೆ ಶುರುವಾದರೂ ಗದ್ದಲ ಕಡಿಮೆಯಾ ಗದ್ದರಿಂದ ಸೋಮವಾರಕ್ಕೆ ಕಲಾಪ ಮುಂದೂಡಲಾಯಿತು. ಈ ನಡುವೆ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಪೆಗಾಸಸ್ ವಿವಾದಕ್ಕೆ ಸಂಬಂಧಿಸಿ ಸಂಸತ್‌ನ ಅವರಣದಲ್ಲಿ ಪ್ರತಿಭಟನೆ ನಡೆಸಲಾಯಿತು.