Advertisement

ಶಾಂತಮೂರ್ತಿ ಈ ದೇವ ಕಪಿಲೇಶ್ವರ 

12:34 PM Mar 24, 2018 | |

ಇಡೀ ಭಾರತದಲ್ಲಿ ಸಾಕಷ್ಟು ಕಪಿಲೇಶ್ವರ ದೇವಸ್ಥಾನಗಳಿವೆ. ಅವುಗಳಲ್ಲಿ ಬೆಳಗಾವಿಯ  ಕಪಿಲೇಶ್ವರನ ದೇವಾಲಯ ಅತ್ಯಂತ ಪುರಾತನವಾದುದಂತೆ. ಇನ್ನು 12 ಜ್ಯೋತಿರ್ಲಿಂಗಗಳ ಯಾತ್ರೆ 
ಕೈಗೊಳ್ಳುವವರು ತಮ್ಮ ಯಾತ್ರೆ ಸಂಪೂರ್ಣಗೊಳಿಸಬೇಕೆಂದರೆ ಈ ಕಪಿಲೇಶ್ವರನ ದರ್ಶನ ಪಡೆಯಲೇಬೇಕಂತೆ.  ಇಲ್ಲಿಯ ಕಪಿಲೇಶ್ವರನ ದರ್ಶನ ಮಾಡಿದರೆ ಚಾರ್‌ಧಾಮ ಯಾತ್ರೆಯ ಪೂರ್ಣಫ‌ಲ ದೊರೆಯುತ್ತದೆಂಬ ನಂಬಿಕೆ ಭಕ್ತರದು. 

Advertisement

ಬೆಳಗಾವಿ ಜಿಲ್ಲೆ ತನ್ನದೇ ಆದ ಐತಿಹಾಸಿಕ ಹಿನ್ನೆಲೆಯುಳ್ಳ ಒಂದು ಪ್ರಮುಖ ಪಟ್ಟಣ. ಬೆಂಗಳೂರಿನಷ್ಟೇ ಸಮನಾದ ಮತ್ತು ಹಿತಕರ ವಾತಾವರಣ ಹೊಂದಿದ ಈ ಪಟ್ಟಣ ಸಾಕಷ್ಟು ರಾಜ ಮಹಾರಾಜರ ಆಳ್ವಿಕೆಗೆ ಒಳ ಪಟ್ಟ ಪ್ರಾಂತ್ಯವಾಗಿದೆ. ಇಲ್ಲಿರುವ ಸುಂದರವಾದ ಹಾಗೂ ಪುರಾತನವಾದ ಕೋಟೆ, ಜೈನ ಬಸದಿಗಳು, ಹೊಯ್ಸಳ, ಚಾಲುಕ್ಯ, ಕದಂಬರ ಕಾಲದ ವಾಸ್ತುಶಿಲ್ಪದಲ್ಲಿ ನಿರ್ಮಾಣವಾದ ದೇವಾಲಯಗಳು ಇಂದಿಗೂ ಕೂಡ ಕಾಣಸಿಗುತ್ತಿವೆ. ಇಷ್ಟೇ ಅಲ್ಲದೇ ಅಂದಿನ ಗತಕಾಲದ ವೈಭವಗಳನ್ನು ಬಿಂಬಿಸುವ ಸಾಕಷ್ಟು ಸ್ಮಾರಕಗಳನ್ನೂ ನಾವು ನೋಡಬಹುದು. ಇವುಗಳಲ್ಲಿ ಕಪಿಲೇಶ್ವರ ದೇವಾಲಯ ಕೂಡ ಒಂದು.

ಇತಿಹಾಸದ ಪ್ರಕಾರ ಹಿಂದೆ ಕಪಿಲದ್ವಾರನೆಂಬ ಮಹರ್ಷಿ ಈ ಪ್ರಾಂತ್ಯದಲ್ಲಿ ವಾಸಿಸುತ್ತಿದ್ದ. ಆತನಿಗೆ ಶಿವನಲ್ಲಿ ಆದಮ್ಯ ಭಕ್ತಿ ಮತ್ತು ಪ್ರೀತಿ. ಅವನ ಭಕ್ತಿಗೆ ಮೆಚ್ಚಿದ ಶಿವ, ಮಹರ್ಷಿಯ ಕೋರಿಕೆಯಂತೆ ಇಲ್ಲಿ ಬಂದು ನೆಲೆಸಿದನೆಂದು ಹೇಳಲಾಗುತ್ತಿದೆ.  ಆ ಕಾರಣದಿಂದ ಈ ದೇವಸ್ಥಾನಕ್ಕೆ ಮಹರ್ಷಿಯ ಹೆಸರಿನಿಂದಲೇ ಕಪಿಲೇಶ್ವರ ಎಂದು ಕರೆಯಲಾಗುತ್ತದೆ.  ಇಲ್ಲಿ ಶಿವನನ್ನು ಕಾಲಭೈರವನ ರೂಪದಲ್ಲಿ ಪೂಜಿಸಲಾಗುತ್ತದೆ.  

ಈ ಪುಣ್ಯ ಕ್ಷೇತ್ರವು ದಕ್ಷಿಣ ಕಾಶಿ ಎಂದೇ ಪ್ರಖ್ಯಾತವಾಗಿದೆ.  ಇಡೀ ಭಾರತದಲ್ಲಿ ಸಾಕಷ್ಟು ಕಪಿಲೇಶ್ವರ ದೇವಸ್ಥಾನಗಳಿವೆ. ಅವುಗಳಲ್ಲಿ ಬೆಳಗಾವಿಯ ಕಪಿಲೇಶ್ವರನ ದೇವಾಲಯ ಅತ್ಯಂತ ಪುರಾತನವಾದುದಂತೆ. ಇನ್ನು 12 ಜ್ಯೋತಿರ್ಲಿಂಗ ಯಾತ್ರೆ ಕೈಗೊಳ್ಳುವವರು ತಮ್ಮ ಯಾತ್ರೆ ಸಂಪೂರ್ಣಗೊಳಿಸಬೇಕೆಂದರೆ ಈ ಕಪಿಲೇಶ್ವರನ ದರ್ಶನ ಪಡೆಯಲೇ ಕಂತೆ! ಈ ದೇವಸ್ಥಾನದ ಆವರಣವು ಮೂರು ಪವಿತ್ರ ಮರಗಳಾದ ಆಲದಮರ, ಫಿಕಸ್‌ ಮತ್ತು ಹತ್ತಿಮರಗಳಿಂದ ಕೂಡಿರುವುದು ಸೂಜಿಗದ ಸಂಗತಿ.  ಕಾರಣ ಈ ಮೂರು ಮರಗಳು ಒಂದೇ ಆವರಣದಲ್ಲಿ ಕಾಣಿಸಿಕೊಳ್ಳುವುದು ಅತ್ಯಂತ ವಿರಳ. ಪವಿತ್ರವಾದ ಈ ಕ್ಷೇತ್ರ ಧ್ಯಾನಾಸಕ್ತರನ್ನೂ ಕೂಡ ಸೆಳೆಯುತ್ತಿದೆ.  

Advertisement

ಈ ಕ್ಷೇತ್ರವು ಶಿವನ ಜಾಗೃತ ಸ್ಥಳವೆಂದು ಹೇಳಲಾಗುತ್ತಿದೆ. ಸುಂದರವಾದ ಪುರಾತನವಾದ ಈ ಕಪಿಲೇಶ್ವರ ದೇವಾಲಯದ ಆವರಣ ವಿಶಾಲವಾಗಿದ್ದು ಮಧ್ಯಭಾಗದಲ್ಲಿ ದೊಡ್ಡದಾದ ಬಿಳಿ ಬಣ್ಣದ ಅಮೃತಶಿಲೆಯಲ್ಲಿ ಕೆತ್ತನೆ ಮಾಡಲಾದ ಕಮಲದ ಹೂವಿನ ವಿನ್ಯಾಸವಿದೆ. ಈ ಹೂವಿನ ಮಧ್ಯಭಾಗದಲ್ಲಿ ಕಪ್ಪುಶಿಲೆಯಲ್ಲಿ ಕುಳಿತಿರುವ ಭಂಗಿಯಲ್ಲಿ ಶಿವನ ವಿಗ್ರಹವಿದೆ. ತಪಸ್ಸಿಗೆ ಕುಳಿತಿರುವ ಮಾದರಿಯಲ್ಲಿರುವ  ಈ ವಿಗ್ರಹದ ಕೊರಳಲ್ಲಿ ಹಾವು ಹೆಡೆ ಎತ್ತಿನಿಂತಿದೆ.  ತಲೆಯಲ್ಲಿ ಗಂಗೆಯನ್ನು ಧರಿಸಿರುವ ಶಿವ ಶಾಂತಮೂರ್ತಿಯಾಗಿ ಕುಳಿತಿದ್ದಾನೆ. ಗಂಗೆಯ ಬಾಯಿಯಿಂದ ಹಾಗೂ ಈ ಹೂವಿನ ಮೇಲ್ಭಾಗದ ನಾಲ್ಕು ದಿಕ್ಕಿಗೆ ಚಿಕ್ಕದಾಗಿ ನಿರ್ಮಿಸಲಾದ ನಾಲ್ಕು ಆನೆಗಳ ಸೊಂಡಿಲಿನಿಂದ ನೀರು ಚಿಮ್ಮಿ ಶಿವನ ವೆ‌ುàಲಿಂದ ಹರಿದು ಕೆಳಗಿರುವ ಕಮಲದ ಹೂವಿನ ವಿನ್ಯಾಸದ ಕುಂಡದಲ್ಲಿ ಶೇಖರಣೆಯಾಗುತ್ತದೆ. ದೇವಾಲಯಕ್ಕೆ ಬರುವ ಭಕ್ತಾದಿಗಳು ಈ ವಿಗ್ರಹಕ್ಕೆ ನಮಸ್ಕಾರ ಮಾಡಿ ಆ ಕುಂಡದಲ್ಲಿನ ನೀರನ್ನು ವಿಗ್ರಹಕ್ಕೆ ಪ್ರೋಕ್ಷಣೆ ಮಾಡಿದ ನಂತರವೇ ದೇವಸ್ಥಾನಕ್ಕೆ ಪ್ರವೇಶ ಮಾಡುವ ವಾಡಿಕೆ ಇದೆ. ಕೆಲವೊಂದು ವಿಶೇಷ ಸಂದರ್ಭದಲ್ಲಿ ಈ ವಿಗ್ರಹಕ್ಕೆ ಹಾಲಿನ ಅಭಿಷೇಕ ಕೂಡ ಮಾಡಲಾಗುತ್ತದೆ.  

ಅತ್ಯಂತ ಪುರಾತನವಾದ ಈ ದೇವಸ್ಥಾನದ ಹಜಾರ ದೊಡ್ಡದಾಗಿದ್ದು ಸಾಲು ಕಂಬಗಳನ್ನು ಹೊಂದಿದೆ. ಪುಟ್ಟದಾದ ಗರ್ಭಗೃಹದಲ್ಲಿ ಸ್ವಯಂಭೂ ಶಿವಲಿಂಗವಿದೆ. ಈ ಲಿಂಗಕ್ಕೆ ವೀರಭದ್ರನ ಮುಖವಾಡ ಹಾಕಿ ಪೂಜಿಸಲಾಗುತ್ತದೆ. ಹಣೆಯಲ್ಲಿ ದೊಡ್ಡ ಕುಂಕುಮ, ದಪ್ಪ ಮೀಸೆಯಿರುವ ಶಿವನ ದರ್ಶನದಿಂದ ಭಕ್ತರು ಪುನೀತರಾಗುತ್ತಾರೆ. 

ಈ ಕಪಿಲೇಶ್ವರನ ಸನ್ನಿಧಾನದಲ್ಲಿ ಕುಳಿತು ಗಾಯತ್ರಿ ಮಂತ್ರ ಪಠಿಸಿದರೆ  ಸಕಲ ದುಃಖ ನಿವಾರಣೆಯಾಗುತ್ತದೆಂಬ ನಂಬಿಕೆ ಭಕ್ತರದ್ದು.  ಇನ್ನು ಇಲ್ಲಿರುವ ನವರಂಗದಲ್ಲಿ ಸಾಕಷ್ಟು ವೇದ ಪಠಣ, ಪೂಜೆ, ಯಜ್ಞಗಳು ನಡೆ‌ಯುತ್ತಲೇ ಇರುತ್ತವೆ.ದೇವಾಲಯದ ಹೊರಗಿನ 

ಆವರಣದಲ್ಲಿ ದತ್ತಾತ್ರೇಯರ ದೇವಸ್ಥಾನವಿದೆ.  ತ್ರಿಮೂರ್ತಿ ಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರ ರೂಪದಲ್ಲಿ ನೆಲೆಸಿರುವ ಈ ದತ್ತಾತ್ರೆಯರಿಗೂ ಕೂಡ ನಿತ್ಯ ವಿಶೇಷ ಪೂಜೆ ನಡೆಸ ಲಾಗುತ್ತದೆ. ಇಷ್ಟೇ ಅಲ್ಲದೇ ಇದೇ ಪ್ರಾಂಗಣದಲ್ಲಿ ಗಣೇಶ್‌, ಹನುಮಾನ, ಸಾಯಿಬಾಬಾ, ನವಗ್ರಹಗಳು ಹಾಗೂ ನಾಗದೇವತೆಗಳ ಮಂದಿರಗಳೂ ಇವೆ. 

ಈ ದೇವಸ್ಥಾನದ ಇನ್ನೊಂದು ವಿಶೇಷತೆ ಏನೆಂದರೆ ಈ ದೇವಸ್ಥಾನದ ಆವರಣದಲ್ಲಿರುವ ಪ್ರತಿಯೊಂದು ದೇವರುಗಳಿಗೆ ಭಕ್ತಾದಿಗಳು ಬಿಲ್ವ ಪತ್ರದಿಂದ ಪೂಜಿಸುತ್ತಾರೆ.

ಇಲ್ಲಿಯ ಕಪಿಲೇಶ್ವರನ ದರ್ಶನ ಮಾಡಿದರೆ ಚಾರ್‌ಧಾಮ ಯಾತ್ರೆಯ ಪೂರ್ಣಫ‌ಲ ದೊರೆಯುತ್ತದೆಂಬ ನಂಬಿಕೆ ಭಕ್ತರದು. ನಿತ್ಯವೂ ಬೆಳಗ್ಗೆ ಮತ್ತು ಸಾಯಂಕಾಲ ಎರಡೂ ಸಮಯದಲ್ಲಿ ವಿಶೇಷ ಪೂಜೆ ನಡೆಸಲಾಗುತ್ತದೆ. ಇನ್ನು ಮಹಾ ಶಿವರಾತ್ರಿಯ ಸಮಯವಂತೂ ಇಲ್ಲಿ ಜಾತ್ರೆಯ ಸಂಭ್ರಮ ಜೋರಾಗಿರುತ್ತದೆ. ಸುತ್ತಮುತ್ತಲೂ ಇರುವ ಹಳ್ಳಿಗಳಿಂದ ಹಾಗೂ ಪಟ್ಟಣ ಪ್ರದೇಶಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಬಂದು ಶಿವನ ದರ್ಶನ ಪಡೆದು ಧನ್ಯರಾಗುತ್ತಾರೆ.

ಆಶಾ.ಎಸ್‌. ಕುಲಕರ್ಣಿ

Advertisement

Udayavani is now on Telegram. Click here to join our channel and stay updated with the latest news.

Next