ಕನ್ನಡ ಚಿತ್ರರಂಗಕ್ಕೆ ದೊಡ್ಮನೆಯ ಕೊಡುಗೆ ಅಪಾರವಾದದ್ದು. ಕಳೆದ ಎಂಟು ದಶಕಗಳಿಂದ ಅಪ್ಪಾಜಿಯಿಂದ ಶುರುವಾದ ಕಲಾ ಸೇವೆ ಇಲ್ಲಿ ತನಕ ಮುಂದುವರೆಯುತ್ತಲೇ ಇದೆ. ಅಣ್ಣಾವ್ರ ನಂತರ ಶಿವಣ್ಣ, ರಾಘಣ್ಣ, ಅಪ್ಪು ರಜತಪರದೆಯನ್ನು ಬೆಳಗಿದರು. ಗಂಧದಗುಡಿಗೆ ಒಳ್ಳೊಳ್ಳೆ ಸಿನಿಮಾಗಳನ್ನು ಕಾಣಿಕೆಯನ್ನಾಗಿ ನೀಡಿದರು. ಈಗ ಅಣ್ಣಾವ್ರ ಮೊಮ್ಮಕ್ಕಳು ಕನ್ನಡ ಚಿತ್ರರಂಗ ಬೆಳಗಲು ಸಜ್ಜಾಗುತ್ತಿದ್ದಾರೆ. ಒಬ್ಬರಾದ ಮೇಲೆ ಒಬ್ಬರಂತೆ ಚಂದನವನಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ದೊಡ್ಮನೆಯಿಂದ ಕಲಾವಿದರು ಎನ್ನುವ ಹಮ್ಮುಬಿಮ್ಮು ಇಲ್ಲದೇ ಸಾಮಾನ್ಯ ಕಲಾವಿದರಂತೆಯೇ ಸ್ಯಾಂಡಲ್‍ವುಡ್ ಪ್ರವೇಶಿಸುತ್ತಿದ್ದಾರೆ. ಈಗಾಗಲೇ ವಿನಯ್ ರಾಜ್‍ಕುಮಾರ್, ಯುವರಾಜ್‍ಕುಮಾರ್, ಧೀರನ್ ರಾಮ್‍ಕುಮಾರ್, ಧನ್ಯಾ ಸೇರಿದಂತೆ ಅಣ್ಣಾವ್ರ ಕುಟುಂಬದಿಂದ ಹಲವರ ಆಗಮನವಾಗಿದೆ. ಈಗ ಷಣ್ಮುಕ ಗೋವಿಂದರಾಜ್ ಅವರ ಎಂಟ್ರಿಯಾಗುತ್ತಿದೆ.
ಷಣ್ಮುಕ ಗೋವಿಂದರಾಜ್ ಅಣ್ಣಾವ್ರ ಹಿರಿಮಗಳಾದ ಲಕ್ಷ್ಮಿಯವರ ಪುತ್ರ. ಕಲೆ ಎಂಬುದು ರಕ್ತಗತವಾಗಿ ಬಂದಿದ್ದರಿಂದಲೋ ಏನೋ ಗೊತ್ತಿಲ್ಲ, ಷಣ್ಮುಕ ಗೋವಿಂದರಾಜ್‍ಗೆ ಕಲಾವಿದನಾಗಬೇಕು ಎನ್ನುವ ಕನಸಿತ್ತು. ಆದರೆ, ಆ ಕನಸನ್ನು ಯಾರ ಬಳಿಯೂ ಹರವಿಡದೆ ತಾವಾಯ್ತು, ತಮ್ಮ ಕೆಲಸವಾಯ್ತು ಅಂತ ಎಂಎನ್‍ಸಿ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸಿಕೊಂಡು ಹೋಗುತ್ತಿದ್ದರು. ಅಪ್ಪ ಗೋವಿಂದರಾಜ್ ಫಿಲ್ಮ್ ಯೂನಿಟ್ ಹಾಗೂ ಕನ್ಸ್ಟ್ರಕ್ಷನ್ ಫೀಲ್ಡ್ ನಲ್ಲಿ ತೊಡಗಿಸಿಕೊಂಡಿದ್ದರಿಂದ ಅವರ ನೆರವಿಗೆ ಧಾವಿಸಿದ್ದರು. ಇದರ ಜೊತೆಗೆ ಕಲಾವಿದನಾಗುವ ಕ್ಷಣಕ್ಕಾಗಿ ಹಂಬಲಿಸುತ್ತಿದ್ದರು. ಕೊನೆಗೂ, ನಟನಾಗುವ ಮಹಾಬಯಕೆಯನ್ನು ನಿರ್ದೇಶಕ ಅಶೋಕ್ ಕಡಬ ಅವರು ಈಡೇರಿಸಿದ್ದಾರೆ. ಷಣ್ಮುಕ ಗೋವಿಂದರಾಜ್‍ಗೆ ಹೀರೋ ಪಟ್ಟ ಕಟ್ಟಿ ‘ನಿಂಬಿಯಾ ಬನಾದ ಮ್ಯಾಗ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಪರಿಚಯಿಸುತ್ತಿದ್ದಾರೆ.
‘ನಿಂಬಿಯಾ ಬನಾದ ಮ್ಯಾಗ’ ತಾಯಿ ಮತ್ತು ಮಗನ ಬಾಂದವ್ಯದ ಕಥೆ. ಇಲ್ಲಿವರೆಗೂ ಸದಭಿರುಚಿಯ ಸಿನಿಮಾಗಳನ್ನೇ ಪ್ರೇಕ್ಷಕರಿಗೆ ಉಣಬಡಿಸುತ್ತಾ ಬಂದಿರುವ ನಿರ್ದೇಶಕ ಅಶೋಕ್ ಕಡಬ, ಈಗಲೂ ಅಂತಹದ್ದೇ ಅದ್ಭುತ ಕಥೆಯ ಮೂಲಕ ಕನ್ನಡ ಕಲಾಭಿಮಾನಿಗಳನ್ನು ಎದುರುಗೊಳ್ಳಲು ತಯಾರಾಗುತ್ತಿದ್ದಾರೆ. ಪಾತ್ರಕ್ಕಾಗಿ ಸಂಪೂರ್ಣ ತಯಾರಿ ಮಾಡಿಕೊಂಡೆ ಅಖಾಡಕ್ಕಿಳಿದ ಷಣ್ಮುಕ ಗೋವಿಂದರಾಜ್, ಮೊದಲ ಬಾರಿ ಕ್ಯಾಮೆರಾ ಎದುರಿಸಿದರಾದರೂ ಅದ್ಭುತವಾಗಿ ನಟಿಸಿದ್ದಾರಂತೆ. ಈ ಬಗ್ಗೆ ಖುಷಿಯಿಂದ ಹೇಳಿಕೊಳ್ಳುವ ನಿರ್ದೇಶಕ ಅಶೋಕ್ ಕಡಬ ಅವರು, ವರಮಹಾಲಕ್ಷ್ಮಿ ಹಬ್ಬದಂದು `ನಿಂಬಿಯಾ ಬನಾದ ಮ್ಯಾಗ’ ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆಗೊಳಿಸುವುದಾಗಿ ತಿಳಿಸಿದ್ದಾರೆ.
ಈಗಾಗಲೇ ಈ ಸಿನಿಮಾದ ಚಿತ್ರೀಕರಣ ಶೇಕಡ ನಲವತ್ತರಷ್ಟು ಪೂರ್ಣಗೊಂಡಿದೆ. ಹೆಚ್ಚಿನ ಭಾಗ ಮಲೆನಾಡಿನಲ್ಲಿಯೇ ಚಿತ್ರೀಕರಿಸಿರೋ ಚಿತ್ರತಂಡ, ಶೃಂಗೇರಿ, ಹೊರನಾಡಿನ ಸುತ್ತಮುತ್ತ ಶೂಟಿಂಗ್ ಮಾಡಲು ತಯ್ಯಾರಾಗುತ್ತಿದ್ದಾರೆ. ಸದ್ಯ, ಅಶೋಕ್ ಅವರು `ಸತ್ಯಂ’ ಎಂಬ ಅಪ್ಪಟ ಕಮರ್ಷಿಯಲ್ ಧಾಟಿಯ ಸಿನಿಮಾವೊಂದನ್ನು ನಿರ್ದೇಶನ ಮಾಡಿದ್ದಾರೆ. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ರೂಪುಗೊಂಡಿರುವ ಈ ಬಿಗ್ ಬಜೆಟ್ಟಿನ ಚಿತ್ರ ಬಿಡುಗಡೆಗೆ ತಯಾರಾಗಿ ನಿಂತಿದೆ. ಅದು ತೆರೆಕಂಡ ಬಳಿಕ `ನಿಂಬಿಯಾ ಬನಾದ ಮ್ಯಾಗ’ ಮೂರನೇ ಹಂತದ ಚಿತ್ರೀಕರಣ ಶುರುವಾಗಲಿದೆ. ಎಮ್.ಜಿ.ಪಿ.ಎಕ್ಸ್ ಎಂಟರ್ ಪ್ರೈಸಸ್ ಲಾಂಛನದಲ್ಲಿ ವಿ. ಮಾದೇಶ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇಲ್ಲಿ ಘಟಾನುಘಟಿ ಕಲಾವಿದರ ದಂಡು ಶಣ್ಮುಖರಿಗೆ ಸಾಥ್ ಕೊಟ್ಟಿದೆ. ಹಿರಿಯ ನಟ ರಾಮಕೃಷ್ಣ, ಉಮೇಶ್, ಶಶಿಧರ್ ಕೋಟೆ ಮುಂತಾದವರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
ಒಂದು ಸುದೀರ್ಘ ಅಂತರದ ನಂತರ ನಟಿ ಭವ್ಯಾ ಈ ಸಿನಿಮಾ ಮೂಲಕ ಮತ್ತೆ ಮರಳಿದ್ದಾರೆ. ಅವರೂ ಕೂಡಾ ಕಾಡುವಂಥಹ ಪಾತ್ರದ ಮೂಲಕ ಪ್ರೇಕ್ಷಕರ ಎದುರು ಬರಲಿದ್ದಾರೆ. ಸ್ಟಾರ್ ನಟರೊಬ್ಬರು ವಿಶೇಷ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಅವರ್ಯಾರೆಂಬುದೂ ಇಷ್ಟರಲ್ಲಿಯೇ ಬಯಲಾಗಲಿದೆ. ಇನ್ನುಳಿದಂತೆ ಹಿರಿಯ ನಿರ್ದೇಶಕ ಎಸ್.ನಾರಾಯಣ್ ಪುತ್ರ ಪಂಕಜ್ ಈ ಸಿನಿಮಾದಲ್ಲಿ ಮುಖ್ಯವಾದ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಅವರ ಭಾಗದ ಚಿತ್ರೀಕರಣ ಈಗಾಗಲೇ ಮುಕ್ತಾಯಗೊಂಡಿದೆ. ಆರನ್ ಕಾರ್ತಿಕ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಇದರ ಆಡಿಯೋವನ್ನು ಎ2 ಮ್ಯೂಸಿಕ್ ಸಂಸ್ಥೆ ಈಗಾಗಲೇ ದೊಡ್ಡ ಮೊತ್ತಕ್ಕೆ ಖರೀದಿಸಿದೆ. ಅಶಿ, ಕೇಶವ್ ಮತ್ತು ಸಿದ್ದು ಈ ಚಿತ್ರಕ್ಕೆ ಛಾಯಾಗ್ರಾಹಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆಗಸ್ಟ್ 25 ರಂದು ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಬಿಡುಗಡೆಯಾಗಲಿರುವ ಫಸ್ಟ್ ಲುಕ್ ಟೀಸರ್ ನಲ್ಲಿ ಶಣ್ಮುಖ ಅವರ ಪಾತ್ರದ ಚಹರೆಗಳು ಪ್ರೇಕ್ಷಕರ ಮುಂದೆ ತೆರೆದುಕೊಳ್ಳಲಿವೆ.