ಸೈಕೋ ಶಂಕ್ರ ಎಂಬ ಕ್ರಿಮಿನಲ್ ಬಗ್ಗೆ ಎಲ್ಲರಿಗೂ ಗೊತ್ತಿರಬಹುದು. ಆದರೆ, “ಸೈಕೋ ಶಂಕ್ರ’ ಸಿನಿಮಾದ ವಿಲನ್ ಬಗ್ಗೆ ಗೊತ್ತಾ? ಗೊತ್ತಿರದಿದ್ದರೆ, ಇಲ್ಲಿ ಓದಿ. ಪುನೀತ್ ಆರ್ಯ ನಿರ್ದೇಶನದಲ್ಲಿ “ಸೈಕೋ ಶಂಕ್ರ’ ಚಿತ್ರ ಈಗ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಚಿತ್ರದ ಶೀರ್ಷಿಕೆಯೇ ಹೇಳುವಂತೆ, ಇದೊಂದು ಕ್ರಿಮಿನಲ್ ಸುತ್ತ ಸಾಗುವ ಸಿನಿಮಾ.
ಹಾಗಾದರೆ, ಇಲ್ಲಿ ಆ ಸೈಕೋ ಶಂಕ್ರ ಎಂಬ ಕ್ರಿಮಿನಲ್ ಸಿಕ್ಕಾಪಟ್ಟೆ ಆರ್ಭಟಿಸುತ್ತಾನೆ, ಮಾಡಬಾರದ್ದೆಲ್ಲವನ್ನೂ ಮಾಡುತ್ತಾನೆ, ನೋಡುಗರ ಕೆಂಗಣ್ಣಿಗೆ ಗುರಿಯಾಗುತ್ತಾನೆ, ಸಿಕ್ಕರೆ ಚಚ್ಚಿಬಿಡಬೇಕು ಎಂಬಷ್ಟರ ಮಟ್ಟಿಗೆ ಕ್ರೂರತನ ತೋರಿಸುತ್ತಾನೆ…’ ಇದೆಲ್ಲವೂ ಹೌದು. ಆದರೆ, ಅವನು ಸಿಕ್ಕಾಪಟ್ಟೆ ಆರ್ಭಟಿಸುತ್ತಾನೆ ಅನ್ನೋದು ಮಾತ್ರ ಸುಳ್ಳು.
ಇಲ್ಲಿ “ಸೈಕೋ ಶಂಕ್ರ’ನ ಪಾತ್ರವಿದೆ. ಅದು ಅತ್ಯಾಚಾರ ಮಾಡುತ್ತೆ, ಕೊಲೆ ಮಾಡುತ್ತೆ. ಆದರೆ, ಇಡೀ ಚಿತ್ರದಲ್ಲಿ ಆ ಪಾತ್ರ ಮಾತಾಡುವುದೇ ಇಲ್ಲ. ಕಾರಣ, ಆ ಪಾತ್ರಕ್ಕೆ ಡೈಲಾಗ್‌ಗಳೇ ಇಲ್ಲ. ಅಂದಹಾಗೆ, ಅಂಥದ್ದೊಂದು ಪಾತ್ರ ನಿರ್ವಹಿಸಿರುವುದು ನವರಸನ್. ಅವರಿಲ್ಲಿ ಕೇವಲ ನಟನೆಯನ್ನಷ್ಟೇ ಮಾಡಿದ್ದಾರಂತೆ. ಅದರಲ್ಲೂ ಲುಕ್ ಕೊಡುವ ಮೂಲಕವಷ್ಟೇ ಗಮನಸೆಳೆದಿದ್ದಾರಂತೆ.
ಹಾಗಾಗಿ ಈ ಪಾತ್ರ ಚಿತ್ರದ ಹೈಲೈಟ್‌ಗಳಲ್ಲೊಂದು ಎಂಬುದು ನಿರ್ದೇಶಕ ಪುನೀತ್ ಆರ್ಯ ಅವರ ಮಾತು. ನವರಸನ್ ಅವರಿಗೆ ಮೊದಲು ನೆಗೆಟಿವ್ ಪಾತ್ರ ಅಂದಾಗ, ಗೊಂದಲವಾಯಿತಂತೆ. ಅದರಲ್ಲೂ ಸೈಕೋ ಶಂಕ್ರನ ಪಾತ್ರ ಅಂದಾಗ, ಮಾಡೋಕೆ ಹಿಂದೇಟು ಹಾಕಿದ್ದು ನಿಜವಂತೆ. ಆದರೆ, ನಿರ್ದೇಶಕರು ಯಾವುದೇ ಡೈಲಾಗ್ ಇರುವುದಿಲ್ಲ.
ಬರೀ ನೋಟದಲ್ಲೇ ಹೆದರಿಸುವ, ಕಣ್ಣಲ್ಲೇ ಭಯ ಹುಟ್ಟಿಸುವ ಪಾತ್ರವದು ಅಂದಾಗ, ಎಲ್ಲೋ ಒಂದು ಕಡೆ ಚಾಲೆಂಜಿಂಗ್ ಇದೆ ಅನಿಸಿ, ಸಿನಿಮಾ ಮಾಡಲು ಒಪ್ಪಿದರಂತೆ. “ಇಡೀ ಚಿತ್ರದಲ್ಲಿ ಹೈಲೈಟ್ ಆಗಿರುವ ಪಾತ್ರಕ್ಕೆ ಮಾತೇ ಇಲ್ಲವೆಂದರೆ, ಅದು ಹೇಗಿರುತ್ತೆ ಎಂಬ ಕುತೂಹಲ ಎಲ್ಲರಿಗೂ ಇದ್ದೇ ಇದೆ.
ಅದೊಂದು ರೀತಿಯ ಸೈಲೆಂಟ್ ಕಿಲ್ಲರ್, ಥ್ರಿಲ್ಲರ್ ಪಾತ್ರ. ಹಿಂದೆ ಮಾಡಿರುವ ಎರಡು ಪಾತ್ರಗಳಿಗಿಂತಲೂ “ಸೈಕೋ ಶಂಕ್ರ’ ಪಾತ್ರ ವಿಭಿನ್ನವಾಗಿದೆ. ಅದು ನೆಗೆಟಿವ್ ಇದ್ದರೂ, ಮಾತೇ ಇಲ್ಲದ ಪಾತ್ರದಲ್ಲೇನೋ ಹೊಸತನವಿದೆ. ಅಂತಹ ಚಾಲೆಂಜ್ ಪಾತ್ರ ನಿರ್ವಹಿಸಿದ್ದು ಹೊಸ ಅನುಭವ’ ಎಂಬುದು ನವರಸನ್ ಮಾತು.