ಬೆಂಗಳೂರು: ಹೃದಯಾಘಾತಕ್ಕೆ ಒಳಗಾಗಿ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದ ಮಂಡ್ಯದ ಐದು ರೂಪಾಯಿ ವೈದ್ಯರೆಂದು ಖ್ಯಾತಿ ಹೊಂದಿರುವ ಡಾ. ಶಂಕರೇಗೌಡ ಅವರು ಸಂಪೂರ್ಣ ಚೇತರಿಸಿಕೊಂಡಿದ್ದಾರೆ.
ಈ ಕುರಿತು ಶುಕ್ರವಾರ ಫೋರ್ಟಿಸ್ ಅಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ. ಶಂಕರೇಗೌಡ, ಒಂದು ತಿಂಗಳ ಹಿಂದೆ ಹೃದಯದಲ್ಲಿ ರಕ್ತದ ನಾಳಗಳು ಬ್ಲಾಕ್ ಆಗಿದ್ದ ಕಾರಣ ಹೃದಯಾಘತ ಸಂಭವಿಸಿತ್ತು. ಕೂಡಲೇ ಮೈಸೂರಿನಲ್ಲಿರುವ ಆಸ್ಪತ್ರೆಗೆ ದಾಖಲಾದೆ. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗೆ ವರ್ಗವಾಣೆ ಮಾಡಿದರು. ಇಲ್ಲಿನ ಚಿಕಿತ್ಸಾ ವಿಧಾನದಿಂದ ನನ್ನ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಡಾ. ವಿವೇಕ್ ಜವಳಿ ಅವರ ತಂಡ ವಿಶೇಷ ಕಾಳಜಿ ವಹಿಸಿ ನನಗೆ ಚಿಕಿತ್ಸೆ ನೀಡಿದರು ಎಂದರು.
ನನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ ಇಲ್ಲಿನ ವೈದ್ಯರಿಗೆ ಧನ್ಯವಾದಗಳು. ಪ್ರತಿಯೊಬ್ಬರು ಹೆಚ್ಚಿನ ಕಾಳಜಿಯಿಂದ ಚಿಕಿತ್ಸೆ ನೀಡಿದ್ದಾರೆ. ಜೊತೆಗೆ ನನ್ನ ಆರೋಗ್ಯದ ಸುಧಾರಣೆಗೆ ಕಾಳಜಿ ವಹಿಸಿದ ಪ್ರತಿಯೊಬ್ಬರಿಗೂ ನಾನು ಋಣಿ. ಸದ್ಯ ನಾನು ಸಂಪೂರ್ಣವಾಗಿ ಗುಣವಾಗಿದ್ದು, ವೈದ್ಯರ ಸಲಹೆ ಮೇರೆಗೆ 6 ವಾರಗಳು ವಿಶ್ರಾಂತಿ ಪಡೆದು ಬಳಿಕ, ಹಿಂದಿನಂತೆ 5 ರೂಪಾಯಿ ಚಿಕಿತ್ಸೆ ಮುಂದುವರೆಸುವೆ ಎಂದು ಅವರು ಹೇಳಿದರು.
ಇದನ್ನೂ ಓದಿ:ಆರ್ ಟಿಓ ಕಚೇರಿಗೆ ಲೋಕಾಯುಕ್ತ ನ್ಯಾ.ಪಾಟೀಲ್ ದಿಢೀರ್ ಭೇಟಿ : ಅಧಿಕಾರಿಗಳಿಗೆ ಎಚ್ಚರಿಕೆ
42 ವರ್ಷದಿಂದ ಸೇವೆ: ಕಳೆದ 42 ವರ್ಷದಿಂದ ಮಂಡ್ಯದಲ್ಲಿ ಉಚಿತವಾಗಿ ಚಿಕಿತ್ಸೆ ನೀಡುತ್ತಾ ಬಂದಿದ್ದು ನನಗೆ ಆತ್ಮತೃಪ್ತಿ ನೀಡಿದೆ. ಮುಂದೆಯೂ ಕೂಡ ಈ ವೃತ್ತಿ ಮುಂದುವರೆಸಿಕೊಂಡು ಹೋಗಲಿದ್ದೇನೆ. ಕೇವಲ ವೈದ್ಯನಲ್ಲದೇ ಕೃಷಿಕನಾಗಿಯೂ ನಾನು ದುಡಿದ್ದೇನೆ. 2010 ರಲ್ಲಿ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೆ. ರಾಜಕೀಯಕ್ಕೆ ಕಾಲಿಟ್ಟ ಮೇಲೂ ಜನರಿಗೆ ಉಚಿತವಾಗಿ ಚಿಕಿತ್ಸೆ ನೀಡುವ ಕಸುಬು ಬಿಡಲಿಲ್ಲ ಎಂದರು.