ಕಾಪು, ಜೂ.8: ಮಲ್ಲಿಗೆಯ ತವರೂರು ಉಡುಪಿ ಜಿಲ್ಲೆಯ ಶಂಕರಪುರದ ಜಸಿಂತಾ ನೊರೋನ್ಹ ಅವರು ಹಿಮಾಚಲ ಪ್ರದೇಶದಲ್ಲಿ ಕಳೆದ 24 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಗುರುತಿಸಿ ಹಿಮಾಚಲ ಪ್ರದೇಶ ಸರಕಾರ ಅವರಿಗೆ ಸೇವೆಯಲ್ಲಿರುವಾಗಲೇ ವಿಶೇಷ ಅಂಚೆ ಚೀಟಿಯ ಗೌರವವನ್ನು ನೀಡಿದೆ.
ಹಿಮಾಚಲ ಪ್ರದೇಶದ ಬಿಜೆಪಿ ಸರಕಾರ, ಶಿಮ್ಲಾದ ಪೋಸ್ಟಲ್ ಇಲಾಖೆಯ ಮೂಲಕವಾಗಿ ಜಸಿಂತಾ ನೊರೊನ್ಹಾ ಅವರು ಶಿಕ್ಷಣಕ್ಕಾಗಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ‘ನನ್ನ ಸ್ಟ್ಯಾಂಪ್’ ನೀಡುವ ಮೂಲಕ ಸಮ್ಮಾನಿಸಿದೆ. ಮಾತ್ರವಲ್ಲದೇ ಅವರ ಚಿತ್ರವಿರುವ ಸ್ಟ್ಯಾಂಪ್ ನ್ನು ಅವರಿಂದಲೇ ಬಿಡುಗಡೆಗೊಳಿಸುವ ಮೂಲಕ ಆ ಗೌರವಕ್ಕೆ ಹೆಚ್ಚಿನ ಮೌಲ್ಯ ಒದಗಿಸಿದೆ.
ಕರಾವಳಿಗರಿಗೆ ಹೆಮ್ಮೆ : ಯಾವುದೇ ವ್ಯಕ್ತಿ ಜೀವಿತಾವಧಿಯಲ್ಲಿ ಸಲ್ಲಿಸಿದ ಸೇವೆಯನ್ನು ಅವರ ಕಾಲಾನಂತರದಲ್ಲಿ ಗುರುತಿಸಿ ಸರಕಾರ ಅವರ ಹೆಸರಿನಲ್ಲಿ ಅಂಚೆ ಚೀಟಿ, ಅಂಚೆ ಲಕೋಟೆ ಸಹಿತ ವಿವಿಧ ಸ್ಮಾರಕಗಳನ್ನು ಬಿಡುಗಡೆಗೊಳಿಸುವುದು ಸಾಮಾನ್ಯ. ಆದರೆ ಜೆಸಿಂತಾ ನೊರೋನ್ಹ ಅವರು ಜೀವಂತವಾಗಿರುವಾಗಲೇ ಅಂಚೆ ಚೀಟಿಯ ಗೌರವಕ್ಕೆ ಪಾತ್ರರಾಗಿರುವುದು ಕರಾವಳಿ ಜನರ ಪಾಲಿಗೆ ಹೆಮ್ಮೆಯ ವಿಚಾರವಾಗಿದೆ.
ಇನ್ನಂಜೆ ಹೈಸ್ಕೂಲ್‌ನ ಹಳೆ ವಿದ್ಯಾರ್ಥಿ : ಸೋದೆ ವಾದಿರಾಜ ಮಠದ ಅಧೀನದ ಇನ್ನಂಜೆ ಎಸ್.ವಿ.ಎಚ್ ಹೈಸ್ಕೂಲ್‌ನಲ್ಲಿ ಎಸ್ಸೆಸೆಲ್ಸಿ ಪೂರೈಸಿದ್ದ ಜೆಸೆಂತಾ ನೊರೋನ್ಹ ಅವರು ಝಾನ್ಸಿಗೆ ತೆರಳಿ ಅಲ್ಲಿ ಎಂಎ ಪದವಿಯನ್ನು ಪಡೆದಿದ್ದರು. ಆ ಬಳಿಕ ವಿವಿಧ ಕಾನ್ವೆಂಟ್‌ಗಳಲ್ಲಿ ಸೇವೆ ಸಲ್ಲಿಸಿದ ಅವರು 1994ರಲ್ಲಿ ಹಿಮಾಚಲ ಪ್ರದೇಶದ ಶಿಮ್ಲಾಕ್ಕೆ ತೆರಳಿ, ಅಲ್ಲಿನ ಜನರಿಗಾಗಿ ದಣಿವರಿಯದೇ ಸೇವೆ ಸಲ್ಲಿಸುತ್ತಿದ್ದಾರೆ.
ಕೆಜಿಯಿಂದ ಪಿಯುಸಿವರೆಗೆ ಶಿಕ್ಷಣ : ಪ್ರಾರಂಭದಲ್ಲಿ ಹಿಮಾಚಲ ಪ್ರದೇಶದ ಸೇಕ್ರೆಡ್ ಹಾರ್ಟ್ ತಾರಾ ಹಾಲ್ಗೆಯ ನೇತƒತ್ವ ವಹಿಸಿದ್ದ ಅವರು ಬಳಿಕ ಅಲ್ಲಿನ ಸರಕಾರದ ಸಹಕಾರದೊಂದಿಗೆ ಸೇಕ್ರೆಡ್ ಹಾರ್ಟ್ ಶಿಕ್ಷಣ ಸಂಸ್ಥೆಯನ್ನು ತೆರೆದಿದ್ದರು. ಆ ಮೂಲಕ ಸಾವಿರಾರು ಮಂದಿ ವಿದ್ಯಾರ್ಥಿಗಳಿಗೆ ಕೆ.ಜಿಯಿಂದ ಹಿಡಿದು ಪಿಯುಸಿವರೆಗಿನ ಶಿಕ್ಷಣಕ್ಕೆ ಅವಕಾಶ ಮಾಡಿಕೊಡುತ್ತಿದ್ದಾರೆ.
ಖ್ಯಾತನಾಮರ ಮಕ್ಕಳೇ ಇಲ್ಲಿನ ವಿದ್ಯಾರ್ಥಿಗಳು : ಸೆಕ್ರೇಡ್ ಹಾರ್ಟ್ ಶಿಕ್ಷಣ ಸಂಸ್ಥೆಯು ತನ್ನ 10 ವರ್ಷಗಳನ್ನು ಪೂರ್ಣಗೊಳಿಸಿದ ಸ್ಮರಣಾರ್ಥವಾಗಿ ಸೇಕ್ರೆಡ್ ಹಾರ್ಟ್ ಕಾನ್ವೆಂಟ್‌ನಲ್ಲಿ ಅವರ ಹೆಸರಿನಲ್ಲಿ ಮೊದಲ ಅಂಚೆ ಲಕೋಟೆಯನ್ನೂ ಬಿಡುಗಡೆಗೊಳಿಸಲಾಗಿದೆ. ವಿವಿಧ ಜನಪ್ರತಿನಿಧಿಗಳು, ಉದ್ಯಮಿಗಳು, ಚಿತ್ರನಟ – ನಟಿಯರೂ ಸೇರಿದಂತೆ ಸೆಲೆಬ್ರಟಿಗಳ ಮಕ್ಕಳೇ ಇಲ್ಲಿನ ಶಿಕ್ಷಣ ಪಡೆಯುತ್ತಾರೆ ಎನ್ನುವುದು ಉಲ್ಲೇಖನಿಯವಾಗಿದೆ.
ನಮ್ಮ ಕುಟುಂಬಕ್ಕೆ ಕೀರ್ತಿ ವೃದ್ಧಿಸಿರುವ ಜೆಸಿಂತಾ : ಈ ಬಗ್ಗೆ ಅವರ ಸಹೋದರ ಸಿಂಡಿಕೇಟ್ ಬ್ಯಾಂಕ್‌ನ ನಿವೃತ್ತ ಎಜಿಎಂ ಜೋಸೆಫ್ ನೊರೋನ್ಹಾ ಅವರನ್ನು ಸಂಪರ್ಕಿಸಿ ಮಾತನಾಡಿಸಿದಾಗ, ಶಿಮ್ಲಾದಲ್ಲಿ ಕನಿಷ್ಟ ಸಂಖ್ಯೆಯ ಕ್ರಿಶ್ಚಿಯನ್‌ಗಳು ವಾಸವಿದ್ದು ಹಿಂದೂಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೂ ಕೂಡಾ ಅಲ್ಲಿನ ಜನರೊಂದಿಗೆ ಬೆರೆತು ಜನರಿಗೆ ಪ್ರಯೋಜನವಾಗುವ ರೀತಿಯಲ್ಲಿ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿ ಅದರಲ್ಲಿ ಯಶ ಸಾಧಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಅವರ ಉತ್ತಮ ಸೇವೆಗೆ ಸರಕಾರ ವಿಶೇಷ ಗೌರವ ನೀಡಿದ್ದು, ಅವರು ಮಾಡಿರುವ ಸಾಧನೆಯಿಂದಾಗಿ ನಮ್ಮ ಕುಟುಂಬಕ್ಕೆ ಕೀರ್ತಿ ಬಂದಿದೆ ಎಂದು ಅವರು ತಮ್ಮ ಸಂತಸ ಹಂಚಿಕೊಂಡಿದ್ದಾರೆ.
ಉಡುಪಿ ಜಿಲ್ಲೆಯ ಶಂಕರಪುರದ ದಿ| ಡೆನಿಸ್ ಮತ್ತು ಕ್ರಿಸ್ಟೀನ್ ನೊರೊನ್ಹಾ ಅವರ ಆರು ಮಕ್ಕಳಲ್ಲಿ ಸಿಸ್ಟರ್ ಜಸಿಂತಾ ನೊರೊನ್ಹಾ ಎರಡನೇಯವರಾಗಿದ್ದು, ಎಳೆವೆಯಿಂದಲೂ ಬಹಳಷ್ಟು ಚುರುಕಿನ ಸ್ವಭಾವದ, ಶಾಂತಿಪ್ರಿಯ ಮಹಿಳೆಯಾಗಿದ್ದರು. ಈ ಬಾರಿ ಜನವರಿಯಲ್ಲಿ ಊರಿಗೆ ಬಂದಿದ್ದು ಒಂದು ತಿಂಗಳು ಊರಿನಲ್ಲಿ ಇದ್ದು ಹೋಗಿದ್ದರು. ವರ್ಗಾವಣೆಗೊಂಡು ಯೂರೋಪ್‌ಗೆ ತೆರಳುವ ಸಂದರ್ಭದಲ್ಲಿ ನಮ್ಮೊಂದಿಗೆ, ಹಿಮಾಚಲ ಪ್ರದೇಶ ಸರಕಾರ ನೀಡಿರುವ ಅಂಚೆ ಚೀಟಿಯ ಗೌರವದ ಬಗ್ಗೆ ತಿಳಿಸಿ, ತಮ್ಮ ಸಂತಸವನ್ನು ಹಂಚಿಕೊಂಡಿದ್ದರು ಎಂದು ಜೋಸೆಫ್ ನೊರೋನ್ಹಾ ವಿವರಿಸಿದ್ದಾರೆ.
ಸೇವೆ ಮುಂದುವರಿಯಲಿ : ಜೋಸೆಫ್ ನೊರೋನ್ಹ
ಸಿಸ್ಟರ್ ಜೆಸಿಂತಾ ನೊರೋನ್ಹ ಅವರು ಇದೀಗ ಯೂರೋಪ್ ರಾಷ್ಟ್ರದ ಮೋಲ್ಟಾ ದ್ವೀಪ ಪ್ರದೇಶಕ್ಕೆ ವರ್ಗಾವಣೆ ಹೊಂದಿದ್ದು, ಅವರ ಸೇವೆಯನ್ನು ಕಂಡು ಹಿಮಾಚಲ ಸರಕಾರ ಮತ್ತು ಪೋಸ್ಟಲ್ ಇಲಾಖೆ ವಿಶೇಷ ಅಂಚೆ ಚೀಟಿಯನ್ನು ಬಿಡುಗೊಳಿಸಿ, ಗೌರವಿಸಿರುವುದು ನಮಗೆ ಹೆಮ್ಮೆ ತಂದಿದೆ. ಅವರ ಸೇವೆ ಇನ್ನೂ ಹೆಚ್ಚಿನ ರೀತಿಯಲ್ಲಿ ಮುಂದುವರಿಯಲಿ ಎಂಬ ಆಶಯ ನಮ್ಮದಾಗಿದೆ ಎಂದು ಸಹೋದರ ಜೋಸೆಫ್ ನೊರೋನ್ಹಾ ಅಭಿಪ್ರಾಯ ಹಂಚಿಕೊಂಡಿದ್ದಾರೆ.
*ರಾಕೇಶ್ ಕುಂಜೂರು