ಕಟಪಾಡಿ: ಶಿರ್ವ- ಕಟಪಾಡಿ ಸಂಪರ್ಕದ ಪ್ರಮುಖ ರಾಜ್ಯ ಹೆದ್ದಾರಿಯ ಶಂಕರಪುರ ಪರಿಸರದಲ್ಲಿ ಎಲ್ಲೆಂದರಲ್ಲಿದ್ದ ಮರಣಾಂತಿಕ ಗುಂಡಿಗಳು ಅಪಾಯವನ್ನು ಆಹ್ವಾನಿಸುತ್ತಿತ್ತು.
ಇದೀಗ ರಸ್ತೆಯ ಗುಂಡಿಗಳಿಗೆ ಸಿಮೆಂಟ್, ಜಲ್ಲಿ ಮಿಶ್ರಣದ ತೇಪೆಯನ್ನು ಬುಧವಾರ ಮಧ್ಯಾಹ್ನದ ಬಳಿಕ ಹಾಕಲಾಗಿದೆ. ಹೀಗಾಗಿ ಮರಣಾಂತಿಕ ಗುಂಡಿಗಳಿಗೆ ತಾತ್ಕಾಲಿಕ ಮುಕ್ತಿ ಲಭಿಸಿದಂತಾಗಿದೆ.
ಪ್ರಮುಖವಾಗಿ ಕುಂಜಾರುಗಿರಿ ಸರ್ಕಲ್‌ನಿಂದ ಪೆಟ್ರೋಲ್ ಬಂಕ್, ಬಳಿಕ ಓಂ ಸಾಯಿ ಬಸ್ ನಿಲ್ದಾಣದ ಪ್ರದೇಶದಲ್ಲಿ ಕಂಡು ಬರುವ ಗುಂಡಿಗಳಿಂದಾಗಿ ವಾಹನ ಸವಾರರು ರಸ್ತೆಯನ್ನು ಹುಡುಕಿಕೊಂಡು ಸಾಗುವ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಸದಾ ವಾಹನ, ಜನದಟ್ಟಣೆಯಿಂದ ಕೂಡಿರುವ ಈ ರಸ್ತೆಯ ನಡುವೆಯೇ ಬೃಹದಾಕಾರದ ಗುಂಡಿ ಇದ್ದು, ಇದನ್ನು ತಪ್ಪಿಸುವ ಭರದಲ್ಲಿ ಹೆಚ್ಚಿನ ಮಂದಿ ಅಪಘಾತಕ್ಕೀಡಾಗುತ್ತಿದ್ದರು. ಈ ಬಗ್ಗೆ ಸಾರ್ವಜನಿಕರ ಆಕ್ರೋಶ ವನ್ನು ಉದಯವಾಣಿ ಸುದಿನವು ಸೆ. 14ರಂದು ಪ್ರಕಟಿಸಿತ್ತು.
ಈ ಮೊದಲೇ ಈ ಗುಂಡಿಯ ಬಗ್ಗೆ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಿದ್ದ ಕುರ್ಕಾಲು ಗ್ರಾ.ಪಂ. ಅಧ್ಯಕ್ಷ ಮಹೇಶ್ ಶೆಟ್ಟಿ ಬಿಳಿಯಾರು, ಉಪಾಧ್ಯಕ್ಷೆ ಸೀಮಾ ಮಾರ್ಗರೇಟ್ ಡಿ’ಸೋಜಾ ಅವರು ಸ್ವತಃ ಕಾರ್ಯೋನ್ಮುಖರಾಗಿ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಅವರ ಬೆನ್ನು ಹತ್ತಿದ್ದು, ಬುಧವಾರದ ಮಧ್ಯಾಹ್ನದ ಬಳಿಕ ಸ್ಥಳದಲ್ಲಿ ಉಪಸ್ಥಿತರಿದ್ದು, ಗುಂಡಿ ಮುಚ್ಚಿಸುವ ಕಾಮಗಾರಿಯನ್ನು ಪೂರೈಸುವಲ್ಲಿ ಯಶಸ್ಸನ್ನು ಕಂಡಿದ್ದಾರೆ.
ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದ್ದು, ಕಟಪಾಡಿ- ಕುರ್ಕಾಲು- ಶಂಕರಪುರ-ಶಿರ್ವ ಸಂಪರ್ಕದ ರಾಜ್ಯ ಹೆದ್ದಾರಿಯಲ್ಲಿನ ಮತ್ತಷ್ಟು ಮರಣಾಂತಿಕ ಗುಂಡಿಗಳಿಗೆ ಶಾಶ್ವತ ಪರಿಹಾರ ಕಾಮಗಾರಿ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.