ಶಿರ್ವ: ನವರಾತ್ರಿ ಹಿನ್ನೆಲೆ ಯಲ್ಲಿ ಮಲ್ಲಿಗೆಯ ಜತೆ ಜಾಜಿಗೂ ಬೇಡಿಕೆ ಕುದುರಿದೆ. ಮಲ್ಲಿಗೆ ಬೆಲೆ ಸೋಮವಾರದಿಂದಲೇ ಅಟ್ಟೆಗೆ 820 ರೂ. ಇದ್ದರೆ, ರವಿವಾರ ಜಾಜಿ ಕೂಡ 820 ರೂ.ಗೆ ತಲುಪಿದೆ. ಜಾಜಿ ಬೆಲೆ ಕಳೆದ ವಾರ ಅಟ್ಟೆಗೆ 130 ರೂ. ಇತ್ತು.
ಹಬ್ಬ ಹರಿದಿನಗಳಿರುವಾಗ ಮಲ್ಲಿಗೆ ಹೂವಿಗೆ ಬೇಡಿಕೆ ಹೆಚ್ಚಾಗುತ್ತದೆ. ನವರಾತ್ರಿ ಸಂದರ್ಭದಲ್ಲಿ ಶಾರದಾ ದೇವಿಯನ್ನು ಮಲ್ಲಿಗೆ ಅಥವಾ ಜಾಜಿ ಹೂವಿನಿಂದ ಅಲಂಕರಿಸಲಾಗುತ್ತದೆ. ಹಾಗಾಗಿ ಮಲ್ಲಿಗೆಯೊಂದಿಗೆ ಜಾಜಿಯ ದರವೂ ಗಗನಕ್ಕೇರಿದೆ.
ವಿಪರೀತ ಮಳೆಯಿಂದ ಹಾಳಾದ ಗಿಡಗಳು ಚಿಗುರೊಡೆಯುತ್ತಿದ್ದು, ಬೇಡಿಕೆಗನುಗುಣವಾಗಿ ಮಲ್ಲಿಗೆ ಕಟ್ಟೆಗೆ ಬರುತ್ತಿಲ್ಲ. ಮಲ್ಲಿಗೆ ಪೂರೈಕೆ ಕಡಿಮೆಯಾಗಿರುವುದರಿಂದ ಜಾಜಿಗೆ ಬೇಡಿಕೆ ಹೆಚ್ಚಾಗಿದೆ. ಕಳೆದ ವಾರ ಅಷ್ಟೇನೂ ಬೇಡಿಕೆ ಪಡೆಯದ ಜಾಜಿಗೆ ಎರಡು ದಿನಗಳಿಂದ ಅಟ್ಟೆಗೆ 720, 620 ರೂ.ಗಳಿದ್ದರೆ ರವಿವಾರ 820 ರೂ. ತಲುಪಿದೆ. ಸೆ. 13ರಂದು 820 ರೂ. ತಲುಪಿದ್ದ ಜಾಜಿಯ ಬೆಲೆ ಬಳಿಕ ಕುಸಿತ ಕಂಡಿತ್ತು, ಈಗ ಮತ್ತೆ ಏರಿ ಈ ಸೀಸನ್‌ನಲ್ಲಿ ದ್ವಿತೀಯ ಬಾರಿಗೆ ಮಲ್ಲಿಗೆಯ ಸರಿಸಮಾನ ದರದ ದಾಖಲೆ ನಿರ್ಮಿಸಿದೆ.
ಮಲ್ಲಿಗೆ ಕಟ್ಟೆಯಲ್ಲಿ 820 ರೂ.ಗೆ
ಮಾರಾಟ ಆದರೂ ಕೆಲವು ಕಡೆ ವ್ಯಾಪಾರಿಗಳು ಸಾವಿರಕ್ಕೂ ಮಿಕ್ಕಿದ ಬೆಲೆಗೆ ಮಾರುತ್ತಿದ್ದಾರೆ. ಆಯುಧ ಪೂಜೆ ದಿನಗಳಲ್ಲಿ ಬೆಲೆ ಇನ್ನಷ್ಟು ಏರುವ ಸಂಭವ ಇದೆ.