Advertisement

47 ಕೋಟಿ ರೂ. ಅತಿವೃಷ್ಠಿ ಹಾನಿ ಪರಿಹಾರಕ್ಕೆ ಪ್ರಸ್ತಾವನೆ: ಸಚಿವ  ಶಂಕರ ಪಾಟೀಲ

11:22 AM Aug 15, 2021 | Team Udayavani |

ಧಾರವಾಡ: ಅತಿವೃಷ್ಠಿಯಿಂದ ಸಾರ್ವಜನಿಕ ಮೂಲಭೂತ ಸೌಕರ್ಯಗಳಾದ ರಸ್ತೆ, ಸೇತುವೆ, ಕೆರೆ, ಕುಡಿಯುವ ನೀರಿನ ಘಟಕಗಳು, ವಿದ್ಯುತ್ ಸೌಕರ್ಯಗಳು ಹಾಗೂ ಅಂಗನವಾಡಿ, ಪ್ರಾಥಮಿಕ ಶಾಲಾ ಕಟ್ಟಡಗಳು ಹಾನಿಗೀಡಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ 392 ಕೋಟಿ ರೂ. ಹಾನಿಯ ಪ್ರಾಥಮಿಕ ಅಂದಾಜು ಮಾಡಲಾಗಿದೆ. ಎನ್.ಡಿ.ಆರ್.ಎಫ್ ಮಾರ್ಗಸೂಚಿಗಳನ್ವಯ 47 ಕೋಟಿ ರೂ.ಗಳ ಪರಿಹಾರಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ ಎಂದು ಕೈಮಗ್ಗ, ಜವಳಿ ಮತ್ತು ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು

Advertisement

ನಗರದ ಡಾ‌.ಅರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ 75ನೇ ಸ್ವಾತಂತ್ಯೋತ್ಸವ‌ದ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿ, ಅವರು ಮಾತನಾಡಿದರು.

ತುಪ್ಪರಿಹಳ್ಳವು ಧಾರವಾಡ ಹಾಗೂ ನವಲಗುಂದ ತಾಲೂಕಿನ ವ್ಯಾಪ್ತಿಯಲ್ಲಿ ಒಟ್ಟು 95 ಕಿ.ಮೀ ಹರಿದು ನವಲಗುಂದ ಪಟ್ಟಣದ ಹತ್ತಿರ ಬೆಣ್ಣೆಹಳ್ಳಕ್ಕೆ ಸೇರುತ್ತದೆ. ತುಪ್ಪರಿಹಳ್ಳ ಪ್ರವಾಹ ನಿಯಂತ್ರಣ ಯೋಜನೆಯಡಿ ಧಾರವಾಡ ಹಾಗೂ ನವಲಗುಂದ ತಾಲ್ಲೂಕಿನ ಸುಮಾರು 10 ಸಾವಿರ ಹೆಕ್ಟೇರ್ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ರೂಪಿಸಲಾಗಿರುವ 312 ಕೋಟಿ ರೂ.ಮೊತ್ತದ ವಿವರವಾದ ಯೋಜನಾ ವರದಿಗೆ ಕರ್ನಾಟಕ ನೀರಾವರಿ ನಿಗಮದ ಆಡಳಿತ ಮಂಡಳಿ ಅನುಮೋದನೆ ನೀಡಿದೆ. ಈ ವರದಿಯನ್ನು ಆರ್ಥಿಕ ಇಲಾಖೆಗೆ ಕಳುಹಿಸಲಾಗಿದೆ. ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ಪಡೆದು ಕಾಮಗಾರಿಯನ್ನು ತ್ವರಿತವಾಗಿ ಪ್ರಾರಂಭಿಸಲಾಗುವುದು ಎಂದರು.

ಜಿಲ್ಲೆಯಲ್ಲಿ ಅತಿವೃಷ್ಠಿಯಿಂದ 39 ಮನೆಗಳು ಪೂರ್ಣ ಪ್ರಮಾಣದಲ್ಲಿ, 93 ಮನೆಗಳು ಶೇಕಡಾ 25 ರಿಂದ 75 ರಷ್ಟು, 1622 ಮನೆಗಳು ಅಲ್ಪ ಪ್ರಮಾಣದಲ್ಲಿ ಹಾನಿಯಾಗಿರುವುದು ಸೇರಿ ಒಟ್ಟು 1754 ಮನೆಗಳು ಹಾನಿಗೀಡಾಗಿವೆ. ಸರ್ಕಾರದ ಮಾರ್ಗಸೂಚಿಗಳನ್ವಯ ಹಾನಿಗೀಡಾದವರಿಗೆ ಪರಿಹಾರದ ಹಣವನ್ನು ನೇರವಾಗಿ ಜಮಾ ಮಾಡಲಾಗುವುದು. ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಗೆ 23 ಸಾವಿರ ಹೆಕ್ಟೇರ್‍ಗೂ ಅಧಿಕ ಕೃಷಿ 276 ಹೆಕ್ಟೇರ್ ಪ್ರದೇಶದ ತೋಟಗಾರಿಕೆ ಬೆಳೆಗಳು ಹಾನಿಯಾಗಿದ್ದು ಸುಮಾರು 144 ಕೋಟಿ ರೂ ಮೌಲ್ಯದ .ಬೆಳೆ ಹಾನಿ ಅಂದಾಜಿಸಲಾಗಿದೆ ಎಂದರು.

ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್‍ಸಿಟಿ ಯೋಜನೆಯಡಿಯಲ್ಲಿ 57 ಯೋಜನೆಗಳನ್ನು ಒಂದು ಸಾವಿರ ಕೋಟಿ ರೂ.ಗಳ ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಇಲ್ಲಿಯವರೆಗೆ 20 ಕೋಟಿ ರೂ.ಮೊತ್ತದ 12 ಯೋಜನೆಗಳನ್ನು ಪೂರ್ಣಗೊಳಿಸಿ ಸಾರ್ವಜನಿಕ ಸೇವೆಗೆ ನೀಡಲಾಗಿದೆ. 697 ಕೋಟಿ ರೂ.ಗಳ 41 ಯೋಜನೆಗಳ ಕಾಮಗಾರಿಗಳು ಪ್ರಗತಿಯಲ್ಲಿವೆ. ಹುಬ್ಬಳ್ಳಿಯ ತೋಳನಕೆರೆ , ಮಹಾತ್ಮಾಗಾಂಧಿ ಪಾರ್ಕ್ ಅಭಿವೃದ್ಧಿ, ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ಮೂಲಕ ಘನತ್ಯಾಜ್ಯ ವಿಲೇವಾರಿ, ಮನೆ-ಮನೆಯಿಂದ ಕಸ ಸಂಗ್ರಹಣೆ ಮತ್ತು ವಿಲೇವಾರಿಯಲ್ಲಿ ಆರ್ ಎಫ್‍ಐಡಿ ಅಳವಡಿಕೆ, ಹುಬ್ಬಳ್ಳಿಯ ಚಿಟಗುಪ್ಪಿ ಆಸ್ಪತ್ರೆ ನಿರ್ಮಾಣ, ನೆಹರು ಮೈದಾನ ನವೀಕರಣ, ಜನತಾ ಬಜಾರ್ ಮಾರುಕಟ್ಟೆ, ಬೆಂಗೇರಿ ಹಾಗೂ ಉಣಕಲ್ ಮಾರುಕಟ್ಟೆ ಅಭಿವೃದ್ಧಿ ಯೋಜನೆಗಳು ಇದರಲ್ಲಿವೆ. ಪ್ರಸ್ತುತ ದೇಶದ 100 ಸ್ಮಾರ್ಟ್‍ಸಿಟಿ ನಗರಗಳಲ್ಲಿ ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಯೋಜನೆಯು 11ನೇ ಸ್ಥಾನದಲ್ಲಿದೆ. ರಾಜ್ಯದ 7 ನಗರಗಳಲ್ಲಿ ಮೊದಲನೇ ಸ್ಥಾನದಲ್ಲಿದೆ ಎಂದರು‌.

Advertisement

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಎಲ್ಲಾ ವಾರ್ಡುಗಳಿಗೆ 24×7 ನಿರಂತರ ನೀರು ಸರಬರಾಜು ಯೋಜನೆಯನ್ನು 1,207ಕೋಟಿ ರೂ. ವೆಚ್ಚದಲ್ಲಿ, ಡಿಬಿಓಟಿ ಮಾದರಿಯಲ್ಲಿ ಅನುಷ್ಠಾನಗೊಳಿಸಲು ಎಲ್ & ಟಿ ಲಿಮಿಟೆಡ್ ಸಂಸ್ಥೆಗೆ ಕಾಮಗಾರಿ ಗುತ್ತಿಗೆ ವಹಿಸಿಕೊಡಲಾಗಿದೆ. ಹುಬ್ಬಳ್ಳಿ-ಧಾರವಾಡ ಅವಳಿ ನಗರದ 26 ವಾರ್ಡ್‍ಗಳಿಗೆ ಈಗಾಗಲೇ 24×7 ನಿರಂತರ ನೀರು ಪೂರೈಕೆ ವ್ಯವಸ್ಥೆ ಇದೆ. ಈ ಯೋಜನೆ ಅನುಷ್ಠಾನಕ್ಕಾಗಿ ಧಾರವಾಡ ಸಮೀಪದ ಅಮ್ಮಿನಭಾವಿಯಲ್ಲಿ ಈಗಾಗಲೇ 40 ಎಂಎಲ್‍ಡಿ ಸಾಮರ್ಥ್ಯದ ಜಲಶುದ್ಧೀಕರಣ ಘಟಕ ನಿರ್ಮಾಣವಾಗಿದೆ. 43 ಎಂಎಲ್‍ಡಿ ಸಾಮರ್ಥ್ಯದ ಇನ್ನೊಂದು ಘಟಕದ ಕಾಮಗಾರಿ ನಡೆಯುತ್ತಿದೆ.

ಧಾರವಾಡ ಜಿಲ್ಲೆಗೆ ಜಲ ಜೀವನ ಮಿಷನ್ ಅಡಿ “ಮನೆಮನೆಗೆ ಗಂಗೆ” ಯೋಜನೆಯಡಿ 355 ಕಾಮಗಾರಿಗಳಿಗೆ 363 ಕೋಟಿ ರೂ.ಗಳ ಅನುದಾನವನ್ನು ಹಂಚಿಕೆ ಮಾಡಲಾಗಿದೆ ಎಂದರು‌.

ಜಲಧಾರೆ ಯೋಜನೆಯಡಿ ಕಲಘಟಗಿ ಪಟ್ಟಣ ಸೇರಿದಂತೆ ಜಿಲ್ಲೆಯ ಎಲ್ಲಾ 388 ಗ್ರಾಮೀಣ ಜನವಸತಿ ಪ್ರದೇಶಗಳು ಹಾಗೂ ಮಾರ್ಗ ಮಧ್ಯದ ಸವದತ್ತಿ ತಾಲೂಕಿನ 8 ಗ್ರಾಮಗಳಿಗೆ ಮಲಪ್ರಭಾ ನದಿ ಮೂಲದಿಂದ ನೀರು ಒದಗಿಸಲು ರೂಪಿಸಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಸರ್ಕಾರದಿಂದ 1032 ಕೋಟಿ ರೂ.ಗಳು ಮಂಜೂರಾಗಿವೆ. ಕಾಮಗಾರಿಯ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದರು.

ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿ ಜಿಲ್ಲೆಯ ಗ್ರಾಮೀಣ ವಿಧಾನಸಭಾ ಮತ ಕ್ಷೇತ್ರಗಳ ವ್ಯಾಪ್ತಿಯ 23 ಗ್ರಾಮಗಳನ್ನು ಆಯ್ದುಕೊಂಡು ಪ್ರತಿಯೊಂದು ಗ್ರಾಮದ ಅಭಿವೃದ್ಧಿಗೆ ತಲಾ 1 ಕೋಟಿ ರೂ.ಅನುದಾನ ಮೀಸಲಿಡಲಾಗಿದೆ. ಈಗಾಗಲೇ 12 ಕೋಟಿ ರೂ.ಬಿಡುಗಡೆಯಾಗಿದ್ದು ರಸ್ತೆ ನಿರ್ಮಾಣ, ಸೌರ ವಿದ್ಯುತ್ ದೀಪ ಅಳವಡಿಸುವ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದರು.

ಕೋವಿಡ್ ನಿಯಂತ್ರಣಕ್ಕೆ ಶ್ರಮಿಸಿದ ಜಿಲ್ಲೆಯ 1500 ಆಶಾ ಕಾರ್ಯಕರ್ತೆಯರಿಗೆ ಸಹಕಾರ ಸಂಘಗಳ ಮೂಲಕ ತಲಾ 3 ಸಾವಿರ ರೂ.ಗಳಂತೆ  ಒಟ್ಟು 30 ಲಕ್ಷ 15 ಸಾವಿರ ರೂ. ಆರ್ಥಿಕ ನೆರವು ನೀಡಲಾಗಿದೆ. ಸಂಭಾವ್ಯ ಮೂರನೇ  ಅಲೆ ನಿರ್ವಹಣೆಗಾಗಿ ಜಿಲ್ಲೆಯ  ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ವಯಸ್ಕರಿಗೆ 3 ಸಾವಿರ ಹಾಗೂ ಮಕ್ಕಳಿಗಾಗಿ ಪ್ರತ್ಯೇಕ 750 ಹಾಸಿಗೆಗಳನ್ನು ಗುರುತಿಸಲಾಗಿದೆ ಎಂದರು.

ಕೋವಿಡ್, ಅತಿವೃಷ್ಠಿ ಹಾಗೂ ಪ್ರವಾಹ ಪರಿಸ್ಥಿತಿಯಂತಹ ಸವಾಲುಗಳನ್ನು ಸಮರ್ಥವಾಗಿ ನಿರ್ವಹಿಸುವದರೊಂದಿಗೆ, ಜನಸಾಮಾನ್ಯರ ಕಲ್ಯಾಣಕ್ಕಾಗಿ  ಸರ್ಕಾರ  ಹತ್ತು ಹಲವು  ಅಭಿವೃದ್ಧಿ ಕಾಮಗಾರಿಗಳು ಹಾಗೂ ಯೋಜನೆಗಳನ್ನು ಕೈಗೊಳ್ಳುತ್ತಿದೆ. ಅವುಗಳ ಸಂಪೂರ್ಣ ಲಾಭ ಬಡವರು ಮತ್ತು ಅರ್ಹರಿಗೆ ತಲುಪುವಂತೆ ಮಾಡುವಲ್ಲಿ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ. ದೇಶಕ್ಕೆ  ಶಾಂತಿ ಹಾಗೂ ಅಹಿಂಸಾ ಮಾರ್ಗದಿಂದ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮಾ ಗಾಂಧೀಜಿ  ಹಾಗೂ ರಾಷ್ಟ್ರೀಯ ಹೋರಾಟದಲ್ಲಿ ದುಡಿದ ಮತ್ತು ಮಡಿದ ಮಹಾನುಭಾವರನ್ನು ಈ ಸಂದರ್ಭದಲ್ಲಿ ಮತ್ತೊಮ್ಮೆ ಸ್ಮರಿಸುತ್ತ , ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ದೇಶಭಕ್ತಿ ಪ್ರೇರೇಪಿಸುವ ಮತ್ತು ಚಳವಳಿಯನ್ನು ನೆನಪಿಸಿಕೊಳ್ಳುವ, ಅರಿತುಕೊಳ್ಳುವ ಕಾರ್ಯಕ್ರಮಗಳನ್ನು ವರ್ಷದುದ್ದಕ್ಕೂ ಆಚರಿಸೋಣ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next