ಮೆಲ್ಬರ್ನ್: ಚೆನ್ನೈ ತಂಡದ ಹಿರಿಯ ಆಟಗಾರ, ಆಸ್ಟ್ರೇಲಿಯದ ಆಲ್‌ರೌಂಡರ್ ಶೇನ್ ವಾಟ್ಸನ್ ಎಲ್ಲ ಮಾದರಿಯ ಕ್ರಿಕೆಟ್ ನಿಂದ ದೂರ ಸರಿಯುವ ಚಿಂತನೆ ಮಾಡಿದ್ದಾರೆ ಎಂದು ವರದಿಯಾಗಿದೆ.
ಈ ಐಪಿಎಲ್ ನಲ್ಲಿ ಚೆನ್ನೈತಂಡದ ವೈಫಲ್ಯ ಹಾಗೂ ಕೈಕೊಟ್ಟ ಫಾರ್ಮ್ ಹಿನ್ನೆಲೆಯಲ್ಲಿ ವಾಟ್ಸನ್ ಈ ನಿರ್ಧಾರಕ್ಕೆ ಬಂದಿರುವ ಸಾಧ್ಯತೆ ಇದೆ. ಆದರೆ ಅವರಿನ್ನೂ ಅಧಿಕೃತ ಘೋಷಣೆ ಮಾಡಿಲ್ಲ.
2016ರಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಹೇಳಿದ್ದ ವಾಟ್ಸನ್, ಐಪಿಎಲ್‌ನಂಥ ಟಿ20 ಲೀಗ್ ಗಳಲ್ಲಿ ಆಡುತ್ತ ಬಂದಿದ್ದರು. ಕಳೆದ 11 ವರ್ಷ ಗಳಿಂದಲೂ ಐಪಿಎಲ್ ಆಡುತ್ತಲೇ ಬಂದಿರುವ ಶೇನ್ ವಾಟ್ಸನ್, ರಾಜಸ್ಥಾನ್ ರಾಯಲ್ಸ್ ಮೂಲಕ ಪದಾರ್ಪಣೆ ಮಾಡಿದ್ದರು. ಮೊದಲ ವರ್ಷವೇ ಚಾಂಪಿಯನ್ ತಂಡದ ಸದಸ್ಯನಾದದ್ದು, ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾದದ್ದು ವಾಟ್ಸನ್ ಪಾಲಿನ ಹೆಗ್ಗಳಿಕೆ.
ಇದನ್ನೂ ಓದಿ:ಬೆಂಗಳೂರು ವಿರುದ್ಧ ಡೆಲ್ಲಿ ಕ್ಯಾಪಿಟಲ್‌ಗೆ ಗೆಲುವು: ಸೋತರೂ ಪ್ಲೇ ಆಫ್ ನಲ್ಲುಳಿದ ಆರ್‌ಸಿಬಿ
ಐಪಿಎಲ್ ನಲ್ಲಿ 145 ಪಂದ್ಯಗಳನ್ನು ಆಡಿರುವ ವಾಟ್ಸನ್ 30.99 ರ ಸರಾಸರಿಯಲ್ಲಿ 3874 ರನ್ ಗಳಿಸಿದ್ದಾರೆ. 21 ಅರ್ಧಶತಕಗಳೊಂದಿಗೆ ನಾಲ್ಕು ಶತಕವನ್ನು ವಾಟ್ಸನ್ ಬಾರಿಸಿದ್ದಾರೆ. ಆದರೆ ಈ ಬಾರಿಯ ಐಪಿಎಲ್ ನಲ್ಲಿ 11 ಇನ್ನಿಂಗ್ಸ್ ನಲ್ಲಿ 29.90 ಸರಾಸರಿಯಲ್ಲಿ 299 ರನ್ ಗಳಿಸಿದ್ದಾರೆ.