ಮೆಲ್ಬರ್ನ್: ಸರಿಸುಮಾರು ಒಂದೂವರೆ ದಶಕದ ಕಾಲ ವಿಶ್ವದ ಘಟಾನುಘಟಿ ಬ್ಯಾಟಿಗರಿಗೆ ಸಿಂಹಸ್ವಪ್ನರಾಗಿ ಗೋಚರಿಸಿದ್ದ ಆಸ್ಟ್ರೇಲಿಯದ ದಂತಕಥೆ ಲೆಗ್‌ಸ್ಪಿನ್ನರ್ ಶೇನ್ ವಾರ್ನ್ ದಿಢೀರನೇ ಬದುಕಿನ ಪಯಣ ಮುಗಿಸಿ ಹೊರಟು ಹೋಗಿದ್ದಾರೆ. 52 ವರ್ಷದ ವಾರ್ನ್ ಶುಕ್ರವಾರ ಥಾಯ್ಲೆಂಡ್ ನಲ್ಲಿ ಸಾವನ್ನಪ್ಪಿದ್ದಾರೆ. ಇದಕ್ಕೆ ಕಾರಣ ಹೃದಯಾಘಾತವೆಂದು ಊಹಿಸಲಾಗಿದೆ
ಶೇನ್ ವಾರ್ನ್ ಅವರ ಸಾವಿನ ಸುದ್ದಿ ಭಾರತೀಯರಿಗೆ ಮೊದಲು ತಿಳಿದದ್ದೇ ವೀರೇಂದ್ರ ಸೆಹ್ವಾಗ್ ಅವರ ಟ್ವೀಟ್ ಮೂಲಕ. ಅಲ್ಲಿಯ ತನಕ ಆಸ್ಟ್ರೇಲಿಯದಿಂದಲೂ ಸುದ್ದಿ ಲಭಿಸಿರಲಿಲ್ಲ. ಅನಂತರ ಒಬ್ಬೊಬ್ಬರೇ ಸಂತಾಪ ಸೂಚಿಸಲು ಆರಂಭಿಸಿದರು.
ಥಾಯ್ಲೆಂಡ್‌ಗೆ ಆಗಮಿಸಿದ್ದ ಶೇನ್ ವಾರ್ನ್ ಇಲ್ಲಿನ ವಿಲ್ಲಾ ಒಂದರಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡು ಬಂದಿದ್ದರು. ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ ಎಂದು ಆಸ್ಟ್ರೇಲಿಯದ “ಫಾಕ್ಸ್ ನ್ಪೋರ್ಟ್ಸ್’ ವರದಿ ಮಾಡಿದೆ. ಉಳಿದಂತೆ ಯಾವುದೇ ವಿಷಯವನ್ನು ಬಹಿರಂಗಪಡಿಸಿಲ್ಲ. ಇವರ ಸಾವು ಅನುಮಾನಾಸ್ಪದವಾಗಿದ್ದು, ಇನ್ನಷ್ಟೇ ಸ್ಪಷ್ಟ ಚಿತ್ರಣ ಲಭಿಸಬೇಕಿದೆ.
ಇದನ್ನೂ ಓದಿ:ವನಿತಾ ವಿಶ್ವಕಪ್: ವೆಸ್ಟ್ ಇಂಡೀಸ್‌ಗೆ 3 ರನ್ ಜಯ
ಡ್ರಗ್ಸ್ ವಿವಾದದ ನಂಟು: ಶೇನ್ ವಾರ್ನ್ಗೂ ವಿವಾದಕ್ಕೂ ಬಲವಾದ ನಂಟಿದೆ. 2003ರ ವಿಶ್ವಕಪ್ ವೇಳೆ ಡ್ರಗ್ಸ್ ಪರೀಕ್ಷೆಯಲ್ಲಿ ಸಿಕ್ಕಿಬಿದ್ದ ಶೇನ್ ವಾರ್ನ್ ಅವರನ್ನು ದಕ್ಷಿಣ ಆಫ್ರಿಕಾದಿಂದ ವಾಪಸ್ ಕಳುಹಿಸಲಾಗಿತ್ತು. 1994ರಲ್ಲಿ ಭಾರತದ ಬುಕ್ಕಿಯೊಬ್ಬನಿಂದ ದುಡ್ಡು ಪಡೆದ ವಿವಾದದಲ್ಲೂ ಸಿಲುಕಿದ್ದರು. ಇದೀಗ ವಾರ್ನ್ ಥಾಯ್ಲೆಂಡ್ ಗೆ ಏಕೆ ಹೋದರು ಎಂಬುದು ಸದ್ಯಕ್ಕೆ ನಿಗೂಢವಾಗಿಯೇ ಇದೆ.