ಮೆಲ್ಬರ್ನ್: ಶೋಕತಪ್ತ ಕುಟುಂಬ ರವಿವಾರ ಶೇನ್ ವಾರ್ನ್ ಗೆ ಅಂತಿಮ ವಿದಾಯ ಹೇಳಿತು. ಮೆಲ್ಬರ್ನ್ ನಲ್ಲಿ ಖಾಸಗಿಯಾಗಿ ನಡೆದ ಅಂತಿಮ ವಿಧಿವಿಧಾನ ಪ್ರಕ್ರಿಯೆಯಲ್ಲಿ ವಾರ್ನ್ ಅವರ ಮೂವರು ಮಕ್ಕಳು, ಕುಟುಂಬದವರು ಹಾಗೂ ಮಿತ್ರರು ಭಾಗಿಯಾಗಿದ್ದರು.
ಕ್ರಿಕೆಟ್ ಪ್ರತಿನಿಧಿಗಳಾಗಿ ಮಾಜಿ ನಾಯಕರಾದ ಅಲನ್ ಬೋರ್ಡರ್ ಮತ್ತು ಮಾರ್ಕ್ ಟೇಲರ್ ಆಗಮಿಸಿದ್ದರು. ಸುಮಾರು 80ರಷ್ಟು ಮಂದಿ ಹಾಜರಿದ್ದರು.
ಮಾ. 30ರಂದು “ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್’ನಲ್ಲಿ ಅಗಲಿದ ಲೆಜೆಂಡ್ರಿ ಸ್ಪಿನ್ನರ್‌ಗೆ ಸರಕಾರಿ ಗೌರವ ಸಲ್ಲಿಸಲಾಗುವುದು. ಈ ಸಂದರ್ಭದಲ್ಲಿ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು. ಈಗಾಗಲೇ ಎಂಸಿಜಿಯ ಸದರ್ನ್ ಸ್ಟಾಂಡ್‌ಗೆ ವಾರ್ನ್ ಹೆಸರನ್ನು ಇಡಲಾಗಿದೆ.
ಎಂಸಿಜಿಯಲ್ಲಿ ಶೇನ್ ವಾರ್ನ್ ಸಾಧನೆಗೆ ಸಂಬಂಧಿಸಿದ ಅನೇಕ ಸ್ಮರಣೀಯ ನೆನಪುಗಳಿವೆ. ಅವರು 1994ರ ಆ್ಯಶಸ್ ಸರಣಿಯ ವೇಳೆ ಇಲ್ಲಿಯೇ ಹ್ಯಾಟ್ರಿಕ್ ಸಾಧಿಸಿದ್ದರು. 2006ರ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ 700ನೇ ವಿಕೆಟ್ ಕೂಡ ಕೆಡವಿದ್ದರು.