Advertisement

ಟಿ20 ವಿಶ್ವಕಪ್‌: ಲಂಕಾ ಹರ್ಡಲ್ಸ್‌ ದಾಟಿದ ದಕ್ಷಿಣ ಆಫ್ರಿಕಾ

09:05 PM Oct 30, 2021 | Team Udayavani |

ಶಾರ್ಜಾ: ಗ್ರೂಪ್‌ ಒಂದರ ಮಹತ್ವದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 4 ವಿಕೆಟ್‌ಗಳಿಂದ ಶ್ರೀಲಂಕಾವನ್ನು ಮಣಿಸಿ ನಾಕೌಟ್‌ ರೇಸ್‌ನಲ್ಲಿ ಉಳಿದುಕೊಂಡಿದೆ. ಅರ್ಹತಾ ಸುತ್ತಿನಿಂದ ಬಂದ ಲಂಕೆಯ ಹಾದಿ ದುರ್ಗಮಗೊಂಡಿದೆ.

Advertisement

ಶನಿವಾರದ ಶಾರ್ಜಾ ಸಮರದಲ್ಲಿ ಬ್ಯಾಟಿಂಗಿಗೆ ಇಳಿಸಲ್ಪಟ್ಟ ಶ್ರೀಲಂಕಾ 20 ಓವರ್‌ಗಳಲ್ಲಿ 142ಕ್ಕೆ ಆಲೌಟ್‌ ಆಯಿತು. ಕೊನೆಯಲ್ಲಿ ಆತಂಕದ ಕ್ಷಣಗಳನ್ನು ಕಂಡ ದಕ್ಷಿಣ ಆಫ್ರಿಕಾ 19.5 ಓವರ್‌ಗಳಲ್ಲಿ 6 ವಿಕೆಟಿಗೆ 146 ರನ್‌ ಬಾರಿಸಿ ತನ್ನ ದ್ವಿತೀಯ ಗೆಲುವು ಸಾಧಿಸಿತು. ಸ್ಪಿನ್ನರ್‌ ವನಿಂದು ಹಸರಂಗ ಅವರ ಹ್ಯಾಟ್ರಿಕ್‌ ಸಾಧನೆ ವ್ಯರ್ಥಗೊಂಡಿತು.

26 ರನ್ನಿಗೆ 2 ವಿಕೆಟ್‌ ಕಳೆದುಕೊಂಡು ಆಘಾತಕಾರಿ ಆರಂಭ ಪಡೆದ ದಕ್ಷಿಣ ಆಫ್ರಿಕಾ, ನಡು ಹಂತದಲ್ಲಿ ಚೇತರಿಸಿಕೊಂಡಿತು. ಆದರೆ ಡೆತ್‌ ಓವರ್‌ಗಳಲ್ಲಿ ವನಿಂದು ಹಸರಂಗ ದಾಳಿಗೆ ಸಿಲುಕಿ ಮತ್ತೆ ಇಕ್ಕಟಿಗೆ ಸಿಲುಕಿತು. ಅಂತಿಮ ಓವರ್‌ನಲ್ಲಿ 15 ರನ್‌ ತೆಗೆಯುವ ಸವಾಲು ಎದುರಾಯಿತು. ಆದರೆ ಲಹಿರು ಕುಮಾರ ಅವರ ಈ ಓವರ್‌ನಲ್ಲಿ ಸಿಡಿದು ನಿಂತ ಡೇವಿಡ್‌ ಮಿಲ್ಲರ್‌ ಬ್ಯಾಕ್‌ ಟು ಬ್ಯಾಕ್‌ ಸಿಕ್ಸರ್‌ಬಾರಿಸಿ ಲಂಕೆಯ ಗೆಲುವಿನ ಯೋಜನೆಯನ್ನು ವಿಫ‌ಲಗೊಳಿಸಿದರು. 5ನೇ ಎಸೆತವನ್ನು ಬೌಂಡರಿಗೆ ರವಾನಿಸಿದ ರಬಾಡ ತಂಡದ ಜಯವನ್ನು ಸಾರಿದರು.

ದಕ್ಷಿಣ ಆಫ್ರಿಕಾ ಪರ ನಾಯಕ ಟೆಂಬ ಬವುಮ ಸರ್ವಾಧಿಕ 46 ರನ್‌ ಹೊಡೆದರು. ಕಿಲ್ಲರ್‌ ಮಿಲ್ಲರ್‌ ಗಳಿಕೆ 13 ಎಸೆತಗಳಿಂದ ಅಜೇಯ 23 ರನ್‌.

ಶ್ರೀಲಂಕಾ ಸರದಿಯಲ್ಲಿ 72 ರನ್‌ ಬಾರಿಸಿದ ಆರಂಭಕಾರ ಪಾಥುಮ್‌ ನಿಸ್ಸಂಕ ಅವರದು ಏಕಾಂಗಿ ಹೋರಾಟವಾಗಿತ್ತು. 19ನೇ ಓವರ್‌ ತನಕ ಕ್ರೀಸ್‌ ಆಕ್ರಮಿಸಿಕೊಂಡ ಅವರು 58 ಎಸೆತಗಳಿಂದ ತಮ್ಮ ಇನ್ನಿಂಗ್ಸ್‌ ಕಟ್ಟಿದರು. ಸಿಡಿಸಿದ್ದು 6 ಫೋರ್‌ ಹಾಗೂ 3 ಸಿಕ್ಸರ್‌.

Advertisement

ತಬ್ರೇಜ್‌ ಮತ್ತು ಡ್ವೇನ್‌ ಪ್ರಿಟೋರಿಯಸ್‌ ಇಬ್ಬರೂ 17 ರನ್‌ ವೆಚ್ಚದಲ್ಲಿ 3 ವಿಕೆಟ್‌ ಕೆಡವಿದರು. ನೋರ್ಜೆ 2 ವಿಕೆಟ್‌ ಕಿತ್ತರು.

ಇದನ್ನೂ ಓದಿ:ಸಿಂದಗಿ ಉಪಚುನಾವಣೆ ಹಿನ್ನೆಲೆ : ಪುರಸಭೆ ಅಧ್ಯಕ್ಷ ಹಾಗೂ ಪಿಎಸ್‌ಐ ನಡುವೆ ಮಾತಿನ ಚಕಮಕಿ

ಸಂಕ್ಷಿಪ್ತ ಸ್ಕೋರ್‌: ಶ್ರೀಲಂಕಾ-20 ಓವರ್‌ಗಳಲ್ಲಿ 142 (ನಿಸ್ಸಂಕ 72, ಅಸಲಂಕ 21, ತಬ್ರೇಜ್‌ 17ಕ್ಕೆ 3, ಪ್ರಿಟೋರಿಯಸ್‌ 17ಕ್ಕೆ 3, ನೋರ್ಜೆ 27ಕ್ಕೆ 2). ದಕ್ಷಿಣ ಆಫ್ರಿಕಾ-19.5 ಓವರ್‌ಗಳಲ್ಲಿ 6 ವಿಕೆಟಿಗೆ 146 (ಬವುಮ 46, ಮಿಲ್ಲರ್‌ ಔಟಾಗದೆ 23, ಹಸರಂಗ 20ಕ್ಕೆ 3, ಚಮೀರ 27ಕ್ಕೆ 2). ಪಂದ್ಯಶ್ರೇಷ್ಠ: ತಬ್ರೇಜ್‌

ಹ್ಯಾಟ್ರಿಕ್‌ ಹೀರೋ ಹಸರಂಗ
ಹಸರಂಗ 14ನೇ ಓವರ್‌ನ ಅಂತಿಮ ಎಸೆತದಲ್ಲಿ ಮಾರ್ಕ್‌ರಮ್‌ ವಿಕೆಟ್‌ ಉರುಳಿಸಿದರು. ಮುಂದಿನ ಸ್ಪೆಲ್‌ ನಡೆಸಿದ್ದು 18ನೇ ಓವರ್‌ನಲ್ಲಿ. ಇಲ್ಲಿ ಮೊದಲೆರಡು ಎಸೆತಗಳಲ್ಲಿ ಬವುಮ ಮತ್ತು ಪ್ರಿಟೋರಿಯಸ್‌ ಅವರನ್ನು ಪೆವಿಲಿಯನ್ನಿಗೆ ಅಟ್ಟಿದರು. ಇದು ಟಿ20 ವಿಶ್ವಕಪ್‌ನಲ್ಲಿ ದಾಖಲಾದ 3ನೇ ಹ್ಯಾಟ್ರಿಕ್‌ ನಿದರ್ಶನ. ಬಾಂಗ್ಲಾದೇಶ ವಿರುದ್ಧದ 2007ರ ಕೇಪ್‌ಟೌನ್‌ ಪಂದ್ಯದಲ್ಲಿ ಬ್ರೆಟ್‌ ಲೀ, ಈ ವರ್ಷದ ಅರ್ಹತಾ ಸುತ್ತಿನಲ್ಲಿ ನೆದರ್ಲೆಂಡ್ಸ್‌ ವಿರುದ್ಧ ಕರ್ಟಿಸ್‌ ಕ್ಯಾಂಫ‌ರ್‌ ಹ್ಯಾಟ್ರಿಕ್‌ ಸಾಧನೆಗೈದಿದ್ದರು.

ಹಸರಂಗ ಏಕದಿನ ಹಾಗೂ ಟಿ20 ಪಂದ್ಯಗಳೆರಡರಲ್ಲೂ ಹ್ಯಾಟ್ರಿಕ್‌ ವಿಕೆಟ್‌ ಉರುಳಿಸಿದ 4ನೇ ಬೌಲರ್‌. ಬ್ರೆಟ್‌ ಲೀ, ತಿಸರ ಪೆರೆರ, ಲಸಿತ ಮಾಲಿಂಗ ಉಳಿದಿಬ್ಬರು.

Advertisement

Udayavani is now on Telegram. Click here to join our channel and stay updated with the latest news.

Next