Advertisement

ಮಕಾಡೆ ಮಲಗಿದ ಶಾಮಿಯಾನ ಉದ್ಯಮ : ವರ್ಷದ ಕೂಳು ಕಸಿದು ಕೊಂಡ ಹೆಮ್ಮಾರಿ!

07:34 PM Oct 12, 2020 | sudhir |

ಹುಬ್ಬಳ್ಳಿ: ಮದುವೆ, ಮುಂಜಿ ಇನ್ನಿತರೆ ಸಮಾರಂಭಗಳ ಅಂದ ಚೆಂದ ಹೆಚ್ಚಿಸುತ್ತಿದ್ದ ಶಾಮಿಯಾನ ಉದ್ಯಮ ಕೋವಿಡ್‌-19ಗೆ ತತ್ತರಿಸಿ ಹೋಗಿದೆ. ಇದನ್ನೇ ನೆಚ್ಚಿಕೊಂಡಿದ್ದ ಕಾರ್ಮಿಕರ ಬದುಕು ಮೂರಾಬಟ್ಟೆಯಾಗಿದೆ. ವರ್ಷದ ಮುಕ್ಕಾಲು ದುಡಿಮೆಯನ್ನು ಕಳೆದುಕೊಂಡ ಮಾಲೀಕರು ಬೀದಿಗೆ ಬಂದಿದ್ದಾರೆ. ಶೇ.50-60 ಉದ್ಯೋಗ ಕಡಿತಗೊಂಡಿದ್ದು, ವರ್ಷದ ತುತ್ತು ಕಳೆದುಕೊಂಡ ಉದ್ಯಮ ಮುಂದಿನ ಸೀಸನ್‌ನತ್ತ ಚಿತ್ತ ಹರಿಸಿದೆ.

Advertisement

ಹಿಂದಿನಂತೆ ಶಾಮಿಯಾನ ಉದ್ಯಮ ಪೆಂಡಾಲ್‌, ಅಡುಗೆ ಪಾತ್ರೆ, ಕುರ್ಚಿಗೆ ಸೀಮಿತವಾಗದೆ ದೊಡ್ಡ ಉದ್ಯಮವಾಗಿ ಬೆಳೆಯುತ್ತಿದೆ. ಇಲೆಕ್ಟ್ರಾನಿಕ್‌, ಇಲೆಕ್ಟ್ರಿಕಲ್‌, ಧ್ವನಿ, ಬೆಳಕು ಹೀಗೆ ಹಲವು ತಂತ್ರಜ್ಞಾನ ಹೊಂದಿದೆ. ಉತ್ತರ ಕರ್ನಾಟಕ ಭಾಗದಲ್ಲಿ ವಾಣಿಜ್ಯ ನಗರಿಯ ಶಾಮಿಯಾನ ಉದ್ಯಮ ದೊಡ್ಡ ಮಾರುಕಟ್ಟೆಯನ್ನು ಸೃಷ್ಟಿಸಿಕೊಂಡಿದೆ. ಜಿಲ್ಲೆಯಲ್ಲಿ ಸುಮಾರು 550 ಶಾಮಿಯಾನ ಅಂಗಡಿಗಳಿದ್ದು, ಈ ಕ್ಷೇತ್ರದಲ್ಲಿ ಕನಿಷ್ಟ 3000ಕ್ಕೂ ಹೆಚ್ಚು ಕಾರ್ಮಿಕರಿದ್ದಾರೆ. ರಾಜ್ಯ ಸೇರಿದಂತೆ ಹೊರ ರಾಜ್ಯದ ಕಾರ್ಮಿಕರು ಇಲ್ಲಿದ್ದಾರೆ. ಇನ್ನೂ ಬೃಹತ್‌ ಸಮಾರಂಭಗಳ ಆಧಾರದ ಮೇಲೆ ಕಾರ್ಮಿಕರ ಸಂಖ್ಯೆ ಹೆಚ್ಚಾಗಲಿದೆ. ಹೀಗಾಗಿ ಈ ಉದ್ಯಮವನ್ನು ನೆಚ್ಚಿ ಕೊಂಡವರ ಸಂಖ್ಯೆ ದೊಡ್ಡದು.

ಇಲ್ಲಿನ ಶಾಮಿಯಾನ ಉದ್ಯಮಕ್ಕೆ ಕೇವಲ ರಾಜ್ಯ ಮಾತ್ರವಲ್ಲದೇ ಹೊರ ರಾಜ್ಯಗಳಲ್ಲಿ ಬೃಹತ್‌ ಸಮಾರಂಭಗಳಿಗೂ ಬೇಡಿಕೆಯಿದೆ. ಆದರೆ ಕೊರೊನಾ ಇಡೀ ಉದ್ಯಮಕ್ಕೆ ಕೊಳ್ಳಿ ಇಟ್ಟಿದೆ. ಹೊರ ರಾಜ್ಯದ ಕಾರ್ಮಿಕರು ತಮ್ಮ ರಾಜ್ಯಕ್ಕೆ ತೆರಳಿದ್ದರೆ, ಇಲ್ಲೇ ಇರುವವರಿಗೆ ದುಡಿಮೆ ಇಲ್ಲದಂತಾಗಿದೆ. ಇನ್ನೂ ಕೋಟ್ಯಂತರ ರೂ. ಹೂಡಿಕೆ ಮಾಡಿದ ಮಾಲೀಕರು ದಯನೀಯ ಪರಿಸ್ಥಿತಿಗೆ ತಲುಪಿದ್ದಾರೆ. ಸ್ವಂತ ಅಂಗಡಿ, ಗೋದಾಮು ಇದ್ದವರಿಗೆ ಆದಾಯ ಕೈತಪ್ಪಿದೆ ಎನ್ನುವುದು ಒಂದಾದರೆ ಎಲ್ಲವನ್ನೂ ಬಾಡಿಗೆ ಮೇಲೆ ನಡೆಸುವವರು ಅಕ್ಷರಶಃ ಬೀದಿಗೆ ಬಂದಿದ್ದಾರೆ.

ಇದನ್ನೂ ಓದಿ:ಅದೃಷ್ಟದ ಕೆಕೆಆರ್‌ಗೆ ಆರ್‌ಸಿಬಿ ಸವಾಲು: ಕಾರ್ತಿಕ್- ಕೊಹ್ಲಿ ಕಾಳಗದಲ್ಲಿ ಗೆಲುವು ಯಾರಿಗೆ?

Advertisement

ತಪಿತು ದುಡಿಮೆ-ಆದಾಯ
ಶಾಮಿಯಾನ ಉದ್ಯಮಕ್ಕೆ ವರ್ಷದಲ್ಲಿ ಮೂರ್‍ನಾಲ್ಕು ತಿಂಗಳು ಬಿಡುವಿಲ್ಲದ ಸಮಯ. ಯುಗಾದಿ ಮುಗಿಯುತ್ತಿದ್ದಂತೆ ಮಾರ್ಚ್‌
ನಿಂದ ಜೂನ್‌ವರೆಗೂ ಮದುವೆ, ಶುಭ ಸಮಾರಂಭಗಳಿಂದ ಇವರಿಗೆ ಪುರುಸೊತ್ತಿಲ್ಲದ ದುಡಿಮೆ ಕಾಲ. ಈ ಅವಧಿಯಲ್ಲಿಯೇ
ಕೊರೊನಾ ವಕ್ಕರಿಸಿಕೊಂಡು ಲಾಕ್‌ಡೌನ್‌ ಘೋಷಣೆಯಾಯಿತು. ಇದರಿಂದಾಗಿ ವರ್ಷದ ದುಡಿಮೆಯಲ್ಲಿ ಶೇ.70 ದುಡಿಮೆ ಕಾಣುತ್ತಿದ್ದ ಸೀಸನ್‌ ಕೈತಪ್ಪಿ ಹೋಗಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಸುಮಾರು 9-10 ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಹೂಡಿಕೆಯೆಲ್ಲ ಮೈಮೇಲೆ
ಶಾಮಿಯಾನ ಉದ್ಯಮದಲ್ಲಿ ತೀವ್ರ ಪೈಪೋಟಿ ಇರುವುದರಿಂದ ಸಮಾರಂಭದ ಅಂದ ಚೆಂದಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ.
ಪ್ರತಿಯೊಂದು ಕಾರ್ಯಕ್ರಮಕ್ಕೂ ಹೊಸ ಬಗೆಯ ವಿನ್ಯಾಸ, ಬಟ್ಟೆ, ಲೈಟಿಂಗ್‌ ವ್ಯವಸ್ಥೆಗಳ ಬೇಡಿಕೆ ಇರುತ್ತದೆ. ಗ್ರಾಹಕರ ಬೇಡಿಕೆ
ಈಡೇರಿಸುವ ಕಾರಣದಿಂದ ಹೊಸ ಸಾಮಗ್ರಿಗಳ ಖರೀದಿ ಕೆಲಸ ಪ್ರತಿಯೊಂದು ಸಮಾರಂಭಕ್ಕೂ ಇರುತ್ತದೆ. ಮೇಲ್ನೋಟಕ್ಕೆ ಶಾಮಿಯಾನ ಸರಳವಾಗಿ ಕಂಡರೂ ಕೋಟ್ಯಂತರ ರೂ. ಹೂಡಿಕೆ ಇರುತ್ತದೆ. ಹೀಗಾಗಿ ಮದುವೆ ಸೀಸನ್‌ ಆರಂಭವಾಗುವ ಹಿನ್ನೆಲೆಯಲ್ಲಿ ಗ್ರಾಹಕರಿಂದ ಬೇಡಿಕೆ ಪಡೆದು ಅವರಿಗೆ ಅಗತ್ಯವಾದ ರೀತಿಯಲ್ಲಿ ವಿನ್ಯಾಸಕ್ಕೆ ಹೊಸ ಸಾಮಗ್ರಿಗಳನ್ನು ಖರೀದಿಸಿದ್ದು, ಹೂಡಿಕೆ ಭಾರವೆಲ್ಲ ಮೈಮೇಲೆ ಬಿದ್ದಿದೆ.

ಮುಂಗಡ ಹಣ ವಾಪಸ್‌ ಕಷ್ಟ
ಗ್ರಾಹಕರು ಸಲ್ಲಿಸುವ ಬೇಡಿಕೆಗೆ ತಕ್ಕಂತೆ ಕೆಲವರು ಮುಂಗಡ ಹಣ ಪಡೆದಿದ್ದರು. ಆ ಹಣ ಸೇರಿದಂತೆ ತಮ್ಮ ಬಂಡವಾಳವನ್ನೂ ಹೊಸ ಸಾಮಗ್ರಿಗಳ ಖರೀದಿಗೆ ಹೂಡಿಕೆ ಮಾಡಿದ್ದರು. ಆದರೆ ಇದೀಗ ಮದುವೆಗಳು ಸಂಪೂರ್ಣ ಸ್ಥಗಿತಗೊಂಡಿದ್ದು, ಗ್ರಾಹಕರ
ಮುಂಗಡ ಹಣ ವಾಪಸ್‌ ನೀಡಲಾಗದ ದುಸ್ಥಿತಿ ಉಂಟಾಗಿದೆ. ಕೆಲ ಗ್ರಾಹಕರು ತಮ್ಮ ಮದುವೆ ಮುಂದೂಡಿದ್ದರೆ ಇನ್ನೂ ಕೆಲವರು ಸರಳವಾಗಿ ಸಮಾರಂಭಗಳನ್ನು ಪೂರ್ಣಗೊಳಿಸಿದ್ದು, ಹಣ ವಾಪಸ್‌ ನೀಡುವಂತೆ  ಕೇಳುತ್ತಿದ್ದಾರೆ. ಈ ಉದ್ಯಮದಲ್ಲಿ ಉತ್ತಮ ಸ್ಥಿತಿಯಲ್ಲಿರುವ ಕೆಲವರು ಮುಂಗಡ ಹಣ ವಾಪಸ್‌ ನೀಡಿದ್ದಾರೆ.

ಶಾಮಿಯಾನ ಇತಿಹಾಸದಲ್ಲಿ ಇಂತಹ ದುಸ್ಥಿತಿ ಮೊದಲು. ಇಡೀ ಉದ್ಯಮ ನೆಲಕಚ್ಚಿದ್ದು, ಸೀಸನ್‌ ಆರಂಭದಲ್ಲಿ ಹೂಡಿಕೆ ಮಾಡಿದವರು ಸಂಪೂರ್ಣ ನಷ್ಟ ಅನುಭವಿಸಿದ್ದಾರೆ. ಉದ್ಯಮದ ಪ್ರಗತಿಗೆ ಸರ್ಕಾರ ಬ್ಯಾಂಕ್‌ ಗಳ ಮೂಲಕ ಅಗತ್ಯ ದಾಖಲೆ ಪಡೆದು ಬಡ್ಡಿ ರಹಿತ ಸಾಲ ನೀಡಬೇಕು. ಇದೇ ಉದ್ಯಮದಲ್ಲಿರುವ ಕಾರ್ಮಿಕರಿಗೆ ಆರ್ಥಿಕ ನೆರವು ನೀಡುವ ಕೆಲಸ ಆಗಬೇಕು.
ವರ್ಷದ ದುಡಿಮೆಯನ್ನು ಸಂಪೂರ್ಣ ಕಳೆದುಕೊಂಡು ಕಾರ್ಮಿಕರ ವೇತನಕ್ಕೂ ಕೆಲವರಿಗೆ ದುಸ್ತರವಾಗಿದೆ.

– ಶಿವಕುಮಾರ ಹಿರೇಮಠ, ಶಿವಕುಮಾರ ಶಾಮಿಯಾನ

– ಹೇಮರೆಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next