ಮುಂಬೈ: ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಆರಂಭಕ್ಕೆ ಎರಡು ದಿನ ಬಾಕಿ ಇರುವಂತೆ ತಂಡಕ್ಕೆ ಆಘಾತ ಎದುರಾಗಿದೆ. ಅನುಭವಿ ಬೌಲರ್ ಮೊಹಮದ್ ಶಮಿ ಅವರಿಗೆ ಕೋವಿಡ್ ಪಾಸಿಟಿವ್ ಆಗಿದ್ದು ತಂಡದಿಂದ ಹೊರಬಿದ್ದಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯು ಸೆ.20ರಿಂದ ಆರಂಭವಾಗಲಿದೆ. ಮೊದಲ ಪಂದ್ಯವು ಮೊಹಾಲಿಯಲ್ಲಿ ನಡೆಯಲಿದೆ. ಕಳೆದ ವರ್ಷದ ಟಿ20 ವಿಶ್ವಕಪ್ ಬಳಿಕ ಮೊಹಮ್ಮದ್ ಶಮಿ ಅವರು ಟಿ20 ಕ್ರಿಕೆಟ್ ನ ಭಾಗವಾಗಿರಲಿಲ್ಲ. ಇದೀಗ ಈ ಬಾರಿಯ ಟಿ20 ವಿಶ್ವಕಪ್ ಗೆ ಶಮಿ ಅವರನ್ನು ಬ್ಯಾಕಪ್ ಆಗಿ ಆಯ್ಕೆ ಮಾಡಲಾಗಿದ್ದು, ಅದಕ್ಕೂ ಮೊದಲ ಆಸೀಸ್ ಸರಣಿಗೆ ಸೇರಿಸಲಾಗಿತ್ತು. ಆದರೆ ಅವರಿಗೆ ಕೋವಿಡ್ ಪಾಸಿಟಿವ್ ಆಗಿದೆ.
ಇದನ್ನೂ ಓದಿ:ಮಡಿಕೇರಿ : ಆತಂಕ ಮೂಡಿಸಿದ ಹುಲಿ ಸಂಚಾರ, ಚುಚ್ಚುಮದ್ದು ನೀಡಿದರೂ ತಪ್ಪಿಸಿಕೊಂಡ ಹುಲಿ
ಶಮಿ ಬದಲಿಗೆ ವೇಗಿ ಉಮೇಶ್ ಯಾದವ್ ಅವರನ್ನು ತಂಡಕ್ಕೆ ಸೇರಿಸಲಾಗಿದೆ ಎಂದು ವರದಿಯಾಗಿದೆ. ಉಮೇಶ್ ಯಾದವ್ ಅವರು ಎರಡು ವರ್ಷಗಳ ಬಳಿಕ ರಾಷ್ಟ್ರೀಯ ಟಿ20 ತಂಡದ ಕರೆ ಪಡೆದಿದ್ದಾರೆ. ಇಂಗ್ಲೆಂಡ್ ನಲ್ಲಿ ಕೌಂಟಿ ಕ್ರಿಕೆಟ್ ಆಡುತ್ತಿದ್ದ ಉಮೇಶ್ ಯಾದವ್ ಅವರು ಗಾಯದಿಂದ ಮರಳಿ ಬಂದಿದ್ದು, ಬೆಂಗಳೂರಿನ ಎನ್ ಸಿಎ ದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಮೂರು ಟಿ20 ಪಂದ್ಯಗಳು ಸೆಪ್ಟೆಂಬರ್ 20, 23 ಮತ್ತು 25 ರಂದು ನಡೆಯಲಿದ್ದು, ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಟಿ20 ಪಂದ್ಯಗಳು ಸೆಪ್ಟೆಂಬರ್ 28, ಅಕ್ಟೋಬರ್ 2 ಮತ್ತು ಅಕ್ಟೋಬರ್ 4 ರಂದು ನಡೆಯಲಿದೆ.