ಮುಂಬಯಿ: ಬೌಲರ್ ಮೊಹಮ್ಮದ್ ಶಮಿ ಹಾಗೂ ಬಿಸಿಸಿಐ ಭಾರೀ ಅವಮಾನದಿಂದ ಪಾರಾಗಿದೆ. ಭಾರತ ಕ್ರಿಕೆಟ್ ತಂಡದ ಸದಸ್ಯನಾಗಿ ಜು. 29ಕ್ಕೆ ಅಮೆರಿಕಕ್ಕೆ ಹೊರಟಿದ್ದ ಶಮಿಗೆ ಮುಂಬಯಿಯಲ್ಲಿರುವ ಅಮೆರಿಕ ರಾಯಭಾರ ಕಚೇರಿ ವೀಸಾ ನೀಡಲು ನಿರಾಕರಿಸಿತ್ತು. ಶಮಿ ಮೇಲೆ ಪೊಲೀಸ್ ದೂರುಗಳು ಇರುವುದರಿಂದ ಈ ಬೆಳವಣಿಗೆ ನಡೆದಿತ್ತು. ಕೂಡಲೇ ಮಧ್ಯ ಪ್ರವೇಶಿಸಿದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ, ಶಮಿ ಕುರಿತಾದ ಎಲ್ಲ ಮಾಹಿತಿ ಗಳನ್ನು ನೀಡಿ ವೀಸಾ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ನಿರಾಕರಣೆಯೇಕೆ?
ಮೊಹಮ್ಮದ್ ಶಮಿ ವಿರುದ್ಧ ಕಳೆದ ಒಂದು ವರ್ಷದಿಂದ ಕೋಲ್ಕತಾದಲ್ಲಿ ಕಾನೂನು ಹೋರಾಟ ನಡೆಯುತ್ತಿದೆ. ಪತ್ನಿ ಹಸಿನ್ ಜಹಾನ್, ಶಮಿ ವಿರುದ್ಧ ವರದಕ್ಷಿಣೆ ಕಿರುಕುಳ (498 ಎ ವಿಧಿಯಡಿ), ಲೈಂಗಿಕ ಕಿರುಕುಳ (354 ಎ) ದೂರು ದಾಖಲಿಸಿದ್ದಾರೆ. ಇದರ ವಿರುದ್ಧ ಇದೀಗ ಕೋಲ್ಕತಾದಲ್ಲಿ ವಿಚಾರಣೆ ನಡೆಯುತ್ತಿದೆ. ಅಪರಾಧಿ ಹಿನ್ನೆಲೆಯಲ್ಲಿರುವ ವ್ಯಕ್ತಿಗಳಿಗೆ ವೀಸಾ ನಿರಾಕರಿಸುವುದು ಮಾ ಮೂಲು. ಇದೇ ಹಿನ್ನೆಲೆಯಲ್ಲಿ ಶಮಿಗೆ ವೀಸಾ ನಿರಾಕರಿಸಲ್ಪಟ್ಟಿದೆ. ಆದರೆ ಮಧ್ಯಪ್ರ ವೇಶಿಸಿದ ಬಿಸಿಸಿಐ, ಶಮಿಯ ಕ್ರಿಕೆಟ್ ಸಾಧನೆಗಳು, ಅವರ ವಿರುದ್ಧದ ಪೊಲೀಸ್ ಪ್ರಕರಣಗಳ ಸಂಪೂರ್ಣ ಮಾಹಿತಿಯನ್ನು ಅಮೆರಿಕ ರಾಯಭಾರ ಕಚೇರಿಗೆ ಒದಗಿ ಸಿತು. ಇದನ್ನೆಲ್ಲ ಪರಿಶೀಲಿಸಿದ ಅನಂತರ ಶಮಿಗೆ ವೀಸಾ ನೀಡಲಾಗಿದೆ.
ಜು. 29ಕ್ಕೆ ಶಮಿ ಭಾರತ ಕ್ರಿಕೆಟ್ ತಂಡದ ಸದಸ್ಯರೊಂದಿಗೆ ಅಮೆರಿಕಕ್ಕೆ ಹೊರಡಲಿ ದ್ದಾರೆ. ಅಮೆರಿಕದ ಫ್ಲೋರಿಡಾದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಎರಡು ಟಿ20 ಪಂದ್ಯ ನಡೆಯಲಿದೆ. ಶಮಿ ಟಿ20 ತಂಡದಲ್ಲಿ ಸ್ಥಾನ ಪಡೆದಿಲ್ಲವಾದರೂ ಕೂಡಲೇ ಶುರುವಾಗುವ ಏಕದಿನ, ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದ್ದರಿಂದ ಟಿ20 ತಂಡದ ಜತೆಗೇ ತೆರಳಲಿದ್ದಾರೆ.