ದಾವಣಗೆರೆ: ಪ್ರಧಾನ ಮಂತ್ರಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾ, ಅಮಿತ್ ಶಾ ಯಾರೂ ಸಹ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಅಸ್ತಿರ ಮಾಡುವ ಪ್ರಯತ್ನ ಮಾಡುತ್ತಿಲ್ಲ. ಸ್ವಯಂಕೃತ ತಪ್ಪುಗಳಿಂದ ಸರ್ಕಾರ ತಾನೇ ತಾನಾಗಿ ಪತನ ಆಗಲಿದೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ತಿಳಿಸಿದರು.
ಆ.27ರ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಅಸ್ತಿರಗೊಳಿಸಲು ಯಾರೂ ಪ್ರಯತ್ನ ಪಡುತ್ತಿಲ್ಲ ಎಂದರು.
ರಾಜ್ಯ ಕಾಂಗ್ರೆಸ್ ಸರ್ಕಾರ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಭ್ರಷ್ಟಾಚಾರ ನಡೆಸುವ ಮೂಲಕ ವಾಲ್ಮೀಕಿ ಅವರಿಗೆ ಅವಮಾನ ಮಾಡಿದೆ. ಮುಡಾ, ವಾಲ್ಮೀಕಿ ಹಗರಣದಿಂದ ರಾಜ್ಯದ ಜನರು ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದಾರೆ. ಹಾಗಾಗಿಯೇ ಕಾಂಗ್ರೆಸ್ ನ ರಾಷ್ಟ್ರೀಯ ನಾಯಕರು ವಿಷಯಾಂತರ ಮಾಡಲು ಶಾಸಕ ರವಿ ಗಣಿಗ ಇತರರಿಗೆ ಸುಪಾರಿ ನೀಡಿದ್ದಾರೆ ಎಂದು ದೂರಿದರು.
ಬಿಜೆಪಿ ಸರ್ಕಾರವನ್ನು ಅಸ್ತಿರಗೊಳಿಸಲು ಶಾಸಕರಿಗೆ 100 ಕೋಟಿ ಆಫರ್ ಮಾಡಿದೆ ಎಂದು ಹೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಸಕ ರವಿ ಗಣಿಗ ಅವರು ಯಾವ ಸಂದರ್ಭ, ಯಾರು ಆಫರ್ ಮಾಡಿದ್ದರು ಎಂಬುದು ಸೇರಿದಂತೆ ಆಡಿಯೋ ಮತಿತ್ತರ ದಾಖಲೆ ಬಿಡುಗಡೆ ಮಾಡಬೇಕು ಎಂದು ಸವಾಲು ಹಾಕಿದರು.
ಲೋಕಸಭಾ ಚುನಾವಣೆ ಮುನ್ನ 50 ಕೋಟಿ ಈಗ 100 ಕೋಟಿ ಆಫರ್ ಮಾಡಲಾಗುತ್ತಿದೆ ಎನ್ನುವವರು ಯಾಕೆ ಇಡಿ, ಐಟಿಗೆ ದೂರು ಕೊಡಲಿಲ್ಲ. ವಿಷಯಾಂತರ ಮಾಡಲು ನಾಟಕವಾಡುತ್ತಿದ್ದಾರೆ. ಈ ರೀತಿಯ ನಾಟಕ ಮಾಡುವುದು ಬಿಟ್ಟು ರಾಜ್ಯದ ಅಭಿವೃದ್ಧಿ ಮಾಡಲಿ ಎಂದು ಒತ್ತಾಯಿಸಿದರು.
ನಿಜವಾಗಿಯೂ ಸಿದ್ದರಾಮಯ್ಯ ಮತ್ತು ರವಿ ಗಣಿಗ ಅವರಿಗೆ ತಾಕತ್ತಿದ್ದರೆ 100 ಕೋಟಿ ಆಫರ್ ಬಗ್ಗೆ ಇಡಿ, ಐಟಿಗೆ ದೂರು ಕೊಡಲಿ. ಅದನ್ನು ಬಿಟ್ಟು ಅವರೇ ಹಾವು ಬಿಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಇಂತಹ ಕೆಟ್ಟ ಸರ್ಕಾರವನ್ನು ನೋಡಿಯೇ ಇಲ್ಲ ಎಂದು ಜನರು ಹಿಡಿಶಾಪ ಹಾಕುತ್ತಿದ್ದಾರೆ ಎಂದು ದೂರಿದರು.
ಬಿಜೆಪಿ ರಾಜ್ಯಪಾಲರ ಭವನವನ್ನು ದುರ್ಬಳಕೆ ಮಾಡಿಲ್ಲ ಎಂದು ತಿಳಿಸಿದರು.