ಬೆಂಗಳೂರು: ಸೀಗೆಹಳ್ಳಿಯ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಬುಧವಾರ ಭೇಟಿ ನೀಡಿದ್ದ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ್ ಹಿರೇಮನಿ, ಅಲ್ಲಿನ ಸಿಬ್ಬಂದಿಗೆ ಸೂಕ್ತ ವ್ಯವಸ್ಥೆ ಕಲ್ಪಿಸದಿರುವ ಕುರಿತು ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು.
ಬಿಬಿಎಂಪಿ ವ್ಯಾಪ್ತಿಯ ಸೀಗೆಹಳ್ಳಿ, ಕನ್ನಹಳ್ಳಿ ಹಾಗೂ ದೊಡ್ಡಬಳ್ಳಾಪುರದ ಎಂಎಸ್‌ಜಿಪಿ ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ದಿಢೀರ್ ಭೇಟಿ ನೀಡಿದ ಅವರು, ಘಟಕದಲ್ಲಿನ ಅವ್ಯವಸ್ಥೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಈ ವೇಳೆ ಮೂರು ತ್ಯಾಜ್ಯ ಸಂಸ್ಕರಣಾ ಘಟಕಗಳಲ್ಲಿನ ಸಿಬ್ಬಂದಿಗೆ ಶೂ, ಗ್ಲೌಸ್ ಹಾಗೂ ಸಮವಸ್ತ್ರ ನೀಡದೆ ಕೆಲಸ ಮಾಡಿಸಿಕೊಳ್ಳುತ್ತಿರುವುದನ್ನು ಕಂಡು, “ಈ ರೀತಿ ದುಡಿಸಿಕೊಳ್ಳುವುದಕ್ಕೆ ನಿಮಗೆ ನಾಚಿಕೆಯಾಗಬೇಕು. ಕನಿಷ್ಠ ಸೌಜನ್ಯವೂ ಇಲ್ಲದಂತೆ ವರ್ತಿಸುತ್ತೀರಲ್ಲಾ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂತಹ ಶೌಚಾಲಯ ಬಳಸುತ್ತಾರೇನ್ರಿ?: “ಸೀಗೆಹಳ್ಳಿ ತ್ಯಾಜ್ಯ ಸಂಸ್ಕರಣ ಘಟಕದ ಶೌಚಾಲಯ ಭೂತ ಬಂಗಲೆಯಂತಿದೆ. ಈ ಶೌಚಾಲಯವನ್ನು ಮನುಷ್ಯರು ಬಳಸುತ್ತಾರೇನ್ರಿ, ಸಿಬ್ಬಂದಿ ಆರೋಗ್ಯ ನಿಮಗೆ ಲೆಕ್ಕಕ್ಕೆ ಇಲ್ಲವೇ ಎಂದು ಹಿರೇಮನಿ ಪ್ರಶ್ನಿಸಿದರು. ಘಟಕದ ನಿರ್ವಹಣೆಯನ್ನು ಖಾಸಗಿ ಸಂಸ್ಥೆ ಮಾಡುತ್ತಿದೆ ಎಂದು ಸಬೂಬು ಹೇಳಲು ಮುಂದಾದ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಅವರು, ಇದು ಬಿಬಿಎಂಪಿ ಆಸ್ತಿ ಎನ್ನುವುದು ನೆನಪಿರಲಿ ಎಂದು ಎಚ್ಚರಿಕೆ ನೀಡಿದರು.
ವಿಶೇಷ ಕಾರ್ಮಿಕರು: ತ್ಯಾಜ್ಯ ಸಂಸ್ಕರಣ ಘಟಕಗಳಲ್ಲಿನ ಸಿಬ್ಬಂದಿಗೆ ನೀಡುತ್ತಿರುವ ವೇತನ, ವಿಮಾ ಹಾಗೂ ಭವಿಷ್ಯ ನಿಧಿ ಸೌಲಭ್ಯಗಳ ಬಗ್ಗೆ ಸಿಬ್ಬಂದಿಯಿಂದ ಮಾಹಿತಿ ಪಡೆದ ಅವರು, ಸಿಬ್ಬಂದಿಗೆ 12 ಸಾವಿರ ವೇತನ ನೀಡುತ್ತಿದ್ದೀರಿ. ಇಷ್ಟು ಕಡಿಮೆ ವೇತನ ಸಾಲುತ್ತಾ ಎಂದರು.
ಡೀಸಿ ಮಟ್ಟದಲ್ಲಿ ಸಭೆಗೆ ಸೂಚನೆ: ದೊಡ್ಡಬಳ್ಳಾಪುರದ ಎಂಎಸ್‌ಜಿಪಿ ತ್ಯಾಜ್ಯ ಸಂಸ್ಕರಣಾ ಘಟಕದ ಸಮೀಪ 400ಕ್ಕೂ ಹೆಚ್ಚು ಚಿಂದಿ ಆಯುವವರು ಅನಧಿಕೃತವಾಗಿ 50ಕ್ಕೂ ಹೆಚ್ಚು ಶೆಡ್‌ಗಳನ್ನು ನಿರ್ಮಿಸಿಕೊಂಡಿರುವುದು ಗಮನಿಸಿದ ಅವರು, ಜಿಲ್ಲಾಧಿಕಾರಿಗಳ ಜತೆ ಈ ಕುರಿತು ಚರ್ಚಿಸುವಂತೆ ಸೂಚಿಸಿದರು.
ಚಿಂದಿ ಆಯುವವರಿಂದ ದಾಖಲೆ ಕೇಳಿದಾಗ ಯಾರು ನೀಡಲಿಲ್ಲ. ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಜಗದೀಶ್ ಹರೇಮನಿ, ಇವರು ಬೇರೆ ದೇಶದಿಂದ ಬಂದಿರುವ ಸಾಧ್ಯತೆ ಇದೆ. ಇವರ ಬಳಿ ಯಾವುದೇ ದಾಖಲೆಗಳಿಲ್ಲ. ಇಷ್ಟು ದೊಡ್ಡ ಪ್ರಮಾಣದಲ್ಲಿ ಇಲ್ಲಿ ಶೆಡ್ ನಿರ್ಮಿಸಿಕೊಳ್ಳಲು ಇವರಿಗೆ ಅವಕಾಶ ನೀಡಿದವರು ಯಾರು. ಇದೊಂದು ಮಾಫಿಯಾದಂತೆ ಬೆಳೆದಿದೆ ಎಂದು ಆರೋಪಿಸಿದರು.