Advertisement

ಶಂಭೂರು ಸರಕಾರಿ ಪ್ರೌಢಶಾಲೆ ; ಸ್ಟೀಮ್‌ ವ್ಯವಸ್ಥೆಯ ಮೂಲಕ ಮಧ್ಯಾಹ್ನದ ಬಿಸಿಯೂಟ

03:13 PM Aug 12, 2022 | Team Udayavani |

ಬಂಟ್ವಾಳ: ಸಾಮಾನ್ಯವಾಗಿ ಸರಕಾರಿ ಶಾಲೆಗಳೆಂದರೆ ಅಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಿಗೆ ಸರಿಯಾದ ಕೊಠಡಿಗಳೇ ಇರುವುದಿಲ್ಲ, ಮಕ್ಕಳು ಜಗಲಿಯಲ್ಲೇ ಕುಳಿತು ಊಟ ಮಾಡಬೇಕಾದ ಸ್ಥಿತಿ ಇರುತ್ತದೆ. ಆದರೆ ಶಂಭೂರು ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆಯು ಇದಕ್ಕೆ ತದ್ವಿರುದ್ಧವಾಗಿದ್ದು, ಇಲ್ಲಿ ಸ್ಟೀಮ್‌ ವ್ಯವಸ್ಥೆಯ ಮೂಲಕ ಬಿಸಿಯೂಟ ಸಿದ್ಧಗೊಳ್ಳುತ್ತದೆ. ಜತೆಗೆ ಊಟ ಮಾಡುವುದಕ್ಕೆ ವಿಶಾಲ ಡೈನಿಂಗ್‌ ಹಾಲ್‌ ಕೂಡ ಇಲ್ಲಿದೆ.

Advertisement

ತೀರಾ ಗ್ರಾಮೀಣ ಭಾಗದಲ್ಲಿರುವ ಶಂಭೂರು ಪ್ರೌಢಶಾಲೆಯು ಗುಣಮಟ್ಟದ ಶಿಕ್ಷಣದ ಮೂಲಕ ಖಾಸಗಿ ಶಾಲೆಗಳಿಗೂ ಸ್ಪರ್ಧೆ ಒಡ್ಡುವ ರೀತಿ ಬೆಳೆದು ನಿಂತಿದೆ. ಶಾಲೆಯನ್ನು ಕಳೆದ 10 ವರ್ಷಗಳಿಂದ ಬೊಂಡಾಲ ಚಾರಿಟೆಬಲ್‌ ಟ್ರಸ್ಟ್‌ನವರು ದತ್ತು ಪಡೆದು ಮುನ್ನಡೆಸುತ್ತಿದ್ದಾರೆ. ದತ್ತು ಸಂಸ್ಥೆಯು ಜನಪ್ರತಿನಿಧಿಗಳು ಹಾಗೂ ತಮ್ಮ ದತ್ತು ನಿಧಿಯ ಮೂಲಕ ನಿರಂತರವಾಗಿ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಿಸಿದೆ.

2003ರಲ್ಲಿ ಸ್ಥಳೀಯ ನಿವಾಸಿ ಧರ್ಣಪ್ಪ ಪೂಜಾರಿ ಅವರ ಮನೆಯಲ್ಲಿ ಶಂಭೂರು ಪ್ರೌಢಶಾಲೆ ಆರಂಭಗೊಂಡಿದ್ದು, ಸರಕಾರಿ ಶಾಲೆಗಳ ದತ್ತು ಎನ್ನುವ ಕಲ್ಪನೆಯೇ ಇಲ್ಲದ ಕಾಲಘಟ್ಟದಲ್ಲಿ 2008ರಲ್ಲಿ ಬೊಂಡಾಲ ಜಗನ್ನಾಥ ಶೆಟ್ಟಿ ದತ್ತು ಪಡೆದು ಹಂತ ಹಂತವಾಗಿ ಅಭಿವೃದ್ಧಿಯತ್ತ ಮುನ್ನಡೆಸುತ್ತಿದ್ದರು. ಅವರು ಮೃತಪಟ್ಟ ಬಳಿಕ 2013ರಲ್ಲಿ ಸರಕಾರ ಅವರ ಹೆಸರನ್ನೇ ಶಾಲೆಗೆ ನಾಮಕರಣ ಮಾಡಿತು. ಅದಕ್ಕಿಂತ ಮುಂಚೆಯೇ ಅವರ ಸಹೋದರ ಸಚ್ಚಿದಾನಂದ ಶೆಟ್ಟಿ ಬೊಂಡಾಲ ಅವರು ಬೊಂಡಾಲ ಚಾರಿಟೆಬಲ್‌ ಟ್ರಸ್ಟ್‌ ಮೂಲಕ ದತ್ತು ಪಡೆದಿದ್ದರು.

ಅವರು ದತ್ತು ಪಡೆದ ವರ್ಷವೇ ಶಾಲೆಯಲ್ಲಿ ವಿನೂತನ ಕಲ್ಪನೆಯ ಮೂಲಕ ಬಿಸಿಯೂಟ ಸ್ಟೀಮ್‌ ವ್ಯವಸ್ಥೆಯ ಮೂಲಕ ಸಿದ್ಧಗೊಳ್ಳುತ್ತಿದ್ದು, ಜತೆಗೆ ಸ್ವಚ್ಛತಾ ಕಾರ್ಯವೂ ಇಲ್ಲಿ ಯಂತ್ರೋಪಕರಣಗಳ ಮೂಲಕ ನಡೆಯುತ್ತಿರುವುದು ವಿಶೇಷವಾಗಿದೆ. ಪ್ರಸ್ತುತ ಶಾಲೆಯಲ್ಲಿ 263 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಎಲ್ಲ ವಿದ್ಯಾರ್ಥಿಗಳು ಏಕಕಾಲದಲ್ಲಿ ಕುಳಿತು ಊಟ ಮಾಡುವ ವಿಶಾಲವಾದ ಡೈನಿಂಗ್‌ ಹಾಲ್‌ ಶಾಲೆಯಲ್ಲಿದೆ.

ಆಟದ ಮೈದಾನದ ಕೊರತೆ

Advertisement

ಶಾಲೆಯು ಸಾಕಷ್ಟು ಸೌಲಭ್ಯ ಗಳೊಂದಿಗೆ ಅಭಿವೃದ್ಧಿ ಹೊಂದಿದ್ದರೂ, ಶಾಲೆಗೆ ಆಟದ ಮೈದಾನ ಕೊರತೆ ಇದೆ. ಅದಕ್ಕಾಗಿ ಈಗಾಗಲೇ ಜಾಗ ಕಾಯ್ದಿರಿಸುವ ದೃಷ್ಟಿಯಿಂದ ಸರಕಾರಿ ಜಾಗವೊಂದನ್ನು ಗುರುತಿಸಲಾಗಿದೆ. ಅದರ ಕಡತ ಮಂಗಳೂರು ಸಹಾಯಕ ಕಮಿಷನರ್‌ ಕಚೇರಿಯಲ್ಲಿದೆ. ಅದು ಅಂತಿಮಗೊಂಡರೆ ವಿಶಾಲವಾದ ಮೈದಾನವೂ ಶಾಲೆಗೆ ಲಭಿಸಲಿದೆ.

ಸೋಲಾರ್‌ನಿಂದ ಶಾಲೆಗೆ ಆದಾಯ

ವಿದ್ಯುತ್‌ ಶುಲ್ಕ ಪಾವತಿಸಲು ಪರದಾಡುವ ಈ ಸಂದರ್ಭದಲ್ಲಿ ಶಂಭೂರು ಪ್ರೌಢಶಾಲೆಯು ವಿದ್ಯುತ್‌ ಬಳಕೆಯಲ್ಲೂ ಸ್ವಾವಲಂಬಿತನವನ್ನು ಸಾಧಿಸಿದೆ. 2019ರಲ್ಲಿ ಶಂಭೂರು ಶಾಲೆಯಲ್ಲಿ ಎಂಆರ್‌ಪಿಎಲ್‌ ಸಿಎಸ್‌ಆರ್‌ 10 ಲಕ್ಷ ರೂ. ಅನುದಾನದ ಮೂಲಕ ಸೋಲಾರ್‌ ಘಟಕವನ್ನು ಅಳವಡಿಸಲಾಗಿದೆ. ಇದರ ಮೂಲಕ ಶಾಲೆಯ ವಿದ್ಯುತ್‌ ಶುಲ್ಕ ಕಳೆದು ತಿಂಗಳಿಗೆ ಸರಾಸರಿ 2,500 ರೂ.ಗಳಷ್ಟು ಆದಾಯ ಸಿಗುತ್ತಿದೆ.

ಎಲ್ಲ ರೀತಿಯ ಮೂಲಸೌಕರ್ಯ: ಶಾಲೆಗೆ ಎಲ್ಲ ರೀತಿಯ ಮೂಲಸೌಕರ್ಯಗಳನ್ನು ನೀಡುವ ಜತೆಗೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೂ ವಿಶೇಷ ಗಮನಹರಿಸಲಾಗುತ್ತಿದೆ. ಪಠ್ಯೇತರ ಚಟುವಟಿಕೆಗಳಿಗೂ ನಿರಂತರ ಪ್ರೋತ್ಸಾಹ ನೀಡಲಾಗುತ್ತಿದೆ. ರಾಷ್ಟ್ರಮಟ್ಟದ ಸ್ಪರ್ಧೆಯಲ್ಲೂ ನಮ್ಮ ಶಾಲೆ ಬಹುಮಾನಗಳಿಸಿರುವುದು ಅದಕ್ಕೆ ಉತ್ತಮ ಉದಾಹರಣೆಯಾಗಿದೆ. ಕನ್ನಡ ಹಾಗೂ ಇಂಗ್ಲಿಷ್‌ ಎರಡೂ ಮಾಧ್ಯಮಗಳಲ್ಲೂ ಇಲ್ಲಿ ಶಿಕ್ಷಣ ನೀಡಲಾಗುತ್ತಿದೆ. –ಸಚ್ಚಿದಾನಂದ ಶೆಟ್ಟಿ ಬೊಂಡಾಲ, ಅಧ್ಯಕ್ಷರು, ಬೊಂಡಾಲ ಚಾರಿಟೆಬಲ್‌ ಟ್ರಸ್ಟ್‌.

Advertisement

Udayavani is now on Telegram. Click here to join our channel and stay updated with the latest news.

Next