Advertisement

ಆಧುನಿಕ ಭಗೀರಥ ಸುಧಾಕರನ ಪ್ರಯತ್ನದಿಂದ ಮೈದುಂಬಿದ ಶಾಂಭವಿ

01:35 AM Nov 28, 2018 | Team Udayavani |

ಬೆಳ್ಮಣ್‌: ಬತ್ತುವ ಭೀತಿಯಲ್ಲಿದ್ದ ಕಾರ್ಕಳದ ಸಂಕಲಕರಿಯದ ಶಾಂಭವಿ ನದಿ ಇದೀಗ ಮತ್ತೆ ಮೈದುಂಬಿದೆ. ಪ್ರಗತಿಪರ ಕೃಷಿಕ ಸುಧಾಕರ ಸಾಲ್ಯಾನ್‌ ಅವರ ಅವಿರತ ಯತ್ನ ಫ‌ಲಕೊಟ್ಟಿದೆ. ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್‌ ರಾಕೇಶ್‌, ಸುಧಾಕರರ ಈ ಪ್ರಯತ್ನಕ್ಕೆ ಬೆಂಬಲ ನೀಡಿದ್ದು ಇಲಾಖೆಯಿಂದ ಪೂರಕ ಹಲಗೆಗಳನ್ನು ಪೂರೈಸುವಲ್ಲಿ ಸಹಕರಿಸಿದ್ದಾರೆ. ಕಳೆದ ಮೂರ್‍ನಾಲ್ಕು ವರ್ಷಗಳಿಂದ ಸುದಾಕರ ಅವರು ನದಿಗೆ ಹಲಗೆ ಹಾಕಿ ನೀರು ಶೇಖರಣೆ ಕಾರ್ಯ ಮಾಡುತ್ತಿದ್ದು ಶ್ಲಾಘನೆಗೆ ಪಾತ್ರವಾಗಿದ್ದಾರೆ.

Advertisement

ಕೃಷಿಗೆ ಪೂರಕ
ನವೆಂಬರ್‌- ಡಿಸೆಂಬರ್‌ ತಿಂಗಳು ಬಂತೆಂದರೆ ಗ್ರಾಮೀಣ ಪ್ರದೇಶದಲ್ಲಿನ ರೈತರು ಇನ್ನೊಂದು ಬೆಳೆಗೆ ಸಿದ್ಧರಾಗುತ್ತಾರೆ. ಈ ತಿಂಗಳಲ್ಲಿ ನೀರಿನ ಮಟ್ಟ ಕಡಿಮೆಯಾಗುವುದರಿಂದ ಕಿಂಡಿ ಅಣೆಕಟ್ಟಿಗೆ ಹಲಗೆ ಹಾಕಿ ನೀರಿನ ಮಟ್ಟವನ್ನು ಹೆಚ್ಚಿಸಿ ಕೃಷಿ ಭೂಮಿಗೆ ನೀರುಣಿಸುವ ಕಾರ್ಯದಲ್ಲಿ ತೊಡಗುತ್ತಾರೆ. ಅದರಂತೆ ಈ ಬಾರಿಯೂ ಸುಧಾಕರ ಅವರ ನೇತೃತ್ವದಲ್ಲಿ ಸಂಕಲಕರಿಯ ಅಣೆಕಟ್ಟು ಮೈದುಂಬಿದೆ.

ಮಾಜಿ ಸಚಿವರ ಪ್ರೇರಣೆ
ಕಳೆದ ಎಂಟು  ವರ್ಷಗಳ ಹಿಂದೆ ನಿರ್ಮಾಣಗೊಂಡ ಈ ಅಣೆಕಟ್ಟು ಕೆಲ ವರ್ಷಗಳಲ್ಲಿ ಸಮರ್ಪಕ ನಿರ್ವಹಣೆಯಿಲ್ಲದೆ ನೇಪಥ್ಯಕ್ಕೆ ಸರಿದಿತ್ತು. ಇದರಿಂದ ಬೇಸತ್ತ ಕೃಷಿಕರು ಸುಧಾಕರ ಸಾಲ್ಯಾನ್‌ರ ನೇತೃತ್ವದಲ್ಲಿ ಯಾವುದೇ ಅನುದಾನಕ್ಕೆ ಕಾಯದೆ ಶ್ರಮದಾನದ ಮೂಲಕ ಹಲಗೆಗಳನ್ನು ಜೋಡಿಸಿ ನದಿಯಲ್ಲಿ ನೀರು ಸಂಗ್ರಹವಾಗುವಂತೆ ಮಾಡಿ ಇತರರಿಗೆ ಮಾದರಿಯಾಗಿದ್ದರು. ಈ ಶ್ರಮದಾನದ ವೇಳೆ ಅಂದಿನ ಶಾಸಕ ಕೆ. ಅಭಯಚಂದ್ರ ಜೈನ್‌ 700ಕ್ಕೂ ಮಿಕ್ಕಿ ಹಲಗೆಗಳನ್ನು ನೀಡಿ ಸಹಕರಿಸಿದ್ದರು.


ಈ ಭಾಗದ ಜಲಮೂಲ

ಶಾಂಭವಿ ನದಿಗೆ ಕಟ್ಟಲಾದ ಅಣೆಕಟ್ಟಿಗೆ ಪ್ರತಿ ವರ್ಷ ಹಲಗೆ ಹಾಕುವುದರಿಂದ ನೀರಿನ ಮಟ್ಟ ಹೆಚ್ಚಾಗಿ ಐಕಳ, ಮುಂಡ್ಕೂರು, ಪಾಲಡ್ಕ ಹಾಗೂ ಕಲ್ಲಮುಂಡ್ಕೂರು ಪಂಚಾಯತ್‌ನ ವ್ಯಾಪ್ತಿಯ ಕೃಷಿಕರು ಹಾಗೂ ಸಂಕಲಕರಿಯ, ಏಳಿಂಜೆ, ಪೊಸ್ರಾಲು, ಕೊಟ್ರಪಾಡಿ, ಪಟ್ಟೆ ಕ್ರಾಸ್‌ ಮತ್ತಿತರರ ಗ್ರಾಮದ ರೈತರಿಗೆ ವರದಾನವಾಗಿದೆಯಲ್ಲದೆ ಪರಿಸರದ ಬಾವಿಗಳಲ್ಲೂ ನೀರಿನ ಒರತೆ ಹೆಚ್ಚಾಗಿ ಕುಡಿಯುವ ನೀರಿನ ಸಮಸ್ಯೆ ನೀಗುತ್ತಿದೆ.

ಕೃಷಿ ಭೂಮಿಗೆ ಪ್ರಯೋಜನ
ಅಣೆಕಟ್ಟಿಗೆ ಹಲಗೆ ಹಾಕಲು-ತೆಗೆಯಲು ಸುಮಾರು 70-75 ಸಾವಿರ ರೂ. ಖರ್ಚು ಇದೆ, ಇಲಾಖೆಯಿಂದ ಸಾವಿರ ರೂ ಮಾತ್ರ ಬರುತ್ತದೆ. ಅದೂ ಸಕಾಲಕ್ಕೆ ಸಿಗುವುದಿಲ್ಲ. ಆದರೆ ಇಲ್ಲಿ ನೀರು ಸಂಗ್ರಹವಾದರೆ ನೂರಾರು ಎಕರೆ ಕೃಷಿ ಭೂಮಿಗೆ ಪ್ರಯೋಜನ ಇದೆ. ಕೃಷಿಕರು, ಸಾರ್ವಜನಿಕರು, ಪಂಚಾಯತ್‌ಗಳು, ಇಲಾಖೆ ಗಮನ ಹರಿಸಬೇಕಾಗಿದೆ.
– ಸುಧಾಕರ ಸಾಲ್ಯಾನ್‌, ಐಕಳ ಗ್ರಾಮ ಪಂಚಾಯತ್‌ ಸದಸ್ಯ (ಕಿಂಡಿ ಅಣೆ ಕಟ್ಟು ವಿನ ನಿರ್ವಾಹಕ)

Advertisement

ಬೆಂಬಲ ಅಗತ್ಯ
ಸುಧಾಕರ ಸಾಲ್ಯಾನ್‌ರವರ ಈ ಸಾಧನೆಗೆ ಕೃಷಿಕರು ಮತ್ತು ಇಲಾಖೆಯವರು ಪೂರಕ ಬೆಂಬಲ ನೀಡಬೇಕಾಗಿದೆ.
– ಸುಧೀರ್‌ ಶೆಟ್ಟಿ , ಕೃಷಿಕ

Advertisement

Udayavani is now on Telegram. Click here to join our channel and stay updated with the latest news.

Next