Advertisement

“ಶಂಬಾ’ವಿಲಾಸ

11:19 AM Jan 05, 2020 | Lakshmi GovindaRaj |

ಶಂಬಾ, ತಮ್ಮದೇ ಆದ ಸಂಶೋಧನಾ ವಿಧಾನವನ್ನು ರೂಪಿಸಿಕೊಂಡು, ಭಾಷೆ, ಸಂಸ್ಕೃತಿ, ಸಮಾಜ ವಿಜ್ಞಾನ, ಇತಿಹಾಸಗಳ ಅಧ್ಯಯನಕ್ಕೆ ಹೊಸ ದೃಷ್ಟಿಕೋನ ರೂಪಿಸಿದ ವಿಶಿಷ್ಟ ಸಂಶೋಧಕ, ಅನನ್ಯ ಸಂಸ್ಕೃತಿ ಚಿಂತಕ. ಕನ್ನಡ ಸಂಶೋಧನೆಗೆ ಹೊಸ ಹಾದಿ ತೋರಿದ ಶಂಬಾ ಅವರ 125ನೇ ಜನ್ಮ ವರ್ಷವಿದು…

Advertisement

ಶಂಬಾ ಎಂದೇ ಸಾಹಿತ್ಯಾಸಕ್ತರಿಗೆ ಪರಿಚಿತರಾದ ಡಾ|| ಶಂಕರ ಬಾಳದೀಕ್ಷಿತ ಜೋಶಿ ಅವರು ತಮ್ಮ ವಿದ್ವತ್‌ಪೂರ್ಣ ಚಿಂತನೆಯ ಮೂಲಕ ಕನ್ನಡ ಪಂಡಿತ ಪ್ರಪಂಚಕ್ಕೆ ಹೊಸ ಆಯಾಮ ತಂದುಕೊಟ್ಟವರು. ಶಂಬಾ ತಮ್ಮದೇ ಆದ ಸಂಶೋಧನಾ ವಿಧಾನವನ್ನು ರೂಪಿಸಿಕೊಂಡು, ಭಾಷೆ, ಸಂಸ್ಕೃತಿ, ಸಮಾಜ ವಿಜ್ಞಾನ, ಇತಿಹಾಸಗಳ ಅಧ್ಯಯನಕ್ಕೆ ಹೊಸ ದೃಷ್ಟಿಕೋನ ರೂಪಿಸಿದ ವಿಶಿಷ್ಟ ಸಂಶೋಧಕ, ಅನನ್ಯ ಸಂಸ್ಕೃತಿ ಚಿಂತಕ. ಕನ್ನಡ ಸಂಶೋಧನೆಗೆ ಹೊಸ ಹಾದಿ ತೋರಿದ ಶಂಬಾ ಅವರ 125ನೇ ಜನ್ಮ ವರ್ಷವಿದು.

4ನೇ ಜನವರಿ, 1896ರಂದು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಗುರ್ಲಹೊಸೂರುನಲ್ಲಿ ಜನಿಸಿದ ಶಂ.ಬಾ. ತಮ್ಮ ತಂದೆಯ ನಿಧನದ ನಂತರ ಪುಣೆಯಲ್ಲಿದ್ದ ಅಜ್ಜಿ ಮನೆಗೆ ಹೋದರು. ಅಲ್ಲಿ ಲೋಕಮಾನ್ಯ ತಿಲಕರಿಂದ ಪ್ರಭಾವಿತರಾಗಿ, ದೇಶ ಸೇವೆ ಮಾಡುವ ಭಾಗ್ಯ ದಕ್ಕಿತು. ನಂತರ ಅವರು ಪುನಃ ಬಂದು ಶಿಕ್ಷಕರಾಗಿ, ತಮ್ಮ ಸೇವೆಗೆ ಕರ್ಮಭೂಮಿಯನ್ನಾಗಿಸಿಕೊಂಡಿದ್ದು, ಬೆಳಗಾವಿಯನ್ನು. ಗಾಂಧೀಜಿ, ಬೆಳಗಾವಿಗೆ ಬಂದಾಗ ಅವರ ಜೊತೆ ಜೊತೆಯೇ ಓಡಾಡಿದರು. ಇದನ್ನು ನೋಡಿ ಕೋಪಗೊಂಡ ಸರ್ಕಾರ, ಇವರನ್ನು ಹಳ್ಳಿಗೆ ವರ್ಗಾಯಿಸಿತು. ಅಧ್ಯಯನಕ್ಕೆ ಅವಕಾಶವೇ ಇಲ್ಲದಂತಾದಾಗ, ಮನನೊಂದು ಆ ಶಿಕ್ಷಕ ವೃತ್ತಿಯನ್ನೂ ಕೈಬಿಟ್ಟರು.

ಸ್ವಂತ ಸಂಶೋಧನಾ ಶೈಲಿ: ಗಾಂಧೀಜಿಯವರ ಕರೆಗೆ ಓಗೊಟ್ಟು ಸ್ವಾತಂತ್ರ ಚಳವಳಿಗೆ ಧುಮುಕಿದರು. ಜೀವನ ನಿರ್ವಹಣೆಗೆ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡರು. ಜೊತೆಗೆ, ಕರ್ನಾಟಕ ವಿದ್ಯಾವರ್ಧಕ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾದರು. ಕರ್ನಾಟಕ ಏಕೀಕರಣ ಆಂದೋಲನದಲ್ಲೂ ಪಾಲ್ಗೊಂಡ‌ರು. ಬಿಡುವಿಲ್ಲದ ಚಟುವಟಿಕೆಗಳ ನಡುವೆ ಸ್ವಂತ ಪರಿಶ್ರಮದಿಂದ ಕನ್ನಡದ ಜೊತೆಗೆ, ಸಂಸ್ಕೃತ, ಇಂಗ್ಲಿಷ್‌, ಮರಾಠಿ ಭಾಷೆಗಳನ್ನು ಕಲಿತು ಆಳವಾದ ಪಾಂಡಿತ್ಯ ಗಳಿಸಿಕೊಂಡರು. ಸಿದ್ಧ ಸಂಶೋಧನಾ ಮಾದರಿಯನ್ನು ಅನುಸರಿಸದೆ, ತಮ್ಮದೇ ಸ್ವಂತ ಸಂಶೋಧನಾ ವಿಧಾನವನ್ನು ರೂಪಿಸಿಕೊಂಡರು. ಸ್ಥಿರ ನೆಲೆಯಿಲ್ಲದ ಅಲೆಮಾರಿ ಜೀವನದಿಂದ ಬೇಸತ್ತು, 1928ರಲ್ಲಿ ವಿಕ್ಟೋರಿಯ ಹೈಸ್ಕೂಲಿನಲ್ಲಿ ಶಿಕ್ಷಕ ವೃತ್ತಿ ಕೈಗೊಂಡರು.

ಗೋಕಾಕ್‌ ಚಳವಳಿಯ ಉಪವಾಸ: ಪ್ರಸಿದ್ಧ ವಿದ್ವಾಂಸರಾಗಿದ್ದಂತೆಯೇ ಶಂಬಾ ಅವರು ಕನ್ನಡದ ಕಟ್ಟಾಳು ಕೂಡ ಆಗಿದ್ದಂಥವರು. 1924ರಲ್ಲಿ ಕರ್ನಾಟಕ ಏಕೀಕರಣಕ್ಕೆ ಬೆಳಗಾವಿಯಲ್ಲಿ ನಡೆದ ಸಮಾವೇಶವನ್ನು ಸಂಘಟಿಸಿದ ಸಮಿತಿಯ ಕಾರ್ಯದರ್ಶಿಯಾಗಿದ್ದರು. 1982ರಲ್ಲಿ ನಡೆದ ಗೋಕಾಕ್‌ ಚಳವಳಿಯಲ್ಲಿ, ಅಂದರೆ ತಮ್ಮ 87ನೇ ವಯಸ್ಸಿನಲ್ಲಿ, ಗೋಕಾಕ್‌ ಭಾಷಾ ಸೂತ್ರದ ಅನುಷ್ಠಾನಕ್ಕೆ ಒತ್ತಾಯಿಸಿ, ಉಪವಾಸ ನಡೆಸಿದವರು. ಆ ಸಂದರ್ಭದಲ್ಲಿ ಧಾರವಾಡದಲ್ಲಿ ರೂಪುಗೊಂಡ ಅಖೀಲ ಕರ್ನಾಟಕ ಕನ್ನಡ ಕ್ರಿಯಾ ಸಮಿತಿಯ ಮೊದಲ ಅಧ್ಯಕ್ಷರು ಎಂಬುದು ಉಲ್ಲೇಖನೀಯ. 1924ರಿಂದ 1991(ನಿಧನ 28.09.1991)ರವರೆಗೆ ಅಂದರೆ, ಅವರ ಅಂತಿಮ ಕ್ಷಣದವರೆಗೆ ಕನ್ನಡ ಜಾಗೃತಿಯಲ್ಲಿ ತೊಡಗಿಸಿಕೊಂಡ ಅಪ್ಪಟ ಕನ್ನಡ ಕಟ್ಟಾಳು ಶಂಬಾ.

Advertisement

ಶಂಬಾ ಅವರ ಸಾಹಿತ್ಯ ಸಾಧನೆಗೆ 1967ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಿಶೇಷ ಪ್ರಶಸ್ತಿ ಒಲಿದುಬಂತು. ಈ ಗೌರವ ಪಡೆದ ಮೊದಲ ಸಂಶೋಧಕ ಕೂಡ ಇವರೇ ಆಗಿದ್ದಾರೆ. ಮಡಿಕೇರಿಯಲ್ಲಿ 54ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ಇವರಿಗೆ ಸಂದಿರುವ ಇನ್ನೊಂದು ಸ್ಮರಣಾರ್ಹ ಗೌರವ. ಅವರೀಗ ನಮ್ಮೊಂದಿಗಿಲ್ಲ. ಅವರ ರಚನೆಗಳು ಕನ್ನಡ ಸಾಹಿತ್ಯಲೋಕಕ್ಕೆ ಮಾರ್ಗದರ್ಶನ ನೀಡುತ್ತಲೇ ಇವೆ. ನಾಡು-ನುಡಿ-ಸಂಸ್ಕೃತಿಗಳ ಉತ್ಕರ್ಷಕ್ಕೆ ಅಹರ್ನಿಶಿ ದುಡಿದ ಜೋಶಿ ಅವರು, ಈಗಿನ ಪೀಳಿಗೆಗೆ ಒಂದು ಮಾದರಿ.

ಶಂಬಾ ಕೃತಿಗಳು ನಮ್ಮೊಂದಿಗೆ…: ಶಂಬಾ ಅವರ ಸಂಶೋಧನೆ, ಸಂಸ್ಕೃತಿ ಅನ್ವೇಷಣೆ ಬಹುಮುಖೀಯಾದ್ದು. “ಕಣ್ಮರೆಯಾದ ಕನ್ನಡ’, “ಮಹಾರಾಷ್ಟ್ರದ ಮೂಲ’, “ಕನ್ನಡದ ನೆಲೆ’- ಇವು ಪ್ರಾಚೀನ ಕರ್ನಾಟಕದ ವಿಸ್ತಾರಕ್ಕೆ ಆಧಾರಗಳನ್ನೊದಗಿಸುವ ಅಪೂರ್ವ ಗ್ರಂಥಗಳಾದರೆ, “ಕಂನುಡಿಯ ಹುಟ್ಟು’, “ಎಡೆಗಳು ಹೇಳುವ ಕಂನಾಡ ಕತೆ’, “ಕನ್ನಡ ನುಡಿಯ ಜೀವಾಳ’ - ಕನ್ನಡ ಭಾಷೆಯ ಪ್ರಾಚೀನತೆ, ಅನನ್ಯತೆಗಳನ್ನು ಸಾದರ ಪಡಿಸುವ ಗ್ರಂಥಗಳಾಗಿವೆ.

* ರಾ.ನಂ. ಚಂದ್ರಶೇಖರ

Advertisement

Udayavani is now on Telegram. Click here to join our channel and stay updated with the latest news.

Next