Advertisement

ಶಮಂತ್‌ ಕುಮಾರ್‌ಗೆ ಕೋಟ ವೈಕುಂಠ ಪ್ರಶಸ್ತಿ 

06:00 AM Mar 23, 2018 | Team Udayavani |

ಡಾ| ಶಿವರಾಮ ಕಾರಂತರ ಹೆಸರಲ್ಲಿ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಿರುವ ಕೋಟದ ಕಾರಂತ ಪ್ರತಿಷ್ಠಾನ ಹಾಗೂ ಕೋಟತಟ್ಟು ಗ್ರಾ.ಪಂ. ಯಕ್ಷಗಾನ ಹವ್ಯಾಸಿ ರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ಸ್ಥಳೀಯ ಕಲಾವಿದರನ್ನು ಗುರುತಿಸಿ ಗೌರವಿಸುವ ಸಲುವಾಗಿ “ಯಕ್ಷಕಿನ್ನರ ಕೋಟ ವೈಕುಂಠ ಪ್ರಶಸ್ತಿಯನ್ನು’ ಸ್ಥಾಪಿಸಿದೆ. ಈ ಬಾರಿ ಈ ಪ್ರಶಸ್ತಿಗೆ ಕೋಟ ಶಮಂತ್‌ ಕುಮಾರ್‌ ಆಯ್ಕೆಯಾಗಿದ್ದಾರೆ. ಮಾ.24ರಂದು ಸಂಜೆ 6ಕ್ಕೆ ಕೋಟ ಕಾರಂತ ಥೀಮ್‌ ಪಾರ್ಕ್‌ನಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. 

Advertisement

 ಶಮಂತ್‌ ವೃತ್ತಿಯಲ್ಲಿ ಉಡುಪಿ ಎಂ.ಜಿ.ಎಂ.ಕಾಲೇಜಿನ ಕನ್ನಡ ಉಪನ್ಯಾಸಕ, ಪ್ರವೃತ್ತಿಯಲ್ಲಿ ಯಕ್ಷ ಕಲೋಪಾಸಕ. ಕಲ್ಮಾಡಿ ಶ್ರೀಧರ ಗಾಣಿಗ ಹಾಗೂ ಭಾಗೀರಥಿ ದಂಪತಿಗಳ ಪುತ್ರನಾಗಿರುವ ಇವರು ಸುಮಾರು 12ವರ್ಷದ ಹಿಂದೆ ಕೋಟ ನರಸಿಂಹ ತುಂಗರಿಂದ ಹೆಜ್ಜೆಗಾರಿಕೆಯನ್ನು ಕಲಿತು ಕುಣಿಯಲಾರಂಭಿಸಿದರು. ಅನಂತರ ಪ್ರಸಾದ್‌ ಮೊಗೆಬೆಟ್ಟು ಮುಂತಾದ ಕಲಾವಿದರಿಂದ ಕಲೆಯ ಸೂಕ್ಷ್ಮಗಳನ್ನು ಮೈಗೂಡಿಸಿಕೊಂಡು ಹವ್ಯಾಸಿ ಕಲಾವಿದನಾಗಿ ಹೆಸರುಗಳಿಸಿದರು. ಇವರು ಹೆಚ್ಚಾಗಿ ಮೆಚ್ಚಿಕೊಂಡಿರುವುದು ಸ್ತ್ರೀಪಾತ್ರಗಳನ್ನು. ಶಿವೆ, ದೇವಿ ಅಂಬೆ, ಸುಭದ್ರೆ, ರತಿ, ರಾಧೆ ಮುಂತಾದ ಪಾತ್ರಗಳು ಜನಮನ್ನಣೆ ಗಳಿಸಿವೆ. ದೇವಿ, ಅಂಬೆ ಪಾತ್ರಗಳಿಗೆ ಮನೋಜ್ಞವಾಗಿ ಜೀವ ತುಂಬುತ್ತಾರೆ. ನೀಲಾವರ, ಅಮೃತೇಶ್ವರಿ, ಸಾಲಿಗ್ರಾಮ, ಹಟ್ಟಿಯಂಗಡಿ ಮುಂತಾದ ಮೇಳಗಳಲ್ಲಿ ಹವ್ಯಾಸಿಯಾಗಿ ಪ್ರದರ್ಶನ ನೀಡಿದ್ದಾರೆ. ಇವರು ರಚಿಸಿದ “ಬಾಲಮಾಂಗಲ್ಯ’ ಎಂಬ ಪ್ರಸಂಗ ಅಮೃತೇಶ್ವರಿ ಮೇಳದಲ್ಲಿ ಯಶಸ್ವಿ ಪ್ರದರ್ಶನ ಕಂಡಿದೆ. ಯಕ್ಷಗಾನದ ಹೊರತಾಗಿ ರಂಗಭೂಮಿಯಲ್ಲೂ ಹೆಜ್ಜೆಗುರುತು ಮೂಡಿಸಿದ್ದಾರೆ. 
            
ರಾಜೇಶ್‌ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next