“ಅಮ್ಮಾ, ನಾವೂ ಒಂದು ನಾಯಿ ಸಾಕೋಣ?’ ಹೈಸ್ಕೂಲು ಓದುತ್ತಿರುವ ಮಗನಿಂದ ಈ ಬೇಡಿಕೆ ಬಂದಿದ್ದು ಇದೇ ಮೊದಲೇನಲ್ಲ. ಪಕ್ಕದ ಮನೆಯವರು ಎರಡು ವರ್ಷಗಳ ಹಿಂದೆ ನಾಯಿ ತಂದಾಗಿನಿಂದ, ಆಗಾಗ್ಗೆ ಮನೆಯಲ್ಲಿ ಈ ವಿಷಯ ಪ್ರಸ್ತಾಪವಾಗುತ್ತದೆ. “ನಿಮ್ಮನ್ನು ಸಾಕುವುದರಲ್ಲೇ ಸುಸ್ತಾಗಿದ್ದೇವೆ. ನಾಯಿ ತಂದರೆ ನೋಡಿಕೊಳ್ಳೋರ್ಯಾರು?’ ಅಂತ ನಾನು ಗುರುಗುಟ್ಟಿದ ಮೇಲೆ, ಆ ವಿಷಯ ಅಲ್ಲಿಗೇ ನಿಲ್ಲುತ್ತದೆ. ನಾನೇ ಬೇಡ ಅಂದ್ಮೇಲೆ, ಅವರ ಅಪ್ಪನಿಂದ ಒಪ್ಪಿಗೆ ಸಿಗುವುದಾದರೂ ಹೇಗೆ?
ಆದರೆ, ಮೊನ್ನೆ ಹಾಗಾಗಲಿಲ್ಲ. “ಅಮ್ಮಾ, ನಾಯಿ ಸಾಕಿದವರಿಗೆ ಹಾರ್ಟ್ ಅಟ್ಯಾಕ್ ಆಗೋದಿಲ್ಲ ಅಂತ ಪ್ರೂವ್ ಆಗಿದೆ ಗೊತ್ತಾ?’ ಅಂತ ಮಗರಾಯ ಹೊಸ ವಿಷಯವೊಂದನ್ನು ಹೇಳಿದ. “ಇದ್ಯಾರು ಹೇಳಿದ್ದು ನಿನಗೆ?’ ಅಂತ ಪ್ರಶ್ನಿಸಿದರೆ, ಅವರಪ್ಪನ ಮೊಬೈಲ್‌ನಲ್ಲಿ ಅದ್ಯಾವುದೋ ಆರ್ಟಿಕಲ್ ತೆಗೆದು ತೋರಿಸಿದ. ಸಾಕುಪ್ರಾಣಿಗಳನ್ನು, ಅದರಲ್ಲೂ ನಾಯಿಯನ್ನು ಸಾಕಿದವರಲ್ಲಿ ಹೃದ್ರೋಗ ಸಮಸ್ಯೆಗಳು ಕಾಡುವುದಿಲ್ಲ ಎಂಬುದು ಸಂಶೋಧನೆಗಳಿಂದ ಸಾಬೀತಾಗಿದೆ ಎಂಬ ವಿವರಣೆ ಅಲ್ಲಿತ್ತು.
ಅದಕ್ಕೆ ಒಂದಷ್ಟು ಕಾರಣಗಳನ್ನೂ ಅವರು ನೀಡಿದ್ದರು. ಮುಖ್ಯ ಕಾರಣ, ಪ್ರತಿದಿನ ಬೆಳಗ್ಗೆ- ಸಂಜೆ ನಾಯಿಯನ್ನು ವಾಕಿಂಗ್ ಕರೆದುಕೊಂಡು ಹೋಗಬೇಕಾದ್ದರಿಂದ, ಅಯಾಚಿತವಾಗಿ ಓನರ್‌ಗೂ ವಾಕಿಂಗ್ ಆಗುತ್ತದೆ. ಆ್ಯಕ್ಟಿವ್ ನಾಯಿಗಳಿದ್ದರಂತೂ ಅವುಗಳ ಹಿಂದೆ ಓಡಿ, ಅವುಗಳೊಡನೆ ಆಟವಾಡಿ ದೈಹಿಕ ವ್ಯಾಯಾಮ ಆಗುತ್ತದೆ. ಆಗ ಅಧಿಕ ರಕ್ತದೊತ್ತಡ, ಬೊಜ್ಜು, ಮಧುಮೇಹ ಸಮಸ್ಯೆಗಳನ್ನು ತನ್ನಿಂತಾನೇ ತಗ್ಗಿಸಬಹುದು.
ಈ ಮೂರು ಸಮಸ್ಯೆಗಳು ಹತೋಟಿಗೆ ಬಂದರೆ, ಹೃದಯಾಘಾತದ ಅಪಾಯವೂ ಕಡಿಮೆಯಾಗುತ್ತದೆ ಎಂಬ ವಿವರಣೆಯಿತ್ತು. ನಾಯಿಗಳಿಂದ ಮಾನಸಿಕ ಆರೋಗ್ಯವೂ ಹೆಚ್ಚುತ್ತದೆ ಎಂದೂ ಹೇಳಿದ್ದರು. ನೋಡಿದರೆ ಮುದ್ದು ಉಕ್ಕುವ, ಕೈ-ಮೈ ನೆಕ್ಕಿ ಪ್ರೀತಿ ಮಾಡುವ ನಾಯಿಯೊಂದು ಮನೆಯಲ್ಲಿದ್ದರೆ ಎಂಥ ಒತ್ತಡ, ಒಂಟಿತನ, ಬೇಜಾರು ಕೂಡಾ ಕಡಿಮೆಯಾಗುತ್ತದೆ ಎಂಬುದು, ಬರಹದ ಒಟ್ಟು ಸಾರಾಂಶ. ಇದನ್ನೆಲ್ಲ ಓದಿದ ಮೇಲೆ, ಪಕ್ಕದ ಮನೆಯವರ ಬದಲಾದ ಜೀವನಶೈಲಿಯ ವಿಚಾರ ನೆನಪಾಯ್ತು.
ಮೊದಲೆಲ್ಲ ಅಷ್ಟಾಗಿ ಹೊರಗೆ ಬರದ ಗಂಡ-ಹೆಂಡತಿ, ಇತ್ತೀಚೆಗೆ ಕೆಲವೊಮ್ಮೆ ಶಿಫ್ಟ್ ಪ್ರಕಾರ, ಕೆಲವೊಮ್ಮೆ ಒಟ್ಟಾಗಿ ನಾಯಿ ಜೊತೆ ವಾಕಿಂಗ್ ಹೋಗುತ್ತಿರುವುದನ್ನು ಗಮನಿಸಿದ್ದೇನೆ. ನಮ್ಮ ಮನೆಯವರಂತೂ ಒಂದು ದಿನವೂ ವಾಕಿಂಗ್ ಅಂತ ಹೊರಗೆ ಹೋದವರಲ್ಲ. ನಾವೂ ಒಂದು ನಾಯಿ ಸಾಕಿದರೆ, ಇವರನ್ನು ನಾಯಿ ಜೊತೆ ವಾಕಿಂಗ್ ಕಳಿಸಬಹುದು ಅಂತ ಯೋಚಿಸುತ್ತಿದ್ದೇನೆ. ನಾಯಿ ಸಾಕುವುದರಿಂದ ಏನೇನೆಲ್ಲಾ ತೊಂದರೆಗಳಾಗಬಹುದು? ಅವೆಲ್ಲಾ ಸಣ್ಣ ಪ್ರಮಾಣದ ತೊಂದರೆಗಳ್ಳೋ ಹೇಗೆ ಎಂದು ನಾಲ್ಕು ಮಂದಿಯನ್ನು ಕೇಳಿ, ನಂತರವೇ ಅಂತಿಮ ನಿರ್ಧಾರ ಕೈಗೊಳ್ಳುವುದೆಂದು ಪ್ಲ್ರಾನ್ ಮಾಡಿದ್ದೇನೆ. ಏನಂತೀರಾ?
* ವಸುಂಧರಾ ಎಂ.