ನವದೆಹಲಿ : ತಮ್ಮ ಆರೋಗ್ಯದ ಕುರಿತು ಸುಳ್ಳು ಸುದ್ದಿ ಹಬ್ಬಿಸಿದ ಕಿಡಿಗೇಡಿಗಳ ವಿರುದ್ಧ ಕಿರುತೆರೆಯ ‘ಶಕ್ತಿಮಾನ್’ ಧಾರಾವಾಹಿ ಖ್ಯಾತಿಯ ನಟ ಮುಕೇಶ್ ಖನ್ನಾ ಆಕ್ರೋಶ ಹೊರಹಾಕಿದ್ದಾರೆ.
ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ನಟ ಮುಕೇಶ್ ಖನ್ನಾ ಸಾವನ್ನಪ್ಪಿದ್ದಾರೆ ಎನ್ನುವ ಸುದ್ದಿ ಮಂಗಳವಾರ ( ಮೇ.11) ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಈ ಸುದ್ದಿ ನಿಜ ಇರಬಹುದೆಂದು ಭಾವಿಸಿ ಸಾಕಷ್ಟು ಜನರು ಸಂತಾಪವನ್ನು ಸೂಚಿಸುತ್ತಿದ್ದರು. ತಮ್ಮ ಸಾವಿನ ಕುರಿತು ಸುಳ್ಳು ವದಂತಿ ಹರಿದಾಡುತ್ತಿರುವುದನ್ನು ಗಮನಿಸಿ ಮುಕೇಶ್ ಅವರು, ಫೇಸ್‍ಬುಕ್‍ನಲ್ಲಿ ವಿಡಿಯೋ ಹಂಚಿಕೊಂಡು ‘ನಾನು ಚೆನ್ನಾಗಿದ್ದೇನೆ, ನನಗೇನು ಆಗಿಲ್ಲ’ ಎಂದು ಹೇಳುವ ಮೂಲಕ ಸುಳ್ಳು ಸುದ್ದಿಗೆ ಬ್ರೇಕ್ ಹಾಕುವ ಪ್ರಯತ್ನ ಮಾಡಿದರು.
ತನ್ನ ಸಾವಿನ ವದಂತಿ ಹಬ್ಬಿಸಿದವರ ವಿರುದ್ಧ ಆಕ್ರೋಶ ಹೊರಹಾಕಿರುವ ಮುಕೇಶ್, ಇದನ್ನು ಯಾರು ಮಾಡಿದರು ಎಂಬುದು ನನಗೆ ಗೊತ್ತಿಲ್ಲ. ಇದರ ಹಿಂದಿರುವ ಉದ್ದೇಶವೂ ಗೊತ್ತಿಲ್ಲ. ಇಂತಹ ಸುಳ್ಳು ಸುದ್ದಿಗಳನ್ನು ಹುಟ್ಟಿಸುವ ಮೂಲಕ ಅವರು ಜನರ ಭಾವನೆಗಳಿಗೆ ಘಾಸಿ ಮಾಡುತ್ತಾರೆ. ಇಂತಹ ಮನಸ್ಥಿತಿಯವರಿಗೆ ಯಾವು ಚಿಕಿತ್ಸೆ ಕೊಡಿಸಬೇಕು ? ಇವರನ್ನು ಯಾರು ಶಿಕ್ಷಿಸಬೇಕು? ಇದು ಅತಿಯಾಯಿತು, ಸಾಕು ಇಲ್ಲಿಗೆ ನಿಲ್ಲಿಸಿ, ಇಂತಹ ಸುಳ್ಳು ಸುದ್ದಿಗಳಿಗೆ ಅಂತ್ಯ ಹಾಡಬೇಕು ಎಂದು ಗುಡುಗಿದ್ದಾರೆ. ಹಾಗೂ ಇದು ಸೋಷಿಯಲ್ ಮೀಡಿಯಾದ ಸಮಸ್ಯೆ ಕೂಡ ಎಂದಿದ್ದಾರೆ.
ನಿಮ್ಮ ಹಾರೈಕೆ, ಆಶೀರ್ವಾದಿಂದ ನಾನು ಚೆನ್ನಾಗಿದ್ದೇನೆ. ನನಗೆ ಕೋವಿಡ್ ಸೋಂಕು ತಗಲಿಲ್ಲ, ನಾನು ಆಸ್ಪತ್ರೆಗೂ ದಾಖಲಾಗಿಲ್ಲ ಎಂದಿದ್ದಾರೆ. ಸುಳ್ಳು ವದಂತಿಯಿಂದಾಗಿ ನನ್ನ ಆಪ್ತರು, ಸ್ನೇಹಿತರು ಆತಂಕಗೊಂಡು, ನನಗೆ ಕರೆ ಮಾಡಿ ಆರೋಗ್ಯ ವಿಚಾರಿಸುತ್ತಿದ್ದಾರೆ ಎಂದು ಮಕೇಶ್ ಹೇಳಿಕೊಂಡಿದ್ದಾರೆ.
ಇನ್ನು 1990ರಲ್ಲಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ‘ಶಕ್ತಿಮಾನ್’ ಧಾರಾವಾಹಿ ಮೂಲಕ ಮುಕೇಶ್ ಖನ್ನಾ ಖ್ಯಾತಿ ಪಡೆದವರು.