Advertisement

ಶಕ್ತಿ ಯೋಜನೆ: ಮೊದಲ ದಿನ 5.71 ಲಕ್ಷ ಮಹಿಳೆಯರ ಪ್ರಯಾಣ

11:09 PM Jun 12, 2023 | Team Udayavani |

ಬೆಂಗಳೂರು: “ಶಕ್ತಿ” ಯೋಜನೆಯಡಿ ಮೊದಲ ದಿನವೇ 5.71 ಲಕ್ಷ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ.

Advertisement

ಯೋಜನೆಗೆ ರವಿವಾರ ಮಧ್ಯಾಹ್ನ 1ಕ್ಕೆ ರಾಜ್ಯಾದ್ಯಂತ ಏಕಕಾಲದಲ್ಲಿ ಚಾಲನೆ ನೀಡಲಾಗಿದೆ. ಮಧ್ಯರಾತ್ರಿ 12ರ ವರೆಗೆ ಅಂದರೆ ಕೇವಲ 11 ತಾಸುಗಳಲ್ಲಿ 5,71,023 ಮಹಿಳೆಯರು ವಿವಿಧೆಡೆ ಪ್ರಯಾಣಿಸಿದ್ದಾರೆ. ಈ ಪೈಕಿ ಬಿಎಂಟಿಸಿಯಲ್ಲಿ ಅತಿಹೆಚ್ಚು, ಅಂದರೆ 2.01 ಲಕ್ಷ ಮಹಿಳೆಯರು ಪ್ರಯಾಣಿಸಿದ್ದಾರೆ. ಕೆಎಸ್‌ಆರ್‌ಟಿಸಿಯಲ್ಲಿ 1.93 ಲಕ್ಷ ಮಹಿಳಾ ಪ್ರಯಾಣಿಕರು ಸಂಚರಿಸಿದ್ದಾರೆ. ಒಟ್ಟು 5.71 ಲಕ್ಷ ಪ್ರಯಾಣಿಕರ ಪ್ರಯಾಣದ ಮೊತ್ತ 1.40 ಕೋಟಿ ರೂ. ಆಗಿದೆ.

ವಾರಾಂತ್ಯ ಹಾಗೂ ಮೊದಲ ದಿನವಾಗಿದ್ದರಿಂದ ಪ್ರಯಾಣಿಕರ ಸಂಖ್ಯೆ ತುಸು ಕಡಿಮೆಯೇ ಎಂದು ಹೇಳಬೇಕು. ಮುಂದಿನ ದಿನಗಳಲ್ಲಿ ಮಹಿಳೆಯರ ಪ್ರಮಾಣ ಹಲವು ಪಟ್ಟು ಹೆಚ್ಚಲಿದೆ. ಇದರಲ್ಲಿ ಅನುಮಾನವೇ ಇಲ್ಲ ಎಂದು ಕೆಎಸ್‌ಆರ್‌ಟಿಸಿ ಸಂಚಾರ ವಿಭಾಗದ ಅಧಿಕಾರಿಯೊಬ್ಬರು ತಿಳಿಸುತ್ತಾರೆ.

ಲಗೇಜ್‌ ಟಿಕೆಟ್‌; ಗೊಂದಲ
ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಿದ ಬೆನ್ನಲ್ಲೇ ಬಸ್‌ಗಳಲ್ಲಿ ಸೋಮವಾರ ಲಗೇಜ್‌ ವಿಚಾರದಲ್ಲಿ ಗೊಂದಲ ಉಂಟಾಗಿದ್ದು, ಇದು ನಿರ್ವಾಹಕರು ಮತ್ತು ಪ್ರಯಾಣಿಕರ ನಡುವಿನ ವಾಗ್ವಾದಕ್ಕೂ ಎಡೆಮಾಡಿಕೊಟ್ಟಿತು. ಮಹಿಳಾ ಪ್ರಯಾಣಿಕರಿಗೆ ಸಂಪೂರ್ಣ ಉಚಿತ ಪ್ರಯಾಣ ವ್ಯವಸ್ಥೆ ಕಲ್ಪಿಸಲಾಗಿದೆ. ಯೋಜನೆ ಫ‌ಲಾನುಭವಿಗಳು ತರುವ ಲಗೇಜ್‌ಗೆ ಶುಲ್ಕ ಪಾವತಿಸಲು ತಕರಾರು ತೆಗೆಯುತ್ತಿದ್ದಾರೆ. ಈ ಬಗ್ಗೆ ಮನದಟ್ಟು ಮಾಡುವಲ್ಲಿ ನಿರ್ವಾಹಕರು ಹೈರಾಣಾಗುತ್ತಿದ್ದು, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಇದು ವಾಗ್ವಾದಕ್ಕೂ ಕಾರಣವಾಗಿದೆ. ಬಸ್‌ಗಳಲ್ಲಿ ಗರಿಷ್ಠ ಲಗೇಜು 30 ಕೆ.ಜಿ. ಲಗೇಜು ಕೊಂಡೊಯ್ಯಲು ಅವಕಾಶ ಇದೆ. ಇದನ್ನು ಮೀರಿದರೆ, ಕಡ್ಡಾಯವಾಗಿ ಆ ಲಗೇಜ್‌ಗೆ ಟಿಕೆಟ್‌ ಪಡೆಯಬೇಕಾಗುತ್ತದೆ. ಆದರೆ ಕೆಲವರು ಇದಕ್ಕೆ ಆಕ್ಷೇಪ ಎತ್ತುತ್ತಿದ್ದಾರೆ.

ಸರಕಾರಿ ಬಸ್‌ ಹತ್ತಲು ನೂಕು ನುಗ್ಗಲು
“ಶಕ್ತಿ” ಯೋಜನೆ ಆರಂಭವಾದ 2ನೇ ದಿನವಾದ ಸೋಮವಾರವೂ ರಾಜ್ಯದ ಹಲವೆಡೆ ಸರಕಾರಿ ಬಸ್‌ಗಳಲ್ಲಿ ಮಹಿಳೆಯರ ನೂಕುನುಗ್ಗಲು ಕಂಡುಬಂತು. ರಾಮನಗರ ಜಿಲ್ಲೆಯಲ್ಲಿ ಬಸ್‌ಗಾಗಿ ಪ್ರಯಾಣಿಕರು ಪರದಾ ಡುವ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಸೂಕ್ತ ಬಸ್‌ ವ್ಯವಸ್ಥೆ ಕಲ್ಪಿಸದ ಅಧಿಕಾರಿಗಳಿಗೆ ಶಾಪ ಹಾಕಿದರು. ಚನ್ನಪಟ್ಟಣ, ರಾಮನಗರ ಬಸ್‌ನಿಲ್ದಾಣದಿಂದ ಹೊರಟ ಎಲ್ಲ ಬಸ್‌ಗಳ ಸೀಟುಗಳು ಭರ್ತಿಯಾಗಿದ್ದವು. ನಿಲ್ಲುವುದಕ್ಕೂ ಜಾಗವಿಲ್ಲದೆ ಕೆಲವು ಪ್ರಯಾಣಿಕರು ಫ‌ುಟ್‌ ಬೋರ್ಡ್‌ ಮೇಲೆ ನಿಂತು ಪ್ರಯಾಣಿಸಿದರು. ಸಾರಿಗೆ ಸಂಸ್ಥೆ ಬಸ್‌ಗಳ ಕೊರತೆಯಿಂದ ಕೆಲವರು ಖಾಸಗಿ ಬಸ್‌ಗಳನ್ನು ಅವಲಂಬಿಸುವಂತಾಯಿತು. ರೈಲಿನಲ್ಲಿ ಮತ್ತು ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯರೂ ಕೆಎಸ್‌ಆರ್‌ಟಿಸಿ ಬಸ್‌ ಕಡೆ ಮುಖ ಮಾಡಿದ್ದರಿಂದ ಸಮಸ್ಯೆಯಾಗಿದೆ ಎಂದು ಸಾರಿಗೆ ಸಂಸ್ಥೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲೂ ಸರಕಾರಿ ಬಸ್‌ಗಳಲ್ಲಿ ನೂಕುನುಗ್ಗಲು ಕಂಡು ಬಂತು. ಪಕ್ಕದಲ್ಲೇ ಇರುವ ಖಾಸಗಿ ಬಸ್‌ಗಳು ಖಾಲಿಯಾಗಿ ಓಡುತ್ತಿದ್ದವು.

Advertisement
Advertisement

Udayavani is now on Telegram. Click here to join our channel and stay updated with the latest news.