Advertisement

ಶಕ್ತಿ ಯೋಜನೆ: ಒಂದೇ ವಾರದಲ್ಲಿ 3.59 ಲಕ್ಷ ಮಹಿಳೆಯರು ಪ್ರಯಾಣ

05:09 PM Jun 19, 2023 | Team Udayavani |

ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಸರ್ಕಾರಿ ಕೆಂಪು ಬಸ್‌ಗಳಲ್ಲಿ ಟಿಕೆಟ್‌ ಶುಲ್ಕ ರಹಿತ ಮಹಿಳೆಯರ ಉಚಿತ ಪ್ರಯಾಣಕ್ಕೆ ರೂಪಿಸಿರುವ ಶಕ್ತಿ ಯೋಜನೆ ಜಾರಿಗೊಂಡ ಒಂದೇ ವಾರದಲ್ಲಿ ಜಿಲ್ಲೆಯಲ್ಲಿ ಬರೋಬ್ಬರಿ 3.59 ಲಕ್ಷ ಪ್ರಯಾಣಿಕರು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಸಂಚರಿಸಿದ್ದಾರೆ.

Advertisement

ಹೌದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಚಿಕ್ಕಬಳ್ಳಾಪುರ ಘಟಕದ ವ್ಯಾಪ್ತಿಗೆ ಬರುವ ಚಿಕ್ಕಬಳ್ಳಾಪುರ, ಚಿಂತಾಮಣಿ, ಶಿಡ್ಲಘಟ್ಟ, ಗೌರಿಬಿದನೂರು ಹಾಗೂ ದೊಡ್ಡಬಳ್ಳಾಪುರ ಹಾಗೂ ಬಾಗೇಪಲ್ಲಿ ಡಿಪೋ ವ್ಯಾಪ್ತಿಯಲ್ಲಿ ಶಕ್ತಿ ಯೋಜನೆ ಜಾರಿಗೊಂಡ ಜೂ.11ರ ಶನಿವಾರದಿಂದ ಜೂ.17ರ ಶನಿವಾರವರೆಗೂ ಒಟ್ಟು 3,59,919 ಮಂದಿ ಮಹಿಳೆಯರು ರಾಜ್ಯದ ವಿವಿಧೆಡೆಗೆ ಉಚಿತವಾಗಿ ಪ್ರಯಾಣಿಸಿದ್ದಾರೆ.

ದಿನದಿಂದ ದಿನಕ್ಕೆ ಹೆಚ್ಚಳ: ಶಕ್ತಿ ಯೋಜನೆ ಜಾರಿಗೊಂಡ ಮೊದಲ ದಿನ ಅಂದರೆ ಜೂ.11ರ ಮಧ್ಯಾಹ್ನದ ಬಳಿಕ ಯೋಜನೆ ಜಾರಿಗೊಂಡಿದ್ದು, ಮೊದಲ ದಿನ ಕೇವಲ 8,776 ಮಂದಿ ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣ ಮಾಡಿದ್ದು, ಬಳಿಕ ದಿನೇ ದಿನೆ ಜಿಲ್ಲೆಯಲ್ಲಿ ಸಾರಿಗೆ ಬಸ್‌ಗಳಲ್ಲಿ ಸಂಚಾರ ಹೆಚ್ಚಾಗಿರುವುದು ಕಂಡು ಬಂದಿದೆ.

ಬಸ್‌ಗಳತ್ತ ಚಿತ್ತ: ಎಲ್ಲಾ ವರ್ಗದ ಮಹಿಳೆಯರಿಗೂ ಸರ್ಕಾರ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿರುವ ಪರಿಣಾಮ ಕೆಎಸ್‌ಆರ್‌ಟಿಸಿ ಬಸ್‌ಗಳ ಕಡೆ ಚಿತ್ತಹರಿಸಿದ್ದು, ರೈಲು, ಖಾಸಗಿ ಬಸ್‌, ಮಿನಿ ಬಸ್‌, ಆಟೋ, ಅಪ್ಪೆ ಹಾಗೂ ಲಗ್ಗೇಜ್‌ ಗಾಡಿಗಳನ್ನು ಪ್ರಯಾಣಕ್ಕೆ ಅವಲಂಬಿಸುತ್ತಿದ್ದ ಮಹಿಳೆಯರು ಈಗ ಸಾರಿಗೆ ಬಸ್‌ಗಳಲ್ಲಿ ಶುಲ್ಕ ರಹಿತವಾಗಿ ಟಿಕೆಟ್‌ ಪಡೆದು ಸಂಚರಿಸುತ್ತಿದ್ದಾರೆ. ವಿಶೇಷ ಅಂದರೆ ದ್ವಿಚಕ್ರ ವಾಹನಗಳಲ್ಲಿ, ಕಾರುಗಳಲ್ಲಿ ಬರುತ್ತಿದ್ದ ಸರ್ಕಾರಿ ಮಹಿಳಾ ಅಧಿಕಾರಿಗಳು, ಸಿಬ್ಬಂದಿ ಕೂಡ ಈಗ ಬಸ್‌ಗಳಲ್ಲಿ ಸಂಚರಿಸುವ ಮೂಲಕ ಉಚಿತ ಪ್ರಯಾಣ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಬೆಂಗಳೂರಿಗೆ ಹೆಚ್ಚು ಪ್ರಯಾಣ: ಜಿಲ್ಲೆಯಲ್ಲಿ ಮಹಿಳೆಯರು ಹೆಚ್ಚು ಪ್ರಯಾಣ ಮಾಡುತ್ತಿರುವುದು ರಾಜಧಾನಿ ಬೆಂಗಳೂರು ಆಗಿದೆ. ಅದು ಬಿಟ್ಟರೆ ಜಿಲ್ಲೆಯೊಳಗೆ ತಾಲೂಕು ಕೇಂದ್ರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣ ಮಾಡುತ್ತಿರುವುದು ಕಂಡು ಬಂದಿದೆ. ಜಿಲ್ಲೆಯ ಇತರೆ ತಾಲೂಕುಗಳಿಗೆ ಹೋಲಿಸಿದರೆ ಜಿಲ್ಲಾ ಕೇಂದ್ರದಿಂದಲೇ ಹೆಚ್ಚು ಮಹಿಳೆಯರು ವಿವಿಧ ಕಡೆಗಳಿಗೆ ಸಂಚಾರ ಮಾಡುತ್ತಿದ್ದಾರೆ.

Advertisement

ರೈಲುಗಳಲ್ಲಿ ಪ್ರಯಾಣಿಕರ ಸಂಖ್ಯೆ ಇಳಿಮುಖ! : ಶಕ್ತಿ ಯೋಜನೆಯಿಂದಾಗಿ ಜಿಲ್ಲೆಯಲ್ಲಿ ಕೋಲಾರ, ಬೆಂಗಳೂರಿಗೆ ಸಂಚರಿಸುವ ಪ್ಯಾಸೆಂಜರ್‌ ರೈಲುಗಳಲ್ಲಿ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿದೆ. ರೈಲುಗಳಲ್ಲಿ ಟಿಕೆಟ್‌ ದರ ಕಡಿಮೆ ಇದ್ದರೂ ಉಚಿತ ಬಸ್‌ ಪ್ರಯಾಣವನ್ನು ಸದ್ಬಳಕೆ ಮಾಡಿಕೊಳ್ಳಲು ಮಹಿಳೆಯರು ಮುಂದಾಗಿರುವ ಪರಿಣಾಮ ಜಿಲ್ಲೆಯಲ್ಲಿ ಸಂಚರಿಸುವ ರೈಲುಗಳಲ್ಲಿ ಕೂಡ ಕೂಡ ಪ್ರಯಾಣಿಕರ ಕೊರತೆ ಎದ್ದು ಕಾಣುತ್ತಿದೆ.

ಖಾಸಗಿ ಬಸ್‌ಗಳಿಗೆ ಭಾರೀ ಹೊಡೆತ: ಕೃಷಿ ಕೂಲಿ ಕಾರ್ಮಿಕರು ಅದರಲ್ಲೂ ಮಧ್ಯಮ ವರ್ಗದ ಜನತೆ, ಶಾಲಾ, ಕಾಲೇಜ್‌ ವಿದ್ಯಾರ್ಥಿನಿಯರು ಹೆಚ್ಚಿನ ಪ್ರಮಾಣದಲ್ಲಿ ಖಾಸಗಿ ಬಸ್‌ಗಳಲ್ಲಿಯೇ ಸಂಚರಿಸುತ್ತಿದ್ದರು. ಆದರೆ ಸರ್ಕಾರ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದ್ದೆ ತಡ ಖಾಸಗಿ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಶೇ.90 ರಷ್ಟು ಕುಸಿದಿದ್ದು, ಬರೀ ಪುರುಷರಷ್ಟೇ ಖಾಸಗಿ ಬಸ್‌ಗಳಲ್ಲಿ ಸಂಚರಿಸುವಂತಾಗಿದೆ. ಅಪರೂಪಕ್ಕೆ ಖಾಸಗಿ ಬಸ್‌ಗಳಲ್ಲಿ ಮಹಿಳೆಯರು ಕಾಣಿಸಿಕೊಳ್ಳು ವಂತಾಗಿದೆ. ಇದರ ಪರಿಣಾಮ ಖಾಸಗಿ ಬಸ್‌ಗಳ ಮಾಲೀಕರಿಗೆ ಹರಿದು ಬರುತ್ತಿದ್ದ ಆದಾಯದಲ್ಲಿ ಭಾರೀ ಹೊಡೆತ ಬಿದ್ದಿದೆ.

-ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next