ಬೀಜಿಂಗ್ : ‘ಪರ್ವತವನ್ನು ಅಲುಗಾಡಿಸುವುದು ಸುಲಭ; ಆದರೆ ಚೀನ ಸೇನೆಯನ್ನು ಅಲುಗಾಡಿಸುವುದು ಬಹಳ ಕಷ್ಟ’ ಎಂಬ ಖಡಕ್ ಸಂದೇಶವನ್ನು ಚೀನ, ಭಾರತಕ್ಕೆ ರವಾನಿಸಿದೆ.
ಕಳೆದ ಎರಡು ತಿಂಗಳಲ್ಲಿ ಸಿಕ್ಕಿಂ ಗಡಿಯಲ್ಲಿನ ತ್ರಿರಾಷ್ಟ್ರ ಚೌಕದಲ್ಲಿ ಭಾರತ ಮತ್ತು ಚೀನ ಸೇನೆಯ ಮುಖಾಮುಖೀ ಇನ್ನೂ ಪಟ್ಟಾಗಿ ಮುಂದುವರಿದಿದೆ. ಇದೀಗ ತಾಜಾ ಎಚ್ಚರಿಕೆ ಎಂಬಂತೆ ಚೀನ, “ಡೋಕ್‌ಲಾಂ ಗಡಿಯಿಂದ ಭಾರತ ತನ್ನ ಸೇನೆಯನ್ನು ಈ ಕೂಡಲೇ ಹಿಂದೆಗೆಯಬೇಕು, ಇಲ್ಲವೇ ಪರಿಣಾಮವನ್ನು ಎದುರಿಸಬೇಕು’ ಎಂದು ಕಟು ಮಾತುಗಳಲ್ಲಿ ಎಚ್ಚರಿಕೆ ನೀಡಿದೆ.
“ಪರ್ವತವನ್ನು ಅಲುಗಾಡಿಸುವುದು ಸುಲಭ; ಆದರೆ ಚೀನದ ಪೀಪಲ್ಸ್ ಲಿಬರೇಶನ್ ಆರ್ಮಿಯನ್ನು ಅಲುಗಾಡಿಸುವುದು ಅತ್ಯಂತ ಕಠಿನ’ ಎಂದು ಚೀನ ಸಚಿವಾಲಯದ ವಕ್ತಾರ ವು ಕಿಯಾನ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಚೀನದ ಭೂಭಾಗ ಮತ್ತು ಸಾರ್ವಭೌಮತೆಯನ್ನು ರಕ್ಷಿಸುವ ಪಿಎಲ್‌ಎ ಸಾಮರ್ಥ್ಯವನ್ನು ಕಾಲಕಾಲಕ್ಕೆ ಬಲಪಡಿಸುತ್ತಲೇ ಬರಲಾಗಿದೆ ಎಂದವರು ನೆನಪಿಸಿಕೊಟ್ಟಿದ್ದಾರೆ.
“ಭಾರತ ಡೋಕ್‌ಲಾಂ ನಿಂದ ತನ್ನ ಸೇನೆಯನ್ನು ಹಿಂಪಡೆಯಬೇಕು; ಇಲ್ಲದಿದ್ದರೆ ಯುದ್ಧಕ್ಕೆ ತಯಾರಾಗಬೇಕು ಮತ್ತು ಆ ಯುದ್ಧದಲ್ಲಿ ಭಾರತ ತನ್ನದೇ ಭೂಭಾಗವನ್ನು ಕಳೆದುಕೊಳ್ಳಬೇಕಾಗುವುದು’ ಎಂದು ಚೀನದ ಸರಕಾರಿ ಒಡೆತನದ ದೈನಿಕ ಕಳೆದ ಜೂನ್ 21ರಂದು ಭಾರತಕ್ಕೆ ಎಚ್ಚರಿಕೆ ನೀಡಿದ ಬಳಿಕ ಇದೀಗ ಚೀನದ ಸಚಿವಾಲಯದ ವಕ್ತಾರನಿಂದ ಈ ಹೇಳಿಕೆ ಬಂದಿರುವುದು ಗಮನಾರ್ಹವಾಗಿದೆ.
ಭಾರತ – ಭೂತಾನ್ – ಚೀನ ಟ್ರೈ ನೇಶನ್ ಜಂಕ್ಷನ್‌ನ ಡೋಕ್‌ಲಾಂ ನಲ್ಲಿ ಭಾರತ ಮತ್ತು ಭೂತಾನ್‌ನ ಭದ್ರತೆಗೆ ಅಪಾಯಕಾರಿ ಎಂಬ ರೀತಿಯಲ್ಲಿ ರಸ್ತೆ ನಿರ್ಮಾಣದಲ್ಲಿ ತೊಡಗಿದ್ದನ್ನು ಭಾರತ ಸೇನೆ ನಿಲ್ಲಿಸಿರುವುದರಿಂದ ಡೋಕ್‌ಲಾಂ ನಲ್ಲಿ ಭಾರತ – ಚೀನ ಸೇನೆ ಕಳೆದ ಎರಡು ತಿಂಗಳಿಂದ ಮುಖಾಮುಖೀಯಾಗಿದ್ದು ಸಮರ ಉದ್ವಿಗ್ನತೆ ಸೃಷ್ಟಿಯಾಗಿದೆ.
ವಿವಾದಾತ್ಮಕ ಡೋಕ್‌ಲಾಂ ಪ್ರದೇಶವು ತನಗೆ ಸೇರಿರುವ ಡೋಂಗ್‌ಲಾಂಗ್ ಪ್ರದೇಶದ ಭಾಗವಾಗಿದೆ ಎಂದು ಚೀನ ಹೇಳಿಕೊಂಡಿದೆ.