ಮಿರ್ಪುರ್ (ಢಾಕಾ): ಆಲ್‌ರೌಂಡರ್ ಶಕಿಬ್ ಅಲ್ ಹಸನ್ ಮತ್ತೆ ಪ್ರವಾಸಿ ಆಸ್ಟ್ರೇಲಿಯದ ಮೇಲೆ ಮುಗಿಬಿದ್ದಿದ್ದಾರೆ. ತನ್ನ 50ನೇ ಟೆಸ್ಟ್ ಪಂದ್ಯದ ಮೊದಲ ದಿನ 84 ರನ್ ಬಾರಿಸಿ ಬಾಂಗ್ಲಾ ನೆರವಿಗೆ ನಿಂತ ಶಕಿಬ್, ದ್ವಿತೀಯ ದಿನದಾಟದಲ್ಲಿ 5 ವಿಕೆಟ್ ಉಡಾಯಿಸಿ ಕಾಂಗರೂಗಳ ಕುಸಿತಕ್ಕೆ ಕಾರಣರಾಗಿದ್ದಾರೆ. ಇದರೊಂದಿಗೆ ಮಿರ್ಪುರ್ ಟೆಸ್ಟ್‌ನಲ್ಲಿ ಆತಿಥೇಯ ಬಾಂಗ್ಲಾದೇಶದ ಹಿಡಿತ ಬಿಗಿಗೊಳ್ಳುವ ಲಕ್ಷಣ ಗೋಚರಿಸತೊಡಗಿದೆ.
ಬಾಂಗ್ಲಾದೇಶದ 260 ರನ್ನಿಗೆ ಜವಾಬಾಗಿ ಮೊದಲ ದಿನದ ಅಂತ್ಯಕ್ಕೆ 18 ರನ್ನಿಗೆ 3 ವಿಕೆಟ್ ಉರುಳಿಸಿಕೊಂಡು ಕುಂಟುತ್ತಿದ್ದ ಆಸ್ಟ್ರೇಲಿಯ 217 ರನ್ನಿಗೆ ಸರ್ವಪತನ ಕಂಡಿತು. 43 ರನ್ ಇನ್ನಿಂಗ್ಸ್ ಹಿನ್ನಡೆಗೆ ಸಿಲುಕಿತು. ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಬಾಂಗ್ಲಾ ಒಂದಕ್ಕೆ 45 ರನ್ ಮಾಡಿ 2ನೇ ದಿನದಾಟ ಮುಗಿಸಿದೆ. ಒಟ್ಟು 88 ರನ್ ಮುನ್ನಡೆಯಲ್ಲಿದೆ.
ಏಶ್ಯದ ಸ್ಪಿನ್ ಟ್ರ್ಯಾಕ್‌ಗಳಲ್ಲಿ ತನಗೆ ಬ್ಯಾಟಿಂಗ್ ಅಸಾಧ್ಯ ಎಂಬುದನ್ನು ಮತ್ತೂಮ್ಮೆ ತೋರ್ಪಡಿಸಿದ ಆಸೀಸ್, ಆಫ್ಸ್ಪಿನ್ನರ್‌ಗಳಾದ ಶಕಿಬ್ ಅಲ್ ಹಸನ್ ಮತ್ತು ಮೆಹಿದಿ ಹಸನ್ ಮಿರಾಜ್ ದಾಳಿಗೆ ತತ್ತರಿಸಿತು. ಶಕಿಬ್ 68ಕ್ಕೆ 5 ವಿಕೆಟ್ ಉರುಳಿಸಿದರೆ, ಮಿರಾಜ್ 62 ರನ್ನಿತ್ತು 3 ವಿಕೆಟ್ ಕೆಡವಿದರು. ಶಕಿಬ್ ಇನ್ನಿಂಗ್ಸ್ ಒಂದರಲ್ಲಿ 5 ಪ್ಲಸ್ ವಿಕೆಟ್ ಕಿತ್ತ 16ನೇ ಸಂದರ್ಭ ಇದಾಗಿದೆ. ಟೆಸ್ಟ್ ಮಾನ್ಯತೆ ಪಡೆದ ಎಲ್ಲ ರಾಷ್ಟ್ರಗಳ ವಿರುದ್ಧ 5 ಪ್ಲಸ್ ವಿಕೆಟ್ ಉರುಳಿಸಿದ ವಿಶ್ವದ ಕೇವಲ 4ನೇ ಬೌಲರ್ ಎಂಬ ಹೆಗ್ಗಳಿಕೆಯೂ ಶಕಿಬ್ ಅವರದಾಗಿದೆ.
ನಿಜಕ್ಕಾದರೆ ಕಾಂಗರೂ ಇನ್ನಿಂಗ್ಸ್ ನೂರೈವತ್ತ ರೊಳಗೇ ಮುಗಿಯಬೇಕಿತ್ತು. 144 ರನ್ ಆಗು ವಷ್ಟರಲ್ಲಿ ಪ್ರವಾಸಿಗರ 8 ವಿಕೆಟ್ ಹಾರಿ ಹೋಗಿತ್ತು. ಆದರೆ 9ನೇ ವಿಕೆಟಿಗೆ ಜತೆಗೂಡಿದ ಆ್ಯಶrನ್ ಅಗರ್ (ಔಟಾಗದೆ 41) ಮತ್ತು ಪ್ಯಾಟ್ ಕಮಿನ್ಸ್ (25) 49 ರನ್ ಒಟ್ಟುಗೂಡಿಸಿ ಹಿನ್ನಡೆಯನ್ನು ಕಡಿಮೆ ಮಾಡುವಲ್ಲಿ ಯಶಸ್ವಿಯಾದರು.
ಆಸ್ಟ್ರೇಲಿಯದ ಸರದಿಯಲ್ಲಿ 45 ರನ್ ಹೊಡೆದ ಆರಂಭಕಾರ ಮ್ಯಾಟ್ ರೆನ್‌ಶಾ ಅವರದೇ ಹೆಚ್ಚಿನ ಗಳಿಕೆ. ಹ್ಯಾಂಡ್ಸ್‌ಕಾಂಬ್ 33, ಮ್ಯಾಕ್ಸ್‌ವೆಲ್ 23 ರನ್ ಮಾಡಿದರು. ನಾಯಕ ಸ್ಮಿತ್ 8, ಕೀಪರ್ ವೇಡ್ ಐದೇ ರನ್ನಿಗೆ ಆಟ ಮುಗಿಸಿದರು.
ಬಾಂಗ್ಲಾ ತನ್ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಸೌಮ್ಯ ಸರ್ಕಾರ್ (15) ವಿಕೆಟ್ ಕಳೆದುಕೊಂಡಿದೆ. ತಮಿಮ್ ಇಕ್ಬಾಲ್ 30 ರನ್ ಮಾಡಿ ಆಡುತ್ತಿದ್ದಾರೆ.
ಸಂಕ್ಷಿಪ್ತ ಸ್ಕೋರ್
ಬಾಂಗ್ಲಾದೇಶ-260 ಮತ್ತು ಒಂದು ವಿಕೆಟಿಗೆ 45 (ತಮಿಮ್ ಬ್ಯಾಟಿಂಗ್ 30, ಅಗರ್ 9ಕ್ಕೆ 1).
ಆಸ್ಟ್ರೇಲಿಯ-217 (ರೆನ್‌ಶಾ 45, ಅಗರ್ 41, ಹ್ಯಾಂಡ್ಸ್‌ಕಾಂಬ್ 33, ಕಮಿನ್ಸ್ 25, ಮ್ಯಾಕ್ಸ್‌ವೆಲ್ 23, ಶಕಿಬ್ 68ಕ್ಕೆ 5, ಮಿರಾಜ್ 62ಕ್ಕೆ 3).