ಹೊಸದಿಲ್ಲಿ: ಟೈಮ್ಡ್ ಔಟ್ ವಿವಾದದಿಂದ ಸುದ್ದಿಯಲ್ಲಿರುವ ಬಾಂಗ್ಲಾದೇಶ ನಾಯಕ ಶಕೀಬ್ ಅಲ್ ಹಸನ್ ಅವರು ಇದೀಗ ಏಕದಿನ ವಿಶ್ವಕಪ್ ಕೂಟದಿಂದಲೇ ಹೊರಬಿದ್ದಿದ್ದಾರೆ. ಬಾಂಗ್ಲಾದೇಶದ ಅಂತಿಮ ಲೀಗ್ ಪಂದ್ಯಕ್ಕೆ ಅವರು ಅಲಭ್ಯರಾಗಲಿದ್ದಾರೆ.
ಸೋಮವಾರ ಶ್ರೀಲಂಕಾ ವಿರುದ್ದ ನಡೆದ ಹೊಸದಿಲ್ಲಿಯಲ್ಲಿ ನಡೆದ ಪಂದ್ಯದಲ್ಲಿ ಶಕೀಬ್ ಗಾಯಗೊಂಡಿದ್ದರು. ಅವರು ಎಡಗೈಯ ತೋರು ಬೆರಳಿಗೆ ಗಾಯವಾಗಿದೆ. ಹೀಗಾಗಿ ಕೂಟದಿಂದ ಅವರು ಹೊರಬಿದ್ದಿದ್ದಾರೆ.
“ಶಕೀಬ್ ಅವರ ಇನ್ನಿಂಗ್ಸ್ ನ ಆರಂಭದಲ್ಲಿ ಅವರ ಎಡ ತೋರು ಬೆರಳಿಗೆ ಗಾಯವಾಗಿದೆ, ಆದರೆ ಟ್ಯಾಪಿಂಗ್ ಮತ್ತು ನೋವು ನಿವಾರಕ ಮಾತ್ರಗಳೊಂದಿಗೆ ಅವರು ಬ್ಯಾಟಿಂಗ್ ಮುಂದುವರಿಸಿದ್ದರು” ಎಂದು ಬಾಂಗ್ಲಾದೇಶ ತಂಡದ ಫಿಸಿಯೋ ಬೈಜೆದುಲ್ ಇಸ್ಲಾಂ ಖಾನ್ ಮಂಗಳವಾರ ಹೇಳಿದ್ದಾರೆ.
ಶಕೀಬ್ ಅವರ ಗಾಯದ ಪ್ರಮಾಣದ ಬಗ್ಗೆ ಉಲ್ಲೇಖಿಸಲಾಗಿಲ್ಲ. ಬಾಂಗ್ಲಾದೇಶವು ಈಗಾಗಲೇ ವಿಶ್ವಕಪ್ ನ ಸೆಮಿ ಫೈನಲ್ ರೇಸ್ ನಿಂದ ಹೊರಬಿದ್ದಿದೆ. ಆದರೆ ಮುಂದಿನ ಚಾಂಪಿಯನ್ಸ್ ಟ್ರೋಪಿಯಲ್ಲಿ ಸ್ಥಾನ ಪಡೆಯಲು ಮುಂದಿನ ಪಂದ್ಯ ಮಹತ್ವದ್ದಾಗಿದೆ.
ಬಾಂಗ್ಲಾದೇಶವು ತನ್ನ ಮುಂದಿನ ಪಂದ್ಯದಲ್ಲಿ ಅಂದರೆ ಏಕದಿನ ವಿಶ್ವಕಪ್ ನ ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಈ ಪಂದ್ಯವು ನವೆಂಬರ್ 11ರಂದು ಪುಣೆಯಲ್ಲಿ ನಡೆಯಲಿದೆ.