ಇಂದ್ರಜಿತ್ ಲಂಕೇಶ್ ನಿರ್ದೇಶನದಲ್ಲಿ ಮೂಡಿಬಂದಿರುವ “ಶಕೀಲಾ’ ಚಿತ್ರ ಈ ವಾರ ಕನ್ನಡದ ಜೊತೆ ಹಿಂದಿ, ತಮಿಳು, ತೆಲುಗು ಮತ್ತು ಮಲೆಯಾಳಂ ಸೇರಿದಂತೆ ಏಕಕಾಲಕ್ಕೆ ಐದು ಭಾಷೆಗಳಲ್ಲಿ ತೆರೆಗೆ ಬರುತ್ತಿದೆ.
ನಟಿ ಶಕೀಲಾ ಅವರ ಜೀವನಾಧಾರಿತ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಬಾಲಿವುಡ್ ನಟಿ ರಿಚಾ ಚಡ್ಡಾ “ಶಕೀಲಾ’ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಬಿಡುಗಡೆಗೂ ಮುನ್ನ ಮಾತಿಗೆ ಸಿಕ್ಕ ಇಂದ್ರಜಿತ್ ಲಂಕೇಶ್, “ಶಕೀಲಾ’ ಚಿತ್ರದ ಬಗ್ಗೆ ಒಂದಷ್ಟು ಸಂಗತಿಗಳನ್ನು ಹಂಚಿಕೊಂಡರು. “90 ರ ದಶಕದಲ್ಲಿ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿದ್ದ ನಟಿ ಶಕೀಲಾ ಅವರ ಜೀವನದಕುರಿತು ಈ ಸಿನಿಮಾ ನಿರ್ಮಾಣವಾಗಿದೆ.
ನಮ್ಮ ಪ್ಲಾನ್ ಪ್ರಕಾರ ಈ ವರ್ಷದ ಆರಂಭದಲ್ಲಿಯೇ ಈ ಸಿನಿಮಾ ಬಿಡುಗಡೆಯಾಗಬೇಕಿತ್ತು. ಆದರೆ ಕೋವಿಡ್‌ಕಾರಣದಿಂದ ಸಿನಿಮಾ ವರ್ಷದ ಕೊನೆಗೆ ಬಿಡುಗಡೆಯಾಗುತ್ತಿದೆ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾ. ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲೆಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಈ ಸಿನಿಮಾ ರಿಲೀಸ್ ಆಗುತ್ತಿದೆ. ಸುಮಾರು 2 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ಗಳಲ್ಲಿ “ಶಕೀಲಾ’ ಸಿನಿಮಾ ರಿಲೀಸ್ ಆಗುತ್ತಿದೆ’ ಎಂದಿದ್ದಾರೆ ನಿರ್ದೇಶಕ ಇಂದ್ರಜಿತ್ ಲಂಕೇಶ್.
ಇದನ್ನೂ ಓದಿ : ‘ಕಂಠಿ, ಸಾಹೇಬ’ ಚಿತ್ರ ನಿರ್ದೇಶಕ ಭರತ್ ನಿಧನ
“ಈಗಾಗಲೇ ಬಿಡುಗಡೆಯಾಗಿರುವ “ಶಕೀಲಾ’ ಸಿನಿಮಾದ ಪೋಸ್ಟರ್, ಟೀಸರ್,ಟ್ರೇಲರ್ ಎಲ್ಲದಕ್ಕೂ ಬಿಗ್ ರೆಸ್ಪಾನ್ಸ್‌ಸಿಗುತ್ತಿದೆ. ಏಕಕಾಲಕ್ಕೆ ಬೇರೆ ಬೇರೆಭಾಷೆಯಲ್ಲಿ ಸಿನಿಮಾ ನಿರ್ಮಿಸಿದ್ದು, ಪ್ರತಿ ಪಾತ್ರಕ್ಕೂ ಬೇರೆ ಬೇರೆ ಭಾಷೆಯಕಲಾವಿದರು ಮತ್ತು ತಂತ್ರಜ್ಞರನ್ನು ಬಳಸಿಕೊಳ್ಳಲಾಗಿದೆ. ದಕ್ಷಿಣ ಭಾರತದ ನಟಿಯಕಥೆಯನ್ನು ಈ ಸಿನಿಮಾದ ಮೂಲಕ ಇಡೀ ಭಾರತೀಯಚಿತ್ರರಂಗಕ್ಕೆ ತಿಳಿಸುತ್ತಿದ್ದೇವೆ. ಕಳೆದ ಕೆಲದಿನಗಳಿಂದ ಎಲ್ಲ ಭಾಷೆಗಳಲ್ಲೂ “ಶಕೀಲಾ’ ಸಿನಿಮಾದ ಪ್ರಚಾರವನ್ನು ನಡೆಸಲಾಗುತ್ತಿದೆ’ ಎಂದಿದ್ದಾರೆ.
ಇನ್ನು “ಶಕೀಲಾ’ ಚಿತ್ರದಲ್ಲಿ ರಿಚಾ ಚಡ್ಡಾ ಅವರೊಂದಿಗೆ ಪಂಕಜ್ ತ್ರಿಪಾಠಿ, ರಾಜೀವ ಪಿಳ್ಳೈ, ಎಸ್ತಾರ್ ನರೋನಾ ಸೇರಿದಂತೆ ಅನೇಕರುಕಲಾವಿದರು ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಸದ್ಯ ತನ್ನ ಟೈಟಲ್, ಪೋಸ್ಟರ್, ಟೀಸರ್ ಮೂಲಕ ಒಂದಷ್ಟು ಸಿನಿ ಮಂದಿಯ ಗಮನ ಸೆಳೆದಿರುವ “ಶಕೀಲಾ’ ಥಿಯೇಟರ್‌ನಲ್ಲಿ ಪ್ರೇಕ್ಷಕ ಪ್ರಭುಗಳಿಗೆ ಎಷ್ಟರ ಮಟ್ಟಿಗೆ ಇಷ್ಟವಾಗಲಿದ್ದಾಳೆ ಅನ್ನೋದು ಈ ವಾರಾಂತ್ಯದಲ್ಲಿ ಗೊತ್ತಾಗಲಿದೆ.