ಬೆಂಗಳೂರು: ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಸಂಚಿನೊಂದಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕರ್ನಾಟಕಕ್ಕೆ ಭೇಟಿ ಕೊಟ್ಟಿದ್ದಾರೆ. ಶಾ ಅವರು ಇಲ್ಲಿಂದ ಹೋಗುವುದಕ್ಕೂ ಮುನ್ನ ರಾಜ್ಯದ ವಿರುದ್ಧದ ಕೇಂದ್ರದ ಮಲತಾಯಿ ಧೋರಣೆ ಬಗೆಗೆ ಉತ್ತರ ಕೊಟ್ಟು ಹೋಗಬೇಕು,’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದಿನೇಶ್ ಗುಂಡೂರಾವ್, “ಬರ ಪರಿಹಾರ ಅನುದಾನದಲ್ಲಿ ರಾಜ್ಯಕ್ಕೆ ತಾರತಮ್ಯ ತೋರಲಾಗಿದೆ. ರೈತರ ಬೆಳೆ ನಷ್ಟ ವಿಮೆಯಿಂದ ವಿಮಾ ಕಂಪನಿಗಳಿಗೆ ಲಾಭ ಮಾಡಿಕೊಡಲಾಗಿದೆ. ಮಹದಾಯಿ ವಿಚಾರದಲ್ಲಿ ಈವರೆಗೆ ನ್ಯಾಯ ಸಿಕ್ಕಿಲ್ಲ. ಪರಿಸ್ಥಿತಿ ಹೀಗಿರುವಾಗ ಬಿಜೆಪಿ ಪಕ್ಷ ಮತ್ತು ಕೇಂದ್ರ ಸರ್ಕಾರ ರಾಜ್ಯಕ್ಕೆ ಏನು ಮಾಡಿದೆ ಎಂದು ಅಮಿತ್ ಶಾ ಉತ್ತರ ಕೊಡಲಿ ಎಂದು ಆಗ್ರಹಿಸಿದರು.
“ವಿಸ್ತಾರಕ ಯೋಜನೆ ಮೂಲಕ ಕೇಂದ್ರ ಸರ್ಕಾರದ ಯೋಜನೆಗಳ ತಪ್ಪು ಅಂಕಿಸಂಖ್ಯೆಗಳನ್ನು ಕೊಟ್ಟು ಜನರಲ್ಲಿ ಸುಳ್ಳು ಪ್ರಚಾರ ಮಾಡಿದ್ದೀರಿ. ರಾಜ್ಯದಲ್ಲಿ ಕೋಮುಗಲಭೆ ಮಾಡಿಸಲು ಹೊರಟಿದ್ದೀರಿ. ಗಣೇಶ ಉತ್ಸವಕ್ಕೆ ಹತ್ತು ಲಕ್ಷ ರೂ. ಕಟ್ಟಬೇಕು ಅಂತ ಸುಳ್ಳು ಸುದ್ದಿ ಹಬ್ಬಿಸಿದ್ದೀರಿ. ಈ ಮೂಲಕ ಜನರಲ್ಲಿ ರಾಜ್ಯ ಸರ್ಕಾರ ಹಿಂದೂ ವಿರೋಧಿ ಎಂಬ ಭಾವನೆ ಮೂಡಿಸುತ್ತಿದ್ದೀರಿ. ಮಹದಾಯಿ ವಿಚಾರದಲ್ಲಿ ರಾಜ್ಯಕ್ಕೆ ನ್ಯಾಯ ಕೊಡಿಸುವ ಪ್ರಯತ್ನ ಮಾಡಿದ್ದೀರಾ? ಮಹಾರಾಷ್ಟ್ರಕ್ಕೆ 8 ಸಾವಿರ ಕೋಟಿ, ಗುಜರಾತ್‌ಗೆ 3,800 ಕೋಟಿ ರೂ. ಬರಪರಿಹಾರ ಕೊಟ್ಟು, ಕರ್ನಾಟಕಕ್ಕೆ ಮಾತ್ರ 1,500 ಕೋಟಿ ರೂ.ಯಾಕೆ? ಈ ಪ್ರಶ್ನೆಗಳಿಗೆ ಉತ್ತರ ಕೊಟ್ಟು ಹೋಗಿ’ ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಕೋಮುಗಲಭೆ ಸೃಷ್ಟಿಸುವ, ಆಪರೇಷನ್ ಕಮಲ ನಡೆಸುವ ಹಾಗೂ ಕೇಂದ್ರೀಯ ತನಿಖಾ ತಂಡಗಳನ್ನು ಬಳಸಿಕೊಂಡು ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಷಡ್ಯಂತ್ರದ ಕಾರ್ಯಸೂಚಿಯೊಂದಿಗೆ ಅಮಿತ್ ಶಾ ಇಲ್ಲಿಗೆ ಬಂದಿದ್ದಾರೆ. ಹಿಂದೂ ಮತಗಳನ್ನು ಧೃವೀಕರಣಗೊಳಿಸುವುದು ಬಿಜೆಪಿಯ ಪ್ರಮುಖ ಅಜೆಂಡಾ. ಇದಕ್ಕಾಗಿ ಕೋಮುಭಾವನೆ ಕೆರಳಿಸುವಂತಹ ಸನ್ನಿವೇಶಗಳನ್ನು ಹುಟ್ಟುಹಾಕುವ ಹುನ್ನಾರ ಬಿಜೆಪಿ ಮಾಡುತ್ತಿದೆ ಎಂದು ಆರೋಪಿಸಿದರು.
ಪ್ರತ್ಯೇಕ ಪಕ್ಷ ಕಟ್ಟುವ ಕೆಲಸ ಯಶಸ್ವಿಯಾಗಿಲ್ಲ
ಈ ಹಿಂದೆ ರಾಜ್ಯದಲ್ಲಿ ಬಂಗಾರಪ್ಪ, ವಿಜಯ ಸಂಕೇಶ್ವರ್, ವಿಜಯ್ ಮಲ್ಯ ಹೊಸ ಪಕ್ಷ ಕಟ್ಟುವ ಪ್ರಯತ್ನಕ್ಕೆ ಕೈ ಹಾಕಿದ್ದರು. ಆದರೆ, ಯಶಸ್ಸು ಸಿಕ್ಕಿಲ್ಲ. ಹಾಗಿದ್ದರೂ, ಉಪೇಂದ್ರ ಅವರ ನಿರ್ಧಾರ ಸ್ವಾಗತಾರ್ಹ. ಉಪೇಂದ್ರ ಅವರನ್ನು ಕಾಂಗ್ರೆಸ್‌ಗೆ ಕರೆ ತರುವ ಅವಶ್ಯಕತೆ ಇಲ್ಲ ಎಂದು ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಸರ್ಕಾರದ ಬಗ್ಗೆ ಮಾತನಾಡುವ ನೈತಿಕತೆ ಅಮಿತ್ ಶಾ ಅವರಿಗಿಲ್ಲ. ಭ್ರಷ್ಟರನ್ನು ಅಕ್ಕ-ಪಕ್ಕ ಕೂರಿಸಿಕೊಂಡು ಅವರು ಕಾಂಗ್ರೆಸ್ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿರುವುದು ವಿಪರ್ಯಾಸ. ಒಂದು ವೇಳೆ ಅವರ ಮಾತು ನಿಜ ಆದಲ್ಲಿ, ರಾಜ್ಯ ಸರ್ಕಾರದ ವಿರುದ್ಧ ಚಾರ್ಜ್‌ಶೀಟ್ ಬಿಡುಗಡೆಗೊಳಿಸಲಿ.
-ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ