ಶಹಾಪುರ: ವಿಶ್ವದೆಲ್ಲೆಡೆ ಕೋವಿಡ್ ವೈರಸ್ ವ್ಯಾಪಿಸುತ್ತಿದ್ದು, ದೇಶದಲ್ಲಿಯೂ ರೋಗ ತಡೆಗೆ ಕ್ರಮ ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರ ಸೂಚಿಸಿದ ಮಾರ್ಗಸೂಚಿಗಳನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಹೇಳಿದರು.
ತಾಪಂ ಸಭಾಂಗಣದಲ್ಲಿ ಬುಧವಾರ ನಡೆದ ಕೋವಿಡ್ ಟಾಸ್ಕ್ಫೋರ್ಸ್ ಸಮಿತಿ ಸಭೆಯಲ್ಲಿ ಅವರು ಮಾತನಾಡಿ, ಕೋವಿಡ್ ವಿರುದ್ಧ ಹೋರಾಡಲು ಸಾಕಷ್ಟು ಅನುದಾನ ಬಿಡುಗಡೆಯಾಗಿದ್ದು, ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಕೂಲಿ ಕಾರ್ಮಿಕರು, ಅಲೆಮಾರಿಗಳು, ಬಡವರಾರು ಹಸಿವಿನಿಂದ ಬಳಲದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ರೇಷನ್ ಕಾರ್ಡ್ ಇಲ್ಲದವರಿಗೆ ರೇಷನ್ ನೀಡದಿರುವ ಕುರಿತು ತಹಶೀಲ್ದಾರ್ ಸೇರಿದಂತೆ ಆಹಾರ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅವರು, ತಾಲೂಕಿನಲ್ಲಿ ರೇಷನ್ ಕಾರ್ಡ್ ಇರದವರು ಎಷ್ಟು ಜನರಿದ್ದಾರೆ? ಎಂದು ಪ್ರಶ್ನಿಸಿದರು. ಸಮರ್ಪಕ ಉತ್ತರ ದೊರೆಯದ ಕಾರಣ ಆಕ್ರೋಶಿತರಾಗಿ ಮೊದಲ ಹಂತದ ಲಾಕ್ ಡೌನ್ ಮುಗಿದಿದ್ದು, 20 ದಿನಗಳು ಕಳೆದಿವೆ.
ಇನ್ನೂ ನೀವು ಪಟ್ಟಿ ಮಾಡುವ ಹಂತದಲ್ಲಿದ್ದೀರಿ ಎಂದು ಗರಂ ಆದರು. ಯಾದಗಿರಿಯಲ್ಲಿ ಯಾವುದೇ ಪ್ರಕರಣ ಇಲ್ಲವೆಂದು ಸಡಿಲಿಕೆ ಬಿಡದೇ ಜಾಗೃತರಾಗಬೇಕು ಎಂದರು. ಆಹಾರ ಇಲಾಖೆ ಜಿಲ್ಲಾ ನಿರ್ದೇಶಕರಿಗೆ ಫೋನ್ ಮೂಲಕ ಸಂಪರ್ಕಿಸಿ ನಾಳೆಯೇ ಬಡವರು-ಕೂಲಿಕಾರ್ಮಿಕರಿಗೆ ರೇಷನ್ ಹಾಗೂ ಊಟದ ವ್ಯವಸ್ಥೆ ಮಾಡಬೇಕು. ಅಧಿಕಾರಿಗಳು ಮುಕ್ತವಾಗಿ ಮಾತನಾಡಿ, ತೊಂದರೆ ಇದ್ದಲ್ಲಿ ತಿಳಿಸಿ ಪರಿಹಾರ ಕಂಡುಕೊಳ್ಳಿ. ಸಮಸ್ಯೆಯಾದರೆ ಶಾಸಕರು, ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆಗೆ ಮಾಹಿತಿ ಹಂಚಿಕೊಳ್ಳಿ. ನನಗೂ ವಾಟ್ಸ್ ಆ್ಯಪ್‌ಗೆ ಹಾಕಿ ಪರಿಹರಿಸೋಣ ಎಂದರು. ತಾಲೂಕಿನಲ್ಲಿ ಕೂಲಿ ಕಾರ್ಮಿಕರು, ಅಲೆಮಾರಿಗಳಿಗೆ ತಾಲೂಕು ಆಡಳಿತದಿಂದ ಊಟದ ವ್ಯವಸ್ಥೆ, ರೇಷನ್ ಕಾರ್ಡ್ ಇರದವರಿಗೆ ರೇಷನ್ ವ್ಯವಸ್ಥೆ ಆಗಿಲ್ಲ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.
ಈ ಕುರಿತು ತಹಶೀಲ್ದಾರನ್ನು ಪ್ರಶ್ನಿಸಿದ ಸಚಿವರು, ಕೊರೊನಾ ತಡೆಗೆ ಏನೇನು ಕ್ರಮ ತೆಗೆದುಕೊಂಡಿದ್ದೀರಿ?, ಬಂದ ಅನುದಾನದಲ್ಲಿ ಎಷ್ಟು ಖರ್ಚು ಮಾಡಿದ್ದೀರಿ? ಎಂದು ಪ್ರಶ್ನಿಸಿದರು. ಕೂಡಲೇ ಸಮರ್ಪಕವಾಗಿ ಕರ್ತವ್ಯ ನಿಭಾಯಿಸದಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು. ಶಹಾಪುರ ಮತ್ತು ವಡಗೇರಾ ತಾಲೂಕಿನಲ್ಲಿ ಕೂಲಿ ಕಾರ್ಮಿಕರು-ಅಲೆಮಾರಿಗಳ ಸಂಖ್ಯೆ ಎಷ್ಟಿದೆ ಎಂದು ಸಚಿವರು ಕೇಳಿದಾಗ, ಅಧಿಕಾರಿಗಳು ಕೇವಲ 365 ಜನ ಎಂದು ಪಟ್ಟಿ ತೋರಿಸಿದರು.
ಎರಡು ತಾಲೂಕಿನಲ್ಲಿ ಇಷ್ಟೇ ಜನ ಇದೆಯೇ ಎಂದು ಶಾಸಕರಿಬ್ಬರು- ಸಚಿವರು ಸಿಬ್ಬಂದಿಗಳು ಮತ್ತು ತಾಲೂಕು ದಂಡಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕೂಡಲೇ ಸಮರ್ಪಕ ಪಟ್ಟಿ ಸಿದ್ಧಪಡಿಸುವಂತೆ ಅವರಿಗೆ ನಿತ್ಯ ಊಟ ಮತ್ತು ರೇಷನ್ ಮುಟ್ಟಿಸುವ ವ್ಯವಸ್ಥೆ ಮಾಡಲು ಸೂಚಿಸಿದರು.
ಶಾಸಕ ಶರಣಬಸಪ್ಪಗೌಡ ದರ್ಶನಾಪುರ, ಯಾದಗಿರಿ ಶಾಸಕ ವೆಂಕಟರಡ್ಡಿ ಮುದ್ನಾಳ, ತಹಶೀಲ್ದಾರ್ ಜಗನ್ನಾಥರಡ್ಡಿ, ತಾಪಂ
ಅಧ್ಯಕ್ಷ ನಾಗಪ್ಪ ಪೂಜಾರಿ ಇದ್ದರು.
ನಗರದಲ್ಲಿ ನಿರ್ಗತಿಕರು, ಹಸಿವಿನಿಂದ ಬಳಲುವವರಿಗೆ ದಾನಿಗಳು ಊಟದ ವ್ಯವಸ್ಥೆ ಮಾಡಿದ್ದಾರೆ. ತಾಲೂಕಾಡಳಿತ ಕೂಲಿ ಕಾರ್ಮಿಕರು-ಬಡವರಿಗೆ ಊಟದ ವ್ಯವಸ್ಥೆ ಮಾಡಬೇಕು. ಲಾಕ್‌ಡೌನ್ ಸಡಿಲಿಸದೇ ಕಠಿಣ ಕ್ರಮ ಕೈಗೊಳ್ಳಬೇಕು. ಶಹಾಪುರದಲ್ಲಿ ಬೆಳಗ್ಗೆ 6 ರಿಂದ 10 ಗಂಟೆವರೆಗೆ ತರಕಾರಿ, ದಿನಸಿ ಅಂಗಡಿಗಳನ್ನು ತೆರೆದು ನಂತರ ಬಂದ್ ಮಾಡಬೇಕು. ಈ ಮೂಲಕ ಅಧಿಕಾರಿಗಳು ಆದೇಶ ಕಟ್ಟುನಿಟ್ಟಾಗಿ ಪಾಲಿಸಬೇಕು.
ಶರಣಬಸಪ್ಪಗೌಡ ದರ್ಶನಾಪುರ
ಶಾಸಕರು, ಶಹಾಪುರ
ಶಹಾಪುರ, ವಡಗೇರಾ ತಾಲೂಕಿನ ಕೂಲಿ ಕಾರ್ಮಿಕರು, ಅಲೆಮಾರಿಗಳು ಸೇರಿದಂತೆ ನಿತ್ಯ ದುಡಿದು ತಿನ್ನುವ ಕುಟುಂಬಗಳಿವೆ. ಅಂಥವರು ಲಾಕ್ ಡೌನ್‌ನಿಂದ ಪರದಾಡುತ್ತಿದ್ದು, ಅವರಿಗೆ ಊಟದ ವ್ಯವಸ್ಥೆ ಮಾಡಬೇಕು. ರೇಷನ್ ಕಾರ್ಡ್ ಇಲ್ಲದವರಿಗೂ ರೇಷನ್
ತಲುಪಿಸುವ ವ್ಯವಸ್ಥೆಯಾಗಬೇಕು.
ವೆಂಕಟರಡ್ಡಿ ಮುದ್ನಾಳ
ಶಾಸಕರು, ಯಾದಗಿರಿ