ಶಹಾಪುರ: ಕನ್ನಡಾಂಬೆ ವರ ಪುತ್ರರಾಗಿ ತಮ್ಮ ಸರಳ ಸಾಹಿತ್ಯದೊಂದಿಗೆ ಸಾಮಾಜಿಕ ಚಿಂತನೆ ಹಾಗೂ ಜೀವನದ ಮೌಲ್ಯ ಪ್ರತಿಯೊಬ್ಬರ ಬದುಕಿಗೆ ಕೊಡುಗೆಯಾಗಿ ನೀಡಿದ ರಾಷ್ಟ್ರಕವಿ ಕುವೆಂಪು ಮನುಕುಲದ ಮಾರ್ಗದರ್ಶಕರಾಗಿದ್ದರು ಎಂದು ಸಾಹಿತಿ ಶಿವಣ್ಣ ಇಜೇರಿ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಕಸಾಪ ಭವನದಲ್ಲಿ ತಾಲೂಕು ಆಡಳಿತದ ಆಶ್ರಯದಲ್ಲಿ ರಾಷ್ಟ್ರಕವಿ ಕುವೆಂಪು ಜನ್ಮ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜೀವನಾದರ್ಶಗಳ ಪ್ರತಿಬಿಂಬಗಳಂತೆ ಹಲವಾರು ಗ್ರಂಥ ಭಂಡಾರಗಳನ್ನು ನಾಡಿಗೆ ಬಳುವಳಿಯಾಗಿ ನೀಡಿದ ಅವರು ಅಜರಾಮರಾಗಿದ್ದಾರೆ. ನಾಡು, ದೇಶ ಪರಂಪರೆ ಅಲ್ಲದೆ ಜೀವನ, ಸಂಸಾರ ಬದುಕಿನ ಕುರಿತು ಸಾಕಷ್ಟು ಮಜಲುಗಳ ಬಗ್ಗೆ ಸಮರ್ಪಕವಾಗಿ ಕಾವ್ಯ ಮತ್ತು ಕೃತಿಗಳ ಮೂಲಕ ತಿಳಿಸಿಕೊಟ್ಟ ಕುವೆಂಪು ಸ್ಮರಣೀಯರಾಗಿದ್ದಾರೆ ಎಂದು ಹೇಳಿದರು.
ಸರ್ಕಾರ ಅವರ ಜನ್ಮ ದಿನವನ್ನು ವಿಶ್ವ ಮಾನವ ದಿನವನ್ನಾಗಿ ಆಚರಿಸುತ್ತಿರುವದು ಅರ್ಥಬದ್ಧವಾಗಿದೆ ಎಂದು ಹೇಳಿದರು. ಸಾಹಿತಿ ವಿಶ್ವರಾಧ್ಯ ಸತ್ಯಂಪೇಟೆ ಮಾತನಾಡಿ, ಕನ್ನಡ ಶ್ರೀಮಂತಗೊಳಿಸಿದ ಮಹಾನ್ ಚೇತನ ಕುವೆಂಪು. ಅವರ ಆದರ್ಶಗಳು ಮುಂದಿನ ಪೀಳಿಗೆಗೆ ಸೂಕ್ತ ಮಾರ್ಗವಾಗಬೇಕು. ವಿಶ್ವ ಮಾನವ ಸ್ವರೂಪಿಯಾದ ಅವರು, ಅವರ ನಡೆ ನುಡಿ ಬರಹಗಳಿಂದ ಸಾಕಷ್ಟು ಕಲಿಯಬೇಕಾಗಿದೆ ಎಂದು ಹೇಳಿದರು.
ತಹಶೀಲ್ದಾರ್ ಜಗನಾಥರಡ್ಡಿ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಅಧ್ಯಕ್ಷ ಸಿದ್ದಲಿಂಗಣ್ಣ ಆನೇಗುಂದಿ, ಹಿರಿಯ ಸಾಹಿತಿ ದೊಡ್ಡಬಸ್ಸಪ್ಪ ಬಳ್ಳೂರಿಗಿ, ತಾಪಂ ಅಧ್ಯಕ್ಷ ನಾಗಣ್ಣ ಪೂಜಾರಿ, ನಗರಸಭೆ ಪೌರಾಯುಕ್ತ ಬಸವರಾಜ ಶಿವಪೂಜೆ, ಡಾ| ಅಬ್ದುಲ್ ಕರಿಂ, ಡಾ| ಮೋನಪ್ಪ ಶಿರವಾಳ, ಗುರುಬಸವಯ್ಯ ಗದ್ದುಗೆ, ಸಿಡಿಪಿಒ ಟಿ.ಪಿ. ದೊಡ್ಮನಿ, ಗುಂಡಪ್ಪ ತುಂಬಗಿ ಇದ್ದರು.
ಇದೇ ಸಂದರ್ಭದಲ್ಲಿ ಉಡುಪಿ ಪೇಜಾವರ ಶ್ರೀಗಳಿಗೆ ಎರಡು ನಿಮಿಷ ಮೌನಾಚರಣೆ ನಡೆಸುವ ಮೂಲಕ ಸಂತಾಪ ಸೂಚಿಸಿದರು.
ಕವಿತಾ ಪ್ರಾರ್ಥಿಸಿದರು. ದೇವಿಂದ್ರಪ್ಪ ಕನ್ಯಾಕೋಳೂರ ಸ್ವಾಗತಿಸಿದರು. ಬಸವರಾಜ ಸಿನ್ನೂರ ನಿರೂಪಿಸಿದರು. ಸಂತೋಷ ಉದ್ಧಾರ ವಂದಿಸಿದರು.