ಹುಬ್ಬಳ್ಳಿ: ಬೀದರನ ಶಾಹೀನ ವಿಜ್ಞಾನ ಪದವಿ ಪೂರ್ವ ಕಾಲೇಜು ಸ್ಥಳೀಯ ಸನಾ ಶೈಕ್ಷಣಿಕ ಮತ್ತು ಸಾಮಾಜಿಕ ಸೇವಾ ಸಂಸ್ಥೆಯ ಸಹಭಾಗಿತ್ವದೊಂದಿಗೆ ನಗರದಲ್ಲಿ ಸಂಪೂರ್ಣ ಸೌಲಭ್ಯಗಳುಳ್ಳ ಶೈಕ್ಷಣಿಕ ಸಂಸ್ಥೆ ಪ್ರಾರಂಭಿಸಿದ್ದು, ಮೇ 3ರಂದು ಕಾರ್ಯಾರಂಭ ಮಾಡಲಿದೆ.
ಇದರಿಂದ ಹುಬ್ಬಳ್ಳಿ-ಧಾರವಾಡದ ಪದವಿ ಪೂರ್ವ ಶಿಕ್ಷಣ ಸಂಸ್ಥೆಗಳ ಇತಿಹಾಸದಲ್ಲಿಯೇ ನವ ಯುಗ ಪ್ರಾರಂಭವಾಗಲಿದೆ.
ಶಾಹೀನ ಪ್ರತಿಷ್ಠಿತ ಹಾಗೂ ಅತ್ಯಂತ ಯಶಸ್ವಿ ಶಿಕ್ಷಣ ಸಂಸ್ಥೆಯಾಗಿದ್ದು, ಈ ಸಂಸ್ಥೆಯಿಂದ ಅತ್ಯಂತ ಹೆಚ್ಚು ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಸರಕಾರಿ ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶ ಪಡೆದು ಪ್ರತಿಭೆ ಮತ್ತು ಸಂಸ್ಕೃತಿಗೆ ಹೊಸ ಮುನ್ನುಡಿ ಬರೆದಿದ್ದಾರೆ.
ಸಂಸ್ಥೆ ಸುಮಾರು ಎರಡು ಎಕರೆಗಳಷ್ಟು ವಿಶಾಲವಾದ ಕ್ಯಾಂಪಸ್ ಹೊಂದಿದ್ದು, ಅಂದಾಜು 60ಸಾವಿರ ಚದುರ ಅಡಿಗಳ ಅತ್ಯಾಧುನಿಕ ಮತ್ತು ಸುಂದರ ವಿನ್ಯಾಸದ ಕಟ್ಟಡ ಹೊಂದಿದೆ. ಶಾಹೀನ ಸಂಸ್ಥೆಯು ವಿದ್ಯಾರ್ಥಿ ಕೇಂದ್ರಿಕೃತ ಆಧುನಿಕ ಬೋಧನಾ ಪದ್ಧತಿ ಹಾಗೂ ನವೀನ ಶೈಲಿಗಳ ಅತ್ಯುತ್ತಮ ತಾಂತ್ರಿಕ ತಳಹದಿಯ ಹಿನ್ನೆಲೆ ಹೊಂದಿರುವ ಯಶಸ್ವಿ ಬೋಧನಾ ಕ್ರಮ ಪಾಲಿಸುತ್ತಿದೆ. ಹುಬ್ಬಳ್ಳಿಯ ಯಶಸ್ವಿ ಉದ್ಯಮಿ ಅಶ್ರಫ್ ಅಲಿ ಅವರ ನೇತೃತ್ವದಲ್ಲಿ ಸಂಸ್ಥೆಯು ಶಾಹೀನ ಸಂಪ್ರದಾಯದಂತೆ ವಿದ್ಯಾರ್ಥಿಗಳ ಏಕಾಗ್ರತೆಗೆ ಭಂಗವಾಗದಂತೆ ಮೊಬೈಲ್, ಆಟೋಮೊಬೈಲ್ ಹಾಗೂ ಕಂಠಪಾಠ, ಮನೆಪಾಠ ಮುಕ್ತ ವಾತಾವರಣದಲ್ಲಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದೆ. ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶಾಖೆ ಮತ್ತು ತರಗತಿಗಳನ್ನು ಏರ್ಪಡಿಸಲಾಗಿದೆ. ಬೋಧಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಕಾಲಕಾಲಕ್ಕೆ ಅವಶ್ಯಕ ಕೌಶಲಗಳೊಂದಿಗೆ ಅತ್ಯಂತ ನುರಿತ ಹಾಗೂ ಅನುಭವಿ ಪರಿಣಿತರಿಂದ ಆನ್‌ಲೈನ್ ತರಗತಿಗಳನ್ನು ನಡೆಸಲಾಗುತ್ತದೆ.
ಶಾಹೀನ ಸಂಸ್ಥೆಯು 1989ರಲ್ಲಿ ಪ್ರಾರಂಭವಾಗಿದ್ದು, ತನ್ನ ಅಮೋಘವಾದ ಸುದೀರ್ಘ 30 ವರ್ಷಗಳ ಸೇವೆಯ ಹಾದಿಯಲ್ಲಿ ಸಾವಿರಾರು ವಿದ್ಯಾರ್ಥಿಗಳ ಡಾಕ್ಟರ್ ಮತ್ತು ಇಂಜನಿಯರ್ ಆಗುವ ಕನಸುಗಳನ್ನು ನನಸಾಗಿಸಿದೆ. ಸಂಸ್ಥೆಯ 36 ಶಾಖೆಗಳು ದೇಶಾದ್ಯಂತ ಕಾರ್ಯನಿರ್ವಹಿಸುತ್ತಿದ್ದು, 12,000 ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. 2018ರ ಶೈಕ್ಷಣಿಕ ವರ್ಷದಲ್ಲೇ ಶಾಹೀನ ಸಂಸ್ಥೆಯಿಂದ 304 ವಿದ್ಯಾರ್ಥಿಗಳು ಮೆರಿಟ್ (ಪ್ರತಿಭಾಧಾರಿತ) ಆಧಾರದಲ್ಲಿ ನೀಟ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, ಅದರಲ್ಲಿ ವಿನೀತ ಮೇಗೂರ ರಾಜ್ಯಕ್ಕೆ 8ನೇ ರ್‍ಯಾಂಕ್ ಪಡೆದಿದ್ದು, ಸಂಸ್ಥೆಯ ಕೀರ್ತಿ ಹೆಚ್ಚಿಸಿದ್ದಾನೆಂದು ಪ್ರಕಟಣೆ ತಿಳಿಸಿದೆ.