ಶಹಾಪುರ: ಸಮಾಜದಲ್ಲಿ ಶಿಕ್ಷಕರದ್ದು ಬಹು ದೊಡ್ಡ ಪಾತ್ರವಿದೆ. ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾಗಿದೆ. ಅದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಪ್ರತಿಯೊಬ್ಬ ಶಿಕ್ಷಕರ ಮೇಲಿದೆ. ಶಿಕ್ಷಕರೆಂದರೆ ಪ್ರತಿಯೊಬ್ಬರಿಗೂ ಮಾದರಿ ವ್ಯಕ್ತಿಯಾಗಿರಬೇಕು. ವಿದ್ಯಾರ್ಥಿಗಳಿಗೆ ಆದರ್ಶರಾಗಿರಬೇಕು ಎಂದು ನ್ಯಾಯವಾದಿ ಬಸವಕುಮಾರ ಪಾಟೀಲ ತಿಳಿಸಿದರು.
ಸಮೀಪದ ಭೀಮರಾಯನ ಗುಡಿ ಕೃಷಿ ಮಹಾವಿದ್ಯಾಲಯ ಸಭಾಂಗಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಮತ್ತು ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಶಿಕ್ಷಕ ಎಂದರೆ ದೇಶದ ಸಾಮಾಜಿಕ ಬದುಕಿನ ಅಮೋಘ ಶಕ್ತಿ. ಶಿಕ್ಷಕರು ಪ್ರೇರಣಾ ಶಕ್ತಿಯಾಗಿದ್ದಾರೆ. ಮಕ್ಕಳಿಗೆ ಪಠ್ಯಾಭ್ಯಾಸಗಳೊಂದಿಗೆ ಸಾಮಾಜಿಕ ಚಿಂತನೆಗಳ ಮನವರಿಕೆ ಮಾಡಬೇಕು. ಬದುಕಿನ ರಹದಾರಿಗಳನ್ನು ಮನನ ಮಾಡಿಸಬೇಕು ಎಂದು ತಿಳಿಸಿದರು.
ಶಿಕ್ಷಕರ ವೃತ್ತಿ ಬಗ್ಗೆ ಕೀಳರಿಮೆ ಬೇಡ. ಓರ್ವ ವೈದ್ಯ ಬೆಳಗಾದರೆ ಓರ್ವ ರೋಗಿಗಳೊಡನೆ ಮಾತನಾಡಬೇಕಾಗುತ್ತದೆ. ಆದರೆ ಮಕ್ಕಳ ಜೊತೆ ಮಾತನಾಡುವ ಬಹು ದೊಡ್ಡ ಭಾಗ್ಯ ಶಿಕ್ಷಕರಿಗಿದೆ. ಶಿಕ್ಷಕ ಎಂದರೆ ಬರಿ ಓದು ಬರಹ ಕಲಿಸುವ ಯಂತ್ರವಲ್ಲ. ಸತ್ಯ, ನಿಷ್ಠೆ, ಗುಣ ಶೀಲ, ಕ್ರಿಯಾಶೀಲತೆ, ಚಿಂತನಾಶೀಲ ಸಮ ಸಂಸ್ಕೃತಿ ರಾಯಭಾರಿ ಸೇರಿದಂತೆ ಇತರೆ ಪ್ರಮುಖ ಗುಣಗಳನ್ನು ಹೊಂದಿದ ಚೈತನ್ಯ ಮೂರ್ತಿಯೇ ಶಿಕ್ಷಕ ಎಂಬುದು ಮರೆಯಬೇಡಿ ಎಂದರು.
ಮಕ್ಕಳಲ್ಲಿ ದೇಶ ಪ್ರೇಮ, ದೇಶದ ಪ್ರಗತಿ ದೇಶಕ್ಕಾಗಿ ನಾವೇನು ಮಾಡಬೇಕು ಎಂಬುದನ್ನು ಪ್ರಥಮ ಹಂತದಲ್ಲಿಯೇ ಮಕ್ಕಳಲ್ಲಿ ಅರಿವು ಮೂಡಿಸಬೇಕು. ಅಹಿಂಸೆ ಕುರಿತು ಬೋಧನೆ ಮಾಡಬೇಕು. ಅಹಿಂಸಾತ್ಮಕ ನಡೆ ಕಲಿಸಬೇಕು. ಶಿಕ್ಷಕನಾದವನು ನಿತ್ಯ ವಿದ್ಯಾರ್ಥಿಯಾಗಿರಬೇಕು. ಯಾವುದೇ ಬೋಧನೆ ಮಾಡುವ ಮೊದಲು ಕನಿಷ್ಠ ಎರಡು ಗಂಟೆ ಆ ಕುರಿತು ತಯ್ನಾರಿ ನಡೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಮಾರಂಭವನ್ನು ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಗಿರಿಜೆಮ್ಮ ಸದಾಶಿವಪ್ಪಗೌಡ ರೊಟ್ನಡಗಿ ಮಾತನಾಡಿ, ಗುರುವಿನ ಸ್ಥಾನ ಮಹತ್ವದಾಗಿದೆ. ಗುರು ಇಲ್ಲದೆ ಏನನ್ನು ಸಾಧಿಸಲು ಅಸಾಧ್ಯ ಎಂದರು.
ಪೌರಾಯುಕ್ತ ಬಸವರಾಜ ಶಿವಪೂಜೆ ಮತ್ತು ತಾಪಂ ಇಒ ಪಂಪಾಪತಿ ಹಿರೇಮಠ ಮಾತನಾಡಿದರು. ವೇದಿಕೆ ಮೇಲೆ ತಾಪಂ ಹಂಗಾಮಿ ಅಧ್ಯಕ್ಷೆ ಲಕ್ಷ್ಮೀ ನಾಗರಾಜ ಮಡ್ಡಿ, ಕ್ಷೇತ್ರ ಶಿಕ್ಷಣ ಅಧಿಕಾರಿ ಹಣಮಂತಪ್ಪ ನಾಟೇಕಾರ, ಬಿಸಿಯೂಟ ಸಹಾಯಕ ನಿರ್ದೇಶಕ ಬಿ.ಎಚ್. ಸೂರ್ಯವಂಶಿ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಯಪ್ಪಗೌಡ ಹುಡೇದ್, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪಂಪಣ್ಣಗೌಡ ಪಾಟೀಲ ಸೇರಿದಂತೆ ಭೀಮಣ್ಣಗೌಡ
ತಳೇವಾಡ, ಬಿಆರ್‌ಸಿ ರೇಣುಕಾ ಪಾಟೀಲ, ಬಸ್ಸಮ್ಮ ಪಾಟೀಲ ಇದ್ದರು.
ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಅಶೋಕ ಚೌದ್ರಿ ಇತರರಿಗೆ ಸನ್ಮಾನಿಸಲಾಯಿತು. ಶಿಕ್ಷಕ ಬಸವರಾಜ ಯಾಳಗಿ ಪ್ರಾಸ್ತಿವಿಕವಾಗಿ ಮಾತನಾಡಿದರು. ಶಿಕ್ಷಕ ಪ್ರಶಾಂತ ಯಾಳಗಿ ನಿರೂಪಿಸಿ, ವಂದಿಸಿದರು.