ಶಹಾಪುರ: ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ಶ್ರದ್ಧೆ, ಪರಿಶ್ರಮ ಮೈಗೂಡಿಸಿಕೊಂಡಾಗ ನಿಮ್ಮಲ್ಲಿರುವ ಸೂಪ್ತ ಪ್ರತಿಭೆ ಹೊರ ಹೊಮ್ಮುತ್ತದೆ. ಸಮಯ ಅತ್ಯಮೂಲ್ಯ, ಅದನ್ನು ಪ್ರತಿಯೊಬ್ಬರು ಸದ್ಬಳಕೆ ಮಾಡಿಕೊಂಡರೆ ಸಾಧನೆ ಹಾದಿಯಲ್ಲಿ ಸಾರ್ಥಕ ಪಡೆದುಕೊಳ್ಳಬಹುದು ಎಂದು ಹಿರಿಯ ಮಕ್ಕಳ ಸಾಹಿತಿ, ಕೇಂದ್ರ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಚಂದ್ರಕಾಂತ ಕರದಳ್ಳಿ ಹೇಳಿದರು.
ನಗರದ ಕೊಲ್ಲೂರ ಟಾವರದಲ್ಲಿರುವ ಟರ್ನಿಂಗ್ ಪಾಯಿಂಟ್ ಕಂಪ್ಯೂಟರ್ ಕಿಯೋನಿಕ್ಸ್ ಫ್ರಾಂಚೈಸಿ ಕೇಂದ್ರದಲ್ಲಿ ಸಂಧ್ಯಾ ಸಾಹಿತ್ಯ ವೇದಿಕೆ ಆಯೋಜಿಸಿದ್ದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಯುವಕ, ಯುವತಿಯರು ಪ್ರಸ್ತುತ ವ್ಯವಸ್ಥೆಯಲ್ಲಿ ಮೊಬೈಲ್ನಿಂದ ಅಂತರ ಕಾಪಾಡಿಕೊಂಡು ಉತ್ತಮ ಕೃತಿಗಳನ್ನು ಓದುವುದು ಹವ್ಯಾಸ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಅತಿಥಿಯಾಗಿ ಆಗಮಿಸಿದ ಮಾಜಿ ಕಸಾಪ ಅಧ್ಯಕ್ಷ ಗುರುಬಸ್ಸಯ್ಯ ಗದ್ದುಗೆ ಮಾತನಾಡಿ, ಕರದಳ್ಳಿ ಅವರ ಒಡನಾಟ, ಸಾಹಿತ್ಯದ ಸಾಂಗತ್ಯವನ್ನು ಬಿಚ್ಚಿಟ್ಟರು.
ಅಧ್ಯಕ್ಷತೆಯನ್ನು ಹಿರಿಯ ರಂಗಕರ್ಮಿ, ಡಾ| ಗುಬ್ಬಿವೀರಣ್ಣ ಪ್ರಶಸ್ತಿ ಪುರಸ್ಕೃತ ಎಲ್.ಬಿ.ಕೆ. ಆಲ್ದಾಳ ವಹಿಸಿದ್ದರು. ಗುರಲಿಂಗಪ್ಪ ಸರಶೆಟ್ಟಿ, ಮಲ್ಲಣ್ಣ ದೇಸಾಯಿ, ಸುನೀತಾ ಹಿರೇಮಠ, ರುದ್ರಪ್ಪ ಎಸ್. ತಳವಾರ, ವಿದ್ಯಾರ್ಥಿ- ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ರವಿ ಹಿರೇಮಠ ಸ್ವಾಗತಿಸಿದರು, ರಾಜೇಶ್ವರಿ ಗುಡಿ ಅತಿಥಿಗಳ ಪರಿಚಯ ಮಾಡಿದರು. ಜಯಶ್ರೀ ಮೇಲಿನಮಠ ನಿರೂಪಿಸಿದರು. ಕೆ.ಕೆ. ಜಾಹಗೀರದಾರ ವಂದಿಸಿದರು.