Advertisement

ಜೋಡು ಪಲ್ಲಕ್ಕಿ ಉತ್ಸವ: ಶಹಾಪುರ ಸಿಂಗಾರ

12:24 PM Jan 15, 2020 | Naveen |

ಶಹಾಪುರ: ಸಂಕ್ರಾಂತಿ ಸಂಭ್ರಮ ಜೋಡು ಪಲ್ಲಕ್ಕಿ ಉತ್ಸವಕ್ಕೆ ನಗರದಲ್ಲಿ ಭಾರಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಭೀಮರಾಯನ ಗುಡಿ ಬಲಭೀಮೇಶ್ವರ ಮತ್ತು ದಿಗ್ಗಿ ಸಂಗಮೇಶ್ವರ ಪಲ್ಲಕ್ಕಿಗಳ ಅದ್ಧೂರಿ ಮೆರವಣಿಗೆಗೆ ನಗರದೆಲ್ಲಡೆ ಸ್ವಾಗತ ಕಮಾನ ಸೇರಿದಂತೆ ಹನುಮಾನ್‌ ಕಟೌಟ್‌ ಕಟ್ಟಲಾಗಿದೆ.

Advertisement

ಪಲ್ಲಕ್ಕಿ ಸಾಗುವ ಮೆರವಣಿಗೆ ಮಾರ್ಗ ಉದ್ದಕ್ಕೂ ಭಗವಾ ಧ್ವಜಗಳು ಸೇರಿದಂತೆ ವಿದ್ಯುತ್‌ ದೀಪಗಳ ಅಲಂಕಾರ ಮಾಡಲಾಗಿದೆ. ಎಲ್ಲಡೆ ಮಕರ ಸಂಕ್ರಾಂತಿ ಶುಭಾಶಯಗಳು ಬ್ಯಾನರ್‌ ರಾರಾಜಿಸುತ್ತಿವೆ. ಈ ಬಾರಿಯೂ ಗಂಗಾ ನಗರದ ಯುವಕರ ತಂಡ ಬಸವೇಶ್ವರ ವೃತ್ತದಲ್ಲಿ ಬಂಗಾರ ಬಣ್ಣದ ಸ್ವಾಗತ ಕಮಾನ್‌ ನಿರ್ಮಿಸಿದೆ. ಅದು ನಗರದ ಸೌಂದರ್ಯ ಇನ್ನಷ್ಟು ಹೆಚ್ಚಿಸಿದೆ. ಅಲ್ಲದೆ ಹಬ್ಬದ ಕಳೆ ಹೆಚ್ಚುವಂತೆ ಮಾಡಿದೆ. ನಗರದಲ್ಲಿ ಕೇಸರಿ ಧ್ವಜಗಳು, ಹಬ್ಬದ ಶುಭಾಶಯಗಳು ತಿಳಿಸುವ ಬ್ಯಾನರ್‌ ರಾರಾಜಿಸುತ್ತಿವೆ.

ಪಲ್ಲಕ್ಕಿ ಮೆರವಣಿಗೆ ಪ್ರತಿ ವರ್ಷ ಜ. 14ರಂದು ನಡೆಯುತ್ತಿತ್ತು. ಆದರೆ ಈ ಬಾರಿ
ಜ. 15 ನಡೆಯಲಿದೆ. ಬುಧವಾರ ಬೆಳಗ್ಗೆ ಪುರ ಪ್ರವೇಶಿಸುವ ದಿಗ್ಗಿ ಸಂಗಮನಾಥ ಮತ್ತು ಭೀಮರಾಯನಗುಡಿ ಬಲಭೀಮೇಶ್ವರರ ಉತ್ಸವ ಮೂರ್ತಿ ಹೊತ್ತ ಪಲ್ಲಕ್ಕಿಗಳು ನಗರದ ದಿಗ್ಗಿ ಅಗಸಿ ಮಾರ್ಗದ ಮೂಲಕ ಗಾಂಧಿಚೌಕ್‌, ಮೋಚಿಗಡ್ಡಾದಿಂದ ಹಳಿಸಗರ, ಮಡ್ನಾಳ ಮಾರ್ಗ ಹುರಸಗುಂಡಿಗಿ ಭೀಮಾ ನದಿ ತಲುಪಲಿವೆ.

ಭೀಮಾನದಿ ತಲುಪಿದ ನಂತರ ಅಲ್ಲಿ ಗಂಗಾ ಸ್ನಾನ ನೆರವೇರಲಿದೆ. ನಂತರ ಧಾರ್ಮಿಕ ವಿಧಿ  ವಿಧಾನದಂತೆ ಪೂಜೆ ಪುನಸ್ಕಾರ ನಡೆಯಲಿದೆ. ಮತ್ತೆ ಮರಳಿ ಮೂಲ ಸ್ಥಾನಗಳಿಗೆ ತೆರಳುವಾಗ ನಗರದ ಪ್ರಮುಖ ಬೀದಿಗಳ ಮೂಲಕ ಅದ್ಧೂರಿ ಮೆರವಣಿಗೆ ನಡೆಯಲಿದೆ.

ಆ ಕಾರಣಕ್ಕೆ ನಗರದ ಭಕ್ತರು ಗಂಗಾ ನಗರ, ದಿಗ್ಗಿ ಬೇಸ್‌ ಮತ್ತು ಹಳಿಸಗರ ಭಾಗದಲ್ಲಿ ಸ್ವಾಗತ ಕಮಾನಗಳು ಬ್ಯಾನರ್‌, ಸೇರಿದಂತೆ ಕೇಸರಿ ಧ್ವಜಗಳು, ಪರಾರಿಗಳನ್ನು ಕಟ್ಟಿದ್ದು, ಎರಡು ಪಲ್ಲಕ್ಕಿಗಳನ್ನು ಭಕ್ತಿ ಭಾವದಿಂದ ಬರಮಾಡಿಕೊಳ್ಳುತ್ತಾರೆ.

Advertisement

ಮಲ್ಲಿಕಾರ್ಜುನ ಮುದ್ನೂರ

Advertisement

Udayavani is now on Telegram. Click here to join our channel and stay updated with the latest news.

Next