Advertisement

ಮುಡಬೂಳ ಕೆರೆ ಹೂಳೆತ್ತುವ ಕಾರ್ಯಕ್ಕೆ ರೈತರೇ ಶಕ್ತಿ

11:38 AM Apr 10, 2019 | Naveen |

ಶಹಾಪುರ: ಜಿಲ್ಲೆಯಲ್ಲಿ ತಿಂಗಳ ಹಿಂದೆ ಚಾಲನೆ ನೀಡಲಾಗಿದ್ದ ನಮ್ಮೂರು ನಮ್ಮ ಕೆರೆ ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆಯಡಿ ಜಿಲ್ಲೆಯ 51 ಕೆರೆಗಳ ಹೂಳೆತ್ತುವ ಯೋಜನೆಯಲ್ಲಿ ಮಾವಿನಕೆರೆ
ಹೂಳೆತ್ತುವ ಕಾರ್ಯ ಸ್ಥಗಿತವಾಗಿರುವುದು ಒಂದೆಡೆಯಾದರೆ, ರೈತರ ಸಹಭಾಗಿತ್ವದಲ್ಲಿ ಇದೇ ತಾಲೂಕಿನ ಮುಡಬೂಳ ಗ್ರಾಮದ ಕೆರೆ ಯಶಸ್ಸಿನತ್ತ ಸಾಗುತ್ತಿರುವುದು ಇನ್ನೊಂದೆಡೆ.

Advertisement

ಅಂದಾಜು 42 ಎಕರೆ ವಿಸ್ತೀರ್ಣದ ಕೆರೆ ಹೂಳೆತ್ತಲು ಸರ್ಕಾರದಿಂದ ನಯಾ ಪೈಸೆ ಅನುದಾನವಿಲ್ಲ. ಸ್ವಯಂ ಪ್ರೇರಣೆಯಿಂದ ಇಲ್ಲಿನ
ರೈತರು ಕೆರೆ ಹೂಳೆತ್ತಲು ಮುಂದೆ ಬಂದಿದ್ದಾರೆ. ಕಳೆದ 15 ದಿನದಿಂದ ಹೂಳೆತ್ತುವ ಕಾರ್ಯದಲ್ಲಿ ರೈತರು ತೊಡಗಿದ್ದಾರೆ. ನಿತ್ಯ 5 ಜೆಸಿಬಿ, 20 ಟಿಪ್ಪರ್‌, 60 ಟ್ರ್ಯಾಕ್ಟರ್‌ಗಳು ಕೆಲಸದಲ್ಲಿ ತೊಡಗಿವೆ.

ಒಂದು ಟ್ರ್ಯಾಕ್ಟರ್‌ ಹೂಳು ತುಂಬಲು 70 ರೂ. ತೆಗೆದುಕೊಂಡರೆ, ಒಂದು ಟಿಪ್ಪರ್‌ ಹೂಳು ತೆಗೆದುಕೊಂಡು ರೈತರ ಜಮೀನಿಗೆ ಹಾಕಲು 1200 ರೂ. ಪಡೆಯಲಾಗುತ್ತಿದೆ. ಒಟ್ಟು 8 ರಿಂದ 10 ಅಡಿ
ಆಳವಾಗಿ ಕೆರೆ ಕೊರೆದು ಹೂಳೆತ್ತಲಾಗುತ್ತಿದೆ. ಈ ಹೂಳು ಒಯ್ಯಲು ನೆರೆ ಗ್ರಾಮಸ್ಥರು ಉತ್ಸುಕರಾಗಿದ್ದಾರೆ. ಆದರೆ ಸ್ಥಳೀಯರು ಅಷ್ಟೊಂದು ಆಸಕ್ತಿ ತೋರುತ್ತಿಲ್ಲ ಎಂದು ಗ್ರಾಮದ ರೈತ ಅಶೋಕ
ಮಲ್ಲಾಬಾದಿ ತಿಳಿಸಿದ್ದಾರೆ.

ಡಿಸಿ-ಬಿಎಸ್‌ವೈ ಮೆಚ್ಚುಗೆ: ಕಳೆದೆರಡು ವರ್ಷದ ಹಿಂದೆ ಇದೇ ಗ್ರಾಮದಲ್ಲಿ ರೈತರು ಸಭೆ ನಡೆಸಿ ರೈತರ ಸಹಭಾಗಿತ್ವದಲ್ಲಿ ಕೆರೆ ಹೂಳೆತ್ತುವ ಮೂಲಕ ಮಾದರಿ ಕಾರ್ಯಕ್ಕೆ ಹೆಸರಾಗಿದ್ದರು. ಸತತ
ಒಂದು ತಿಂಗಳ ಕಾಲ ಹೂಳೆತ್ತಲಾಗಿತ್ತು. ಆಗಿನ ಜಿಲ್ಲಾಧಿಕಾರಿ ಮನೋಜ ಜೈನ್‌ ಸ್ಥಳಕ್ಕೆ ಭೇಟಿ ನೀಡಿ ರೈತರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ ನೀಡಿ ರೈತರ ಸಾಧನೆಗೆ ಪ್ರೋತ್ಸಾಹಿಸಿದ್ದರು.

ಆಗ ರೈತರು ಸರ್ಕಾರದಿಂದ ನಯಾಪೈಸೆ ಬೇಕಾಗಿಲ್ಲ ಎಂದಿದ್ದರು. ಈಗ ಮತ್ತೆ ಕೆರೆ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಈ ಮೊದಲು ಹೂಳೆತ್ತಿದ್ದಾಗ ಸ್ಥಳೀಯರು ಕಪ್ಪು ಮಿಶ್ರಿತ ಫಲವತ್ತಾದ ಹೂಳನ್ನು ರೈತರು ಜಮೀನಿಗೆ ಹಾಕಿದ್ದರು. ಅದರಿಂದ ಇಳುವರಿ ಕೂಡ ಹೆಚ್ಚು ಬಂದಿತ್ತು. ಹೀಗಾಗಿ ರೈತರು ಹೂಳು ಒಯ್ಯಲು ಆಸಕ್ತಿ ತೋರುತ್ತಿದ್ದಾರೆ ಎನ್ನಲಾಗಿದೆ.

Advertisement

ಚರಂಡಿ ನೀರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಿ: ಬರುವ ದಿನದಲ್ಲಿ ಮುಡಬೂಳ ಕೆರೆ ಸುತ್ತಲು ಗಡಿ ಗುರುತು ಹಾಕಬೇಕಿದೆ. ಸುತ್ತಲು ಗಿಡ-ಮರ ಬೆಳೆಸುವ ಮೂಲಕ ಅರಣ್ಯೀಕರಣಕ್ಕೆ ಒತ್ತು ನೀಡಬೇಕು. ಗ್ರಾಮದ ಚರಂಡಿ ನೀರು ಕೆರೆಯಲ್ಲಿ ಸಂಗ್ರಹವಾಗದಂತೆ ತಡೆಯಬೇಕಿದೆ. ಚರಂಡಿ ನೀರು ಸಾಗಿಸಲು ಪ್ರತ್ಯೇಕ ವ್ಯವಸ್ಥೆ ಮಾಡಬೇಕು ಎಂದು ಪ್ರಜ್ಞಾವಂತ ನಾಗರಿಕರು ಮನವಿ ಮಾಡಿದ್ದಾರೆ. ನಮ್ಮೂರಿನ ರೈತರ ಮಾದರಿ ಕೆಲಸ ಉಳಿದ ಗ್ರಾಮಸ್ಥರಿಗೆ ಪ್ರೇರಣೆಯಾಗಲಿ ಎಂದು ಅವರು ತಿಳಿಸಿದ್ದಾರೆ.

ರೈತರ ಕಾರ್ಯಕ್ಕೆ ಪ್ರೋತ್ಸಾಹ ಅಗತ್ಯ. ಇತ್ತೀಚೆಗೆ ಜಿಲ್ಲಾಡಳಿತ ನಮ್ಮೂರು ನಮ್ಮ ಕೆರೆ ಯೋಜನೆಯಡಿ 51 ಕೆರೆ ಹೂಳೆತ್ತಲು
ಚಾಲನೆ ನೀಡಿತ್ತು. ಆದರೆ ಜಿಲ್ಲಾಡಳಿತ ಸಮರ್ಪಕ ಜಾಗೃತಿ ಹಾಗೂ ರೈತರ ನಿರಾಸಕ್ತಿಯಿಂದ ಮಾವಿನಕೆರೆ ಹೂಳೆತ್ತುವ ಕಾರ್ಯ ಸ್ಥಗಿತಗೊಂಡಿದ್ದು, ಕೂಡಲೇ ಜಾಗೃತಿ ಕಾರ್ಯ ಕೈಗೊಂಡು ಯೋಜನೆಗೆ ಮರು ಜೀವ ನೀಡಬೇಕಿದೆ.
ಭಾಸ್ಕರರಾವ್‌ ಮುಡಬೂಳ,
ರೈತ ಮುಖಂಡ

ಮಲ್ಲಿಕಾರ್ಜುನ ಮುದ್ನೂರ

Advertisement

Udayavani is now on Telegram. Click here to join our channel and stay updated with the latest news.

Next